ಇಂಗ್ಲೆಂಡ್ ತಂಡಕ್ಕೆ ಟಂಗ್: ಬೆಟ್‌ನಿಂದ 51 ಲಕ್ಷ ಗೆದ್ದ ಇಂಗ್ಲೆಂಡ್‌ನ ವ್ಯಕ್ತಿ!
ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ ಜೋಶ್ ಟಂಗ್
ಜೋಶ್ ಟಂಗ್ ಪರ ಬೆಟ್ ಕಟ್ಟಿದ ವ್ಯಕ್ತಿಗೆ ಜಾಕ್‌ಪಾಟ್
14 ವರ್ಷದ ಹಿಂದೆ ಕಟ್ಟಿದ್ದ ಬೆಟ್ ಮೂಲಕ ಬರೋಬ್ಬರಿ 50,000 ಪೌಂಡ್ ಹಣ
ಲಂಡನ್(ಜೂ.02): ಐರ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಮೂಲಕ ಇಂಗ್ಲೆಂಡ್ ತಂಡಕ್ಕೆ ಜೋಶ್ ಟಂಗ್ ಪಾದಾರ್ಪಣೆ ಮಾಡುವುದರೊಂದಿಗೆ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರ ಅದೃಷ್ಟ ಖುಲಾಯಿಸಿದ್ದು, 14 ವರ್ಷದ ಹಿಂದೆ ಕಟ್ಟಿದ್ದ ಬೆಟ್ ಮೂಲಕ ಬರೋಬ್ಬರಿ 50,000 ಪೌಂಡ್(51 ಲಕ್ಷ ರು.) ಬಂಪರ್ ಹಣ ಪಡೆಯಲಿದ್ದಾರೆ.
ಟಂಗ್ ಚಿಕ್ಕಂದಿನಿಂದಲೇ ಕ್ರಿಕೆಟ್ನಲ್ಲಿ ಮಿಂಚುತ್ತಿರುವುದನ್ನು ಗಮನಿಸಿದ್ದ ಟಂಗ್‌ರ ತಂದೆಯ ಸ್ನೇಹಿತ ಟಿಮ್ ಪೈಪರ್ ಎಂಬವರು, ಮುಂದೊಂದು ದಿನ ಟಂಗ್ ಇಂಗ್ಲೆಂಡ್ ಪರ ಟೆಸ್ಟ್ ಆಡುತ್ತಾರೆ ಎಂದು ಸ್ಥಳೀಯ ಬೆಟ್ಟಿಂಗ್ ಸಂಸ್ಥೆಯಲ್ಲಿ 500-1ರ ಅನುಪಾತ ಅಂದರೆ ಗೆದ್ದರೆ 100 ಪೌಂಡ್‌ನ 500ರಷ್ಟು, ಸೋತರೆ 100 ಪೌಂಡ್ ಬೆಟ್ ಕಟ್ಟಿದ್ದರು. ಈಗ ತಮ್ಮ 25ನೇ ವರ್ಷದಲ್ಲಿ ಟಂಗ್ ಇಂಗ್ಲೆಂಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಹೀಗಾಗಿ ಅಂದು ನುಡಿದಿದ್ದ ಭವಿಷ್ಯದಿಂದಾಗಿ ಪೈಪರ್‌ಗೆ ಇಂದಿನ ಮೌಲ್ಯದಲ್ಲಿ 51 ಲಕ್ಷ ರುಪಾಯಿ ಸಿಕ್ಕಿದೆ.
ಇಂಗ್ಲೆಂಡ್‌ಗೆ ಆರಂಭಿಕ ಮೇಲುಗೈ: ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ಲಾರ್ಡ್ಸ್ ಮೈದಾನ ಆತಿಥ್ಯ ವಹಿಸಿದ್ದು, ಮೊದಲ ದಿನವೇ ಐರ್ಲೆಂಡ್ ಮೇಲೆ ಇಂಗ್ಲೆಂಡ್ ತಂಡವು ಸವಾರಿ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಐರ್ಲೆಂಡ್ ತಂಡವು ವೇಗಿ ಸ್ಟುವರ್ಟ್ ಬ್ರಾಡ್(51-5) ಹಾಗೂ ಸ್ಪಿನ್ನರ್ ಜಾಕ್ ಲೀಚ್(36/3) ಮಾರಕ ದಾಳಿಗೆ ತತ್ತರಿಸಿ ಕೇವಲ 172 ರನ್‌ಗಳಿಗೆ ಸರ್ವಪತನ ಕಂಡಿತು.
ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಎಂದಿನಂತೆ ಸ್ಪೋಟಕ ಆರಂಭವನ್ನೇ ಪಡೆದಿದೆ. ಮೊದಲ ವಿಕೆಟ್‌ಕೆ ಜಾಕ್ ಕ್ರಾವ್ಲಿ ಹಾಗೂ ಬೆನ್ ಡುಕೆಟ್ 109 ರನ್‌ಗಳ ಜತೆಯಾಟ ನಿಭಾಯಿಸಿತು. ಜಾಕ್ ಕ್ರಾವ್ಲಿ 45 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 56 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಬ್ಯಾಟರ್ ಬೆನ್ ಡುಕೆಟ್(60*) ಹಾಗೂ ಓಲಿ ಪೋಪ್(29*) ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು 152 ರನ್ ಬಾರಿಸಿದ್ದು, ಇನ್ನು ಕೇವಲ 20 ರನ್ ಹಿನ್ನಡೆಯಲ್ಲಿದೆ.
ಐಪಿಎಲ್ ಯಶಸ್ಸು: ಲಂಕಾ ಏಕದಿನ ತಂಡಕ್ಕೆ ಪತಿರನ
ಹಂಬನ್ತೋಟ(ಜೂ.02): ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಮಿಂಚಿದ್ದ ಚೆನ್ನೈ ತಂಡದ ವೇಗಿ ಮಥೀಶ ಪತಿರನ, ಶ್ರೀಲಂಕಾ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶುಕ್ರವಾರದಿಂದ ಆರಂಭಗೊಳ್ಳಲಿರುವ ಆಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ.
ಇದೇ ತಿಂಗಳು 18ರಿಂದ ಜಿಂಬಾಬ್ವೆಯಲ್ಲಿ ಆರಂಭಗೊಳ್ಳಲಿರುವ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಪತಿರನ ಮಹತ್ವದ ಪಾತ್ರ ವಹಿಸಲಿದ್ದಾರೆ ಎನ್ನುವ ವಿಶ್ವಾಸವನ್ನು ಲಂಕಾ ತಂಡದ ಆಡಳಿತ ವ್ಯಕ್ತಪಡಿಸಿದೆ.
ಆಸ್ಟ್ರೇಲಿಯಾಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್..!
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಥೀಶ ಪತಿರನ, ಚೆನ್ನೈ ಸೂಪರ್ ಕಿಂಗ್ಸ್ ಪರ 12 ಪಂದ್ಯಗಳನ್ನಾಡಿ 19.53ರ ಸರಾಸರಿಯಲ್ಲಿ 19 ವಿಕೆಟ್ ಕಬಳಿಸಿದ್ದರು. ಡೆತ್ ಓವರ್‌ನಲ್ಲಿ ಪರಿಣಾಮಕಾರಿ ದಾಳಿ ನಡೆಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.
ಮುಂಬೈನಲ್ಲಿ ಧೋನಿಗೆ ಯಶಸ್ವಿ ಮಂಡಿ ಶಸ್ತ್ರಚಿಕಿತ್ಸೆ
ಮುಂಬೈ: ಎಡಗಾಲಿನ ಮಂಡಿ ನೋವಿನ ನಡುವೆಯೇ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ ಎಂ.ಎಸ್.ಧೋನಿ, ಗುರುವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಒಂದೆರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು, ಕೆಲ ತಿಂಗಳುಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಬೇಕಿದೆ. ಆ ಬಳಿಕವಷ್ಟೇ ಅವರು ಮುಂದಿನ ಐಪಿಎಲ್‌ನಲ್ಲಿ ಆಡಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸಲಿದ್ದಾರೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ. ಧೋನಿ ಗುರುವಾರ ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದು ಆಸ್ಪತ್ರೆಗೆ ಆಗಮಿಸಿದ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.