* ಆ್ಯಷಸ್ ಸರಣಿಯಲ್ಲಿ ಭಾಗವಹಿಸಲು 10 ಇಂಗ್ಲೆಂಡ್ ಆಟಗಾರರು ಹಿಂದೇಟು?* ಕಠಿಣ ಬಯೋ ಬಬಲ್ ಅನುಭವಿಸಲು ಇಂಗ್ಲೆಂಡ್‌ ಕ್ರಿಕೆಟಿಗರು ನಕಾರ* ಡಿಸೆಂಬರ್ 08ರಿಂದ ಜನವರಿ 18ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ಆ್ಯಷಸ್ ಸರಣಿ

ಲಂಡನ್(ಸೆ.17)‌: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರರು ಮುಂಬರಲಿರುವ ಆ್ಯಷಸ್ ಸರಣಿಯನ್ನು ಬಹಿಷ್ಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇಂಗ್ಲೆಂಡ್‌ನ 10 ಕ್ರಿಕೆಟಿಗರು ಆ್ಯಷಸ್ ಸರಣಿಯಿಂದ ಹಿಂದೆ ಸರಿಯಲು ಆಲೋಚಿಸಿದ್ದಾರೆ ಎಂದು ವರದಿಯಾಗಿದೆ

ಕಠಿಣ ಕ್ವಾರಂಟೈನ್‌ ನಿಯಮ ಇರುವ ಕಾರಣ ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ ಆಡಲಿರುವ ಆಟಗಾರರು ಸುಮಾರು 4 ತಿಂಗಳ ಕಾಲ ಬಯೋ ಬಬಲ್‌ನಲ್ಲಿ ಇರಬೇಕು. ಹೀಗೆ ಸುದೀರ್ಘ ಕಾಲ ಹೋಟೆಲ್‌ ರೂಮ್‌ನಲ್ಲೇ ಕಾಲ ಕಳೆಯಲು ಇಷ್ಟವಿಲ್ಲದ ಕಾರಣ ಕೆಲ ಆಟಗಾರರು ಸರಣಿಯಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಟೀಂ ಇಂಡಿಯಾದ ನ್ಯೂಜಿಲೆಂಡ್‌ ಪ್ರವಾಸ 2022ಕ್ಕೆ ಮುಂದೂಡಿಕೆ..!

ಆದಾಗ್ಯೂ ಇಂಗ್ಲೆಂಡ್‌ ಅಂಡ್‌ ವೇಲ್ಸ್‌ ಕ್ರಿಕೆಟ್‌ ಬೋರ್ಡ್‌(ಇಸಿಬಿ) ಸರಣಿಯನ್ನು ಮುಂದೂಡುವ ಬಗ್ಗೆ ಚಿಂತನೆ ನಡೆಸಿಲ್ಲ. ಈ ಕುರಿತು ಹಿರಿಯ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಜತೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. 5 ಪಂದ್ಯಗಳ ಆ್ಯಷಸ್ ಸರಣಿಯು ಮುಂಬರುವ ಡಿಸೆಂಬರ್ 08ರಿಂದ ಜನವರಿ 18ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

ಇಂಗ್ಲೆಂಡ್‌ನ ಕೆಲ ಆಟಗಾರರು ಈಗಾಗಲೇ ಯುಎಇ ಚರಣದ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಬಯೋ ಬಬಲ್ ಪ್ರವೇಶಿಸಿದ್ದಾರೆ. ಐಪಿಎಲ್ ಮುಕ್ತಾಯದ ಬಳಿಕ ಅಕ್ಟೋಬರ್ 17ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತಮ್ಮ ತಂಡದ ಬಯೋ ಬಬಲ್‌ನೊಳಗೆ ಎಂಟ್ರಿ ಪಡೆಯಲಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ದೀರ್ಘಕಾಲದ ಆ್ಯಷಸ್ ಸರಣಿಯಲ್ಲಿ ಪಾಲ್ಗೊಳ್ಳಲು ಕೆಲವು ಇಂಗ್ಲೆಂಡ್ ಆಟಗಾರರು ಹಿಂಜರಿಯುತ್ತಿದ್ದಾರೆ ಎಂದು ವರದಿಯಾಗಿದೆ.