ಮನೆಯಲ್ಲಿ IPL ನೋಡುತ್ತಿರುವುದಕ್ಕೆ ಹತಾಶೆ ಎನಿಸುತ್ತಿದೆ: ಸ್ಯಾಮ್ ಕರ್ರನ್
* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೊರಗುಳಿದಿರುವ ಸ್ಯಾಮ್ ಕರ್ರನ್
* ಫಿಟ್ನೆಸ್ ಸಮಸ್ಯೆಯಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕರ್ರನ್ ಪಾಲ್ಗೊಳ್ಳುತ್ತಿಲ್ಲ
* ಮನೆಯಿಂದಲೇ ಐಪಿಎಲ್ ವೀಕ್ಷಿಸುತ್ತಿದ್ದಾರೆ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್
ಲಂಡನ್(ಮಾ.31): ಇಂಗ್ಲೆಂಡ್‌ನ ಯುವ ಪ್ರತಿಭಾನ್ವಿತ ಆಲ್ರೌಂಡರ್ ಸ್ಯಾಮ್ ಕರ್ರನ್ (Sam Curran), 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಸ್ಟಾರ್ ಆಗಿ ಹೊರಹೊಮ್ಮಿದ್ದ 23 ವರ್ಷದ ಸ್ಯಾಮ್ ಕರ್ರನ್, ಫಿಟ್ನೆಸ್ ಸಮಸ್ಯೆಯಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಯುಎಇನಲ್ಲಿ ನಡೆದ 14ನೇ ಆವೃತ್ತಿಯ ಎರಡನೇ ಚರಣದ ಐಪಿಎಲ್ (IPL) ವೇಳೆ ಸ್ಯಾಮ್ ಕರ್ರನ್ ಹಿಮ್ಮಡಿ ಗಾಯಕ್ಕೆ ಒಳಗಾಗಿದ್ದರು.
ಇದೇ ಕಾರಣಕ್ಕಾಗಿಯೇ ಸ್ಯಾಮ್ ಕರನ್, ಯುಎಇನಲ್ಲಿಯೇ ನಡೆದ 2021ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2021) ಹಾಗೂ 2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯಿಂದಲೂ (Ashes Test Series) ಹೊರಗುಳಿದಿದ್ದರು. ಇನ್ನು ಸ್ಯಾಮ್ ಕರ್ರನ್ 2022ರ ಐಪಿಎಲ್ ಟೂರ್ನಿಯ ವೇಳೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಯ (England Cricket Board) ವೈದ್ಯಕೀಯ ಸಿಬ್ಬಂದಿಗಳು ಸ್ಯಾಮ್ ಕರ್ರನ್ ಅವರಿಗೆ ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸದಂತೆ ಸಲಹೆ ನೀಡಿದ್ದರು. ಹೀಗಾಗಿಯೇ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ ಎನಿಸಿರುವ ಐಪಿಎಲ್‌ನಲ್ಲಿ ಈ ಬಾರಿ ಸ್ಯಾಮ್ ಕರ್ರನ್ ಪಾಲ್ಗೊಳ್ಳುತ್ತಿಲ್ಲ
ನಾನು ಐಪಿಎಲ್‌ನಲ್ಲಿ ಪಾಲ್ಗೊಳ್ಳಲೇಬೇಕೆಂದಿದ್ದೆ:
ನಾನು ಈ ಬಾರಿ ಐಪಿಎಲ್‌ನಲ್ಲಿ ಪಾಲ್ಗೊಳ್ಳದಿರುವುದಕ್ಕೆ ನಿರಾಸೆಯಾಗುತ್ತಿದೆ. ಮನೆಯಲ್ಲಿ ಕುಳಿತು ಐಪಿಎಲ್ ವೀಕ್ಷಿಸುತ್ತಿರುವುದಕ್ಕೆ ನನಗೆ ಹತಾಶೆಯಾಗುತ್ತಿದೆ. ನಾನು ಐಪಿಎಲ್ ಹರಾಜಿನಲ್ಲಿ (IPL Auction) ಪಾಲ್ಗೊಳ್ಳಬೇಕೆಂದಿದ್ದೆ, ಆದರೆ ಅದು ಸಾಧ್ಯವಾಗಲಿಲ್ಲ. ನಾನೀಗ ಒಮ್ಮೆ ಹಿಂತಿರುಗಿ ನೋಡಿದರೆ, ಐಪಿಎಲ್ ಸ್ವಲ್ಪ ಬೇಗನೇ ಆರಂಭವಾಗಿಬಿಟ್ಟಿತೇನೋ ಎಂದೆನಿಸುತ್ತಿದೆ ಎಂದು ESPNcricinfo ವೆಬ್‌ಸೈಟ್‌ಗೆ ತಿಳಿಸಿದ್ದಾರೆ. ನಾನು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಆದಷ್ಟು ಬೇಗ ಕಮ್‌ಬ್ಯಾಕ್ ಮಾಡಬೇಕೆಂದಿದ್ದೇನೆ. ಆದರೆ ಗಾಯದ ಗುಣಮುಖರಾಗುವವರೆಗೂ ರಿಸ್ಕ್ ತೆಗೆದುಕೊಳ್ಳಬಾರದು ಎನ್ನುವ ಉದ್ದೇಶದಿಂದ ಸದ್ಯ ವಿಶ್ರಾಂತಿಯಲ್ಲಿದ್ದೇನೆ ಎಂದು ಸ್ಯಾಮ್ ಕರ್ರನ್ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ತಾವು ಮತ್ತೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿರುವುದಾಗಿ ಸ್ಯಾಮ್ ಕರ್ರನ್ ಹೇಳಿದ್ದಾರೆ.
IPL 2022 ಮೊದಲ ಜಯಕ್ಕೆ ಲಖನೌ ಸೂಪರ್ ಜೈಂಟ್ಸ್-ಚೆನ್ನೈ ಸೂಪರ್ ಕಿಂಗ್ಸ್ ಕಾತರ..!
ನಾನು ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದೇನೆ. ಯಾಕೆಂದರೆ ಐಪಿಎಲ್‌ನಲ್ಲಿ ಟಿ20 ಕ್ರಿಕೆಟ್ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದಾಗಿದೆ. ಈ ಟೂರ್ನಿಯುಲ್ಲಿ ನೀವು ಕ್ರಿಕೆಟನ್ನು ಉಸಿರಾಡುತ್ತೀರ. ಐಪಿಎಲ್‌ನಲ್ಲಿ ಹಲವಾರು ಕ್ರಿಕೆಟ್ ಸೂಪರ್‌ಸ್ಟಾರ್‌ಗಳ ಜತೆ ಬೆರೆಯಲು ಅವಕಾಶ ಸಿಗುತ್ತದೆ ಹಾಗೂ ಕ್ರಿಕೆಟ್ ಕುರಿತಂತೆ ಸಾಕಷ್ಟು ಮಾತುಕತೆ ನಡೆಸಲು ಉತ್ತಮ ಅವಕಾಶವನ್ನು ಐಪಿಎಲ್ ಕಲಿಸಿಕೊಟ್ಟಿದೆ ಎಂದು ಸ್ಯಾಮ್ ಕರ್ರನ್ ಹೇಳಿದ್ದಾರೆ
2019ರ ಐಪಿಎಲ್ ಹರಾಜಿನಲ್ಲಿ ಸ್ಯಾಮ್ ಕರ್ರನ್ ಅವರನ್ನು ಪಂಜಾಬ್ ಕಿಂಗ್ಸ್ (Punjab Kings) ಫ್ರಾಂಚೈಸಿಯು ಖರೀದಿಸಿತ್ತು. ಇದಾದ ಬಳಿಕ 2020ರ ಐಪಿಎಲ್ ಹರಾಜಿನಲ್ಲಿ ಕರ್ರನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಐಪಿಎಲ್‌ನಲ್ಲಿರುವ ಸ್ಯಾಮ್ ಕರ್ರನ್ ಇದುವರೆಗೂ 32 ಪಂದ್ಯಗಳನ್ನಾಡಿ 2 ಅರ್ಧಶತಕ ಸಹಿತ 337 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 31 ಇನಿಂಗ್ಸ್‌ಗಳಲ್ಲಿ ಒಮ್ಮೆ ಹ್ಯಾಟ್ರಿಕ್ ವಿಕೆಟ್ ಸಹಿತ 32 ಬಲಿ ಪಡೆದಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿರುವ ಸ್ಯಾಮ್ ಕರ್ರನ್ ಸದ್ಯ ಮನೆಯಲ್ಲಿಯೇ ಕುಳಿತು ಐಪಿಎಲ್ ಪಂದ್ಯಾಟಗಳನ್ನು ವೀಕ್ಷಿಸುತ್ತಿದ್ದಾರೆ.