ಜಸ್ಪ್ರೀತ್ ಬುಮ್ರಾ ಯಾರೆಂದ Barmy Army, ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ Bharat Army.!
* ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ಬರೆದ ಜಸ್ಪ್ರೀತ್ ಬುಮ್ರಾ
* ಸ್ಟುವರ್ಟ್ ಬ್ರಾಡ್ ಒಂದೇ ಓವರ್‌ನಲ್ಲಿ 29 ರನ್ ಚಚ್ಚಿದ ಬುಮ್ರಾ
* ಬುಮ್ರಾ ಕಾಲೆಳೆದಿದ್ದ ಬಾರ್ಮಿ ಆರ್ಮಿಗೆ ಖಡಕ್ ಉತ್ತರ ನೀಡಿದ ಭಾರತ್ ಆರ್ಮಿ
ಬರ್ಮಿಂಗ್‌ಹ್ಯಾಮ್(ಜು.03): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೆಸ್ಟ್ ತಂಡದ ನಾಯಕರಾದ ಮೊದಲ ಪಂದ್ಯದಲ್ಲಿಯೇ ಬುಮ್ರಾ ವಿಶ್ವದಾಖಲೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. ಅದು ಬೌಲಿಂಗ್‌ನಿಂದಲ್ಲ ಬದಲಾಗಿ ಬ್ಯಾಟಿಂದ. ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಬುಮ್ರಾ ಏಕಾಂಗಿಯಾಗಿ 29 ರನ್(ಒಟ್ಟಾರೆ 35 ರನ್) ಚಚ್ಚಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಹೌದು, ಇಲ್ಲಿನ ಎಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah), ಯಾರೂ ನಿರೀಕ್ಷೆ ಮಾಡದ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಒಂದು ಹಂತದಲ್ಲಿ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ಕ್ರಿಕೆಟ್ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (146) ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ(104) ಆಕರ್ಷಕ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಇನ್ನು 10ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹಂಗಾಮಿ ನಾಯಕ ಬುಮ್ರಾ, ವಿಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿದರು.
ಭಾರತ ಕ್ರಿಕೆಟ್ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವೇಗಿ ಸ್ಟುವರ್ಚ್ ಬ್ರಾಡ್ ಎಸೆದ ಓವರಲ್ಲಿ 29 ಸಿಡಿಸಿದ ಬೂಮ್ರಾ, ಬ್ರಿಯಾನ್ ಲಾರಾ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. 2003-04ರಲ್ಲಿ ದ.ಆಫ್ರಿಕಾದ ಸ್ಪಿನ್ನರ್ ರಾಬಿನ್ ಪೀಟರ್‌ಸನ್‌ರ ಓವರಲ್ಲಿ ಲಾರಾ 28 ರನ್ ಗಳಿಸಿದ್ದರು. 2013ರಲ್ಲಿ ಜೇಮ್ಸ್ ಆ್ಯಂಡರ್‌ಸನ್ ಓವರ್‌ನಲ್ಲಿ ಆಸ್ಪ್ರೇಲಿಯಾದ ಜಾರ್ಜ್ ಬೈಲಿ ಸಹ 28 ರನ್ ಸಿಡಿಸಿದ್ದರು. ಆದರೆ ಲಾರಾ ಹೆಚ್ಚು ಬೌಂಡರಿ ಬಾರಿಸಿದ್ದ ಕಾರಣ ವಿಶ್ವದಾಖಲೆ ಅವರ ಹೆಸರಿನಲ್ಲಿತ್ತು.
2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್‌ರಿಂದ ಓವರಲ್ಲಿ 6 ಸಿಕ್ಸರ್ ಚಚ್ಚಿಸಿಕೊಂಡಿದ್ದ ಬ್ರಾಡ್, ಇನ್ನಿಂಗ್ಸ್‌ನ 84ನೇ ಓವರಲ್ಲಿ 35 ರನ್ ಬಿಟ್ಟುಕೊಟ್ಟರು. ಜಸ್‌ಪ್ರೀತ್ ಬುಮ್ರಾ 4 ಬೌಂಡರಿ, 2 ಸಿಕ್ಸರ್ ಸಿಡಿಸಿದ್ದಲ್ಲದೇ 5 ವೈಡ್ ಮತ್ತು ಒಂದು ನೋಬಾಲ್ ಸಹ ಭಾರತದ ಖಾತೆಗೆ ಸೇರಿದವು.
ರಿಷಭ್ ಪಂತ್, ರವೀಂದ್ರ ಜಡೇಜಾ ಶತಕ ಹಾಗೂ ನಾಯಕ ಜಸ್ಪ್ರೀತ್ ಬುಮ್ರಾ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಎದುರು ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 416 ರನ್ ಬಾರಿಸಿ ಸರ್ವಪತನ ಕಂಡಿತು.
ಇನ್ನು ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾರತ ಕ್ರಿಕೆಟ್ ತಂಡವನ್ನು ಬೆಂಬಲಿಸುವ ಭಾರತ್ ಆರ್ಮಿ ಹಾಗೂ ಇಂಗ್ಲೆಂಡ್ ತಂಡವನ್ನು ಬೆಂಬಲಿಸುವ ಬಾರ್ಮಿ ಆರ್ಮಿ ನಡುವೆ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಎದುರಾಳಿ ತಂಡವನ್ನು ಟ್ರೋಲ್ ಹಾಗೂ ಮೀಮ್ಸ್ ಮಾಡುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಅದೇ ರೀತಿ ಈ ಬಾರಿಯ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದ ವೇಳೆಯಲ್ಲಿಯೂ ಈ ಬಿಸಿ-ಬಿಸಿ ಕಾಲೆಳೆಯುವ ಸಂಪ್ರದಾಯ ಮುಂದುವರೆದಿದೆ.
ಲಾರಾ, ಬೈಲಿ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ, ಒಂದೇ ಓವರ್‌ನಲ್ಲಿ 35 ರನ್!
ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಅಭ್ಯಾಸ ಪಂದ್ಯದ ವೇಳೆ ಇಂಗ್ಲೆಂಡ್ ಎದುರು ಬುಮ್ರಾ ಮಿಂಚಿನ ಬೌಲಿಂಗ್ ದಾಳಿಯ ಮೂಲಕ ಗಮನ ಸೆಳೆದಿದ್ದರು. ಈ ವೇಳೆ ಬಾರ್ಮಿ ಆರ್ಮಿಯು ಯಾರಿದು ಬುಮ್ರಾ ಎನ್ನುವ ಆಸಾಮಿ ಎಂದು ಟ್ವೀಟ್ ಮಾಡಿತ್ತು.
ಇದೀಗ ಇಂಗ್ಲೆಂಡ್ ಎದುರು ಸ್ಪೋಟಕ ಬ್ಯಾಟಿಂಗ್ ಮೂಲಕ ವಿಶ್ವದಾಖಲೆ ಬರೆದಿರುವ ಜಸ್‌ಪ್ರೀತ್ ಬುಮ್ರಾ ಅವರ ಫೋಟೋವನ್ನು ಭಾರತ್ ಆರ್ಮಿಯು ಟ್ವೀಟ್ ಮಾಡುವ ಮೂಲಕ ಬುಮ್ರಾ ಯಾರೆಂದು ಖಡಕ್ ಉತ್ತರ ನೀಡಿದೆ.
ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತಿದ್ದರೇ, ಮೈದಾನದ ಹೊರಗೆ ಭಾರತ್ ಆರ್ಮಿ ಹಾಗೂ ಬಾರ್ಮಿ ಕೂಡಾ ಒಬ್ಬರನ್ನೊಬ್ಬರು ಕಾಲೆಳೆಯುವ ಮೂಲಕ ಉಭಯ ತಂಡಗಳ ನಡುವಿನ ಕಾದಾಟಕ್ಕೆ ಮತ್ತಷ್ಟು ರೋಚಕತೆ ತಂದುಕೊಟ್ಟಿದ್ದಾರೆ.