ಮುಂದಿನ ತಿಂಗಳು ಭಾರತದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಹ್ಯಾರಿ ಬ್ರೂಕ್ ನಾಯಕತ್ವದ ಈ ತಂಡದಲ್ಲಿ ಆರ್‌ಸಿಬಿಯ ಮೂವರು ಆಟಗಾರರು ಸ್ಥಾನ ಪಡೆದಿದ್ದು, ಗಾಯದಿಂದ ಚೇತರಿಸಿಕೊಂಡ ಹಲವು ಪ್ರಮುಖ ಆಟಗಾರರು ಕಮ್‌ಬ್ಯಾಕ್ ಮಾಡಿದ್ದಾರೆ.

ಲಂಡನ್: ಭಾರತ ಕ್ರಿಕೆಟ್ ತಂಡವು ಮುಂದಿನ ತಿಂಗಳು, ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸದ ವೇಳೆಯಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ಎದುರು ಐದು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಜುಲೈ 01ರಿಂದ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಈ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು 17 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಭಾರತ ಎದುರಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಹ್ಯಾರಿ ಬ್ರೂಕ್ ನಾಯಕನಾಗಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಆರ್‌ಸಿಬಿ ತಂಡದ ಮೂವರು ಆಟಗಾರರಿಗೆ ಸ್ಥಾನ ಸಿಕ್ಕಿದೆ.

ಆರ್‌ಸಿಬಿ ಮೂವರು ಆಟಗಾರರಿಗೆ ಸ್ಥಾನ:

ಭಾರತ ಎದುರಿನ ಹೈವೋಲ್ಟೇಜ್ ಟಿ20 ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ಇದೀಗ ಆರ್‌ಸಿಬಿ ತಂಡದ ಮೂವರು ಸ್ಟಾರ್ ಆಟಗಾರರಿಗೆ ಸ್ಥಾನ ಸಿಕ್ಕಿದೆ. ಆರ್‌ಸಿಬಿ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್, ಇಂಗ್ಲೆಂಡ್ ತಂಡದ ಭವಿಷ್ಯದ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಜೇಕಬ್ ಬೆಥೆಲ್ ಹಾಗೂ ಜೋರ್ಡನ್ ಕಾಕ್ಸ್, ಭಾರತ ಎದುರಿನ ಟಿ20 ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೂವರು ಕ್ರಿಕೆಟಿಗರ ಕಮ್‌ಬ್ಯಾಕ್‌ನಿಂದ ಇಂಗ್ಲೆಂಡ್ ಮತ್ತಷ್ಟು ಬಲಿಷ್ಠ:

ಇನ್ನು ಭಾರತ ಎದುರಿನ ಟಿ20 ಸರಣಿಗೆ ಜೋರ್ಡನ್ ಕಾಕ್ಸ್‌, ಸೋನಿ ಬೇಕರ್ ಹಾಗೂ ಸಾಕಿಬ್ ಮೊಹಮೊದ್ ತಂಡ ಕೂಡಿಕೊಂಡಿದ್ದಾರೆ. ಈ ಮೂವರು ಕ್ರಿಕೆಟಿಗರು 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಇದಷ್ಟೇ ಅಲ್ಲದೇ 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಗಾಯಗೊಂಡಿದ್ದ ಜೇಕಬ್ ಬೆಥೆಲ್ ಹಾಗೂ ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲೇ ಗಾಯಗೊಂಡಿದ್ದ ಸ್ಯಾಮ್ ಕರ್ರನ್ ಕೂಡಾ ಇಂಗ್ಲೆಂಡ್ ತಂಡ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆಟಗಾರರ ಕಮ್‌ಬ್ಯಾಕ್‌ನಿಂದಾಗಿ ಇಂಗ್ಲೆಂಡ್ ತಂಡವು ಮತ್ತಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದೆ.

ಇದಷ್ಟೇ ಅಲ್ಲದೇ ಇಂಗ್ಲೆಂಡ್ ತಂಡದಲ್ಲಿ ಅನುಭವಿ ಆಟಗಾರರಾದ ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಆದಿಲ್ ರಶೀದ್ ಹಾಗೂ ಫಿಲ್ ಸಾಲ್ಟ್ ಅವರಂತಹ ಆಟಗಾರರು ಸ್ಥಾನ ಪಡೆದಿದ್ದಾರೆ. ಇನ್ನು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗದ ಬೌಲರ್‌ಗಳಾದ ಬ್ರೈಡನ್ ಕಾರ್ಸ್‌ ಹಾಗೂ ಆಲ್ರೌಂಡರ್ ಜೇಮಿ ಓವರ್‌ಟನ್ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಜೇಮ್ಸ್ ಕ್ಲೋಸ್‌ಗೆ ಮೊದಲ ಸಲ ಇಂಗ್ಲೆಂಡ್ ತಂಡಕ್ಕೆ ಬುಲಾವ್:

ಇನ್ನೊಂದೆಡೆ 21 ವರ್ಷದ ಆಲ್ರೌಂಡರ್ ಜೇಮ್ಸ್ ಕ್ಲೋಸ್, ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ದೇಶಿ ಕ್ರಿಕೆಟ್‌ನಲ್ಲಿ ಜೇಮ್ಸ್ ಕ್ಲೋಸ್ 61 ಇನ್ನಿಂಗ್ಸ್‌ಗಳನ್ನಾಡಿ 7 ಅರ್ಧಶತಕ ಸಹಿತ 1373 ರನ್ ಸಿಡಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 53 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಇಂಗ್ಲೆಂಡ್ ತಂಡವು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಮೊದಲ ಬಾರಿಗೆ ಟಿ20 ಕ್ರಿಕೆಟ್ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಅಂದಹಾಗೆ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮೀಸ್‌ನಲ್ಲಿ ಭಾರತ ಎದುರು ಸೋಲು ಕಾಣುವ ಮೂಲಕ ಅಭಿಯಾನ ಮುಗಿಸಿತ್ತು. ಇದೀಗ ಭಾರತ ಎದುರು ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್ ತುದಿಗಾಲಿನಲ್ಲಿ ನಿಂತಿದೆ.

ಭಾರತ ಎದುರಿನ ಟಿ20 ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ:

ಹ್ಯಾರಿ ಬ್ರೂಕ್(ಕ್ಯಾಪ್ಟನ್), ರೆಹಾನ್ ಅಹಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಟಾಮ್ ಬಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಜೇಮ್ಸ್ ಕ್ಲೋಸ್, ಜೋರ್ಡನ್ ಕಾಕ್ಸ್, ಸ್ಯಾಮ್ ಕರ್ರನ್, ಲಿಯಮ್ ಡಾಸನ್, ವಿಲ್ ಜ್ಯಾಕ್ಸ್, ಸಕೀಬ್ ಮೊಹಮೂದ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್