Asianet Suvarna News Asianet Suvarna News

Eng vs NZ: ಕಿವೀಸ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕೇನ್‌ ವಿಲಿಯಮ್ಸನ್‌..!

ಟೆಸ್ಟ್‌ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡ ಕೇನ್ ವಿಲಿಯಮ್ಸನ್
ರಾಸ್ ಟೇಲರ್ ದಾಖಲೆ ಹಿಂದಿಕ್ಕಿ ಹೊಸ ದಾಖಲೆ ಬರೆದ ಮಾಜಿ ನಾಯಕ ವಿಲಿಯಮ್ಸನ್
ಟೆಸ್ಟ್‌ ವೃತ್ತಿಜೀವನದ 26ನೇ ಶತಕ ಪೂರೈಸಿದ ಕೇನ್ ವಿಲಿಯಮ್ಸನ್

Eng vs NZ Former Captain Kane Williamson Becomes New Zealand Highest Test Run Scorer kvn
Author
First Published Feb 27, 2023, 5:28 PM IST

ವೆಲ್ಲಿಂಗ್ಟನ್(ಫೆ.27): ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌, ಕಿವೀಸ್‌ ಪಡೆಯ ಅತ್ಯಂತ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಇದಷ್ಟೇ ಅಲ್ಲದೇ ಕೇನ್ ವಿಲಿಯಮ್ಸನ್, ಇದೀಗ ಕಿವೀಸ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ರಾಸ್ ಟೇಲರ್ ಹಿಂದಿಕ್ಕಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ.

ಕೇನ್ ವಿಲಿಯಮ್ಸನ್‌ ಬಾರಿಸಿದ ಸಮಯೋಚಿತ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡವು ಎರಡನೇ ಇನಿಂಗ್ಸ್‌ನಲ್ಲಿ 483 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಇಂಗ್ಲೆಂಡ್‌ ತಂಡಕ್ಕೆ ಗೆಲ್ಲಲು 258 ರನ್‌ಗಳ ಸವಾಲಿನ ಗುರಿ ನೀಡಿತ್ತು. 32 ವರ್ಷದ ಕೇನ್‌ ವಿಲಿಯಮ್ಸನ್‌, ಎರಡನೇ ಇನಿಂಗ್ಸ್‌ನಲ್ಲಿ ಟೆಸ್ಟ್‌ ವೃತ್ತಿಜೀವನದ 26ನೇ ಶತಕ ಸಿಡಿಸಿ ಸಂಭ್ರಮಿಸಿದರು. ಇನ್ನು ಇದಕ್ಕೂ ಮೊದಲು ಕೇನ್ ವಿಲಿಯಮ್ಸನ್‌ 29 ರನ್ ಗಳಿಸುತ್ತಿದ್ದಂತೆಯೇ, ರಾಸ್ ಟೇಲರ್(7,683) ಗಳಿಸಿದ್ದ ಗರಿಷ್ಠ ರನ್‌ ದಾಖಲೆಯನ್ನು ಮಾಜಿ ನಾಯಕ ಕೇನ್ ವಿಲಿಯಮ್ಸನ್ ಹಿಂದಿಕ್ಕಿದರು. ವಿಕೆಟ್ ಒಪ್ಪಿಸಿ ವಿಲಿಯಮ್ಸನ್ ಪೆವಿಲಿಯನ್‌ಗೆ ವಾಪಾಸ್ಸಾಗುವ ವೇಳೆ ಬಾಸಿನ್ ರಿಸರ್ವ್‌ ಸ್ಟೇಡಿಯಂನಲ್ಲಿ ಎಲ್ಲಾ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಿದರು.

ಆಧುನಿಕ ಕ್ರಿಕೆಟ್‌ನ ಫ್ಯಾಬ್ 4 ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ಕೇನ್‌ ವಿಲಿಯಮ್ಸನ್‌, ಎರಡನೇ ಇನಿಂಗ್ಸ್‌ನಲ್ಲಿ 132 ರನ್‌ ಬಾರಿಸಿ ಹ್ಯಾರಿ ಬ್ರೂಕ್‌ಗೆ ಚೊಚ್ಚಲ ಬಲಿಯಾದರು. ಕೇನ್ ವಿಲಿಯಮ್ಸನ್‌ 92 ಟೆಸ್ಟ್‌ ಪಂದ್ಯಗಳಿಂದ 161 ಇನಿಂಗ್ಸ್‌ಗಳನ್ನಾಡಿ ಕಿವೀಸ್ ಪರ ಗರಿಷ್ಠ ರನ್‌ ಬಾರಿಸಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ರಾಸ್ ಟೇಲರ್ 112 ಟೆಸ್ಟ್ ಪಂದ್ಯಗಳ 196 ಇನಿಂಗ್ಸ್‌ಗಳನ್ನಾಡಿ 7,683 ರನ್ ಬಾರಿಸಿದ್ದರು.

ಇಂಗ್ಲೆಂಡ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ರಾಸ್ ಟೇಲರ್ ದಾಖಲೆ ಮುರಿಯಲು ಕೇನ್‌ ವಿಲಿಯಮ್ಸನ್ ಅವರಿಗೆ ಕೇವಲ 39 ರನ್‌ಗಳ ಅಗತ್ಯವಿತ್ತು. ವಿಲಿಯಮ್ಸನ್‌ ಮೊದಲ 3 ಇನಿಂಗ್ಸ್‌ಗಳಲ್ಲಿ ಕೇವಲ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇದೀಗ ಎರಡನೇ ಇನಿಂಗ್ಸ್‌ನಲ್ಲಿ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಇನ್ನು ಕೇನ್ ವಿಲಿಯಮ್ಸನ್, ತಮ್ಮ ದಾಖಲೆಯನ್ನು ಅಳಿಸಿ ಹಾಕಿದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸಾಮಾಜಿಕ ಜಾಲತಾಣದಲ್ಲಿ ಕೇನ್ ಅವರನ್ನು ಅಭಿನಂದಿಸಿದ್ದಾರೆ. "ಅಭಿನಂದನೆಗಳು ಕೇನ್ ಎಂದು ಟ್ವೀಟ್ ಮಾಡಿರುವ ಅವರು, ಈ ಸಾಧನೆಯು ನೀವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಎಷ್ಟು ಪರಿಶ್ರಮ ಹಾಗೂ ಬದ್ದತೆಯಿಂದ ಆಡುತ್ತಿದ್ದೀರ ಎನ್ನುವುದನ್ನು ತೋರಿಸುತ್ತದೆ. ನಿಮ್ಮ ಜತೆ ಕೆಲವು ವರ್ಷಗಳ ಕಾಲ ಆಡಿದ್ದು ನನ್ನ ಸೌಭಾಗ್ಯ ಎಂದು ರಾಸ್ ಟೇಲರ್ ಟ್ವೀಟ್‌ ಮಾಡಿದ್ದಾರೆ.

IPL 2023: ಐಪಿಎಲ್‌ ಟೂರ್ನಿಗೂ ಮುನ್ನ 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ಗೆ ಅತಿದೊಡ್ಡ ಶಾಕ್..!

ಸದ್ಯ ಕೇನ್ ವಿಲಿಯಮ್ಸನ್‌, ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 200 ಟೆಸ್ಟ್‌ ಪಂದ್ಯಗಳನ್ನಾಡಿ 15,921 ರನ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಭದ್ರವಾಗಿದ್ದಾರೆ.

Follow Us:
Download App:
  • android
  • ios