'ಹಣ ಗಳಿಸಿ, ಆದ್ರೆ ಈ ರೀತಿಯಲ್ಲಿ ಅಲ್ಲ..': ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮೇಲೆ ಮಾಜಿ ವೇಗಿ ಸಿಡಿಮಿಡಿ
ಬಿಸಿಸಿಐ ಎಚ್ಚರಿಕೆಯ ನಡುವೆಯೂ ದೇಶಿ ಕ್ರಿಕೆಟ್ ಕಡೆಗಣಿಸಿ ಟಿ20 ಲೀಗ್‌ನತ್ತ ಗಮನ ಹರಿಸಲು ಮುಂದಾದ ಈ ಇಬ್ಬರು ಕ್ರಿಕೆಟಿಗರಿಗೆ ಬಿಸಿಸಿಐ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದೆ. ಇದೀಗ ಈ ಕುರಿತಂತೆ Time of India ಜತೆಗಿನ ಸಂದರ್ಶನದ ವೇಳೆ ಪ್ರವೀಣ್ ಕುಮಾರ್, ಈ ವಿಚಾರವಾಗಿ ತುಟಿ ಬಿಚ್ಚಿದ್ದಾರೆ.
ನವದೆಹಲಿ(ಮಾ.04): ಮಳೆ ನಿಂತರೂ, ಮಳೆ ಹನಿ ನಿಲ್ಲೋಲ್ಲ ಎನ್ನುವಂತಾಗಿದೆ ಟೀಂ ಇಂಡಿಯಾ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರ ಪಾಡು. ಇತ್ತೀಚೆಗಷ್ಟೇ ಬಿಡುಗಡೆಯಾದ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ ಸ್ಥಾನ ಪಡೆಯಲು ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ವಿಫಲವಾಗಿದ್ದರು. ಇದು ಸಾಕಷ್ಟು ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಂತೆ ಟೀಂ ಇಂಡಿಯಾ ಮಾಜಿ ವೇಗಿ ಪ್ರವೀಣ್ ಕುಮಾರ್ ಖಡಕ್ ಮಾತುಗಳ ಮೂಲಕ ಗಮನ ಸೆಳೆದಿದ್ದಾರೆ.
ಬಿಸಿಸಿಐ ಎಚ್ಚರಿಕೆಯ ನಡುವೆಯೂ ದೇಶಿ ಕ್ರಿಕೆಟ್ ಕಡೆಗಣಿಸಿ ಟಿ20 ಲೀಗ್‌ನತ್ತ ಗಮನ ಹರಿಸಲು ಮುಂದಾದ ಈ ಇಬ್ಬರು ಕ್ರಿಕೆಟಿಗರಿಗೆ ಬಿಸಿಸಿಐ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದೆ. ಇದೀಗ ಈ ಕುರಿತಂತೆ Time of India ಜತೆಗಿನ ಸಂದರ್ಶನದ ವೇಳೆ ಪ್ರವೀಣ್ ಕುಮಾರ್, ಈ ವಿಚಾರವಾಗಿ ತುಟಿ ಬಿಚ್ಚಿದ್ದಾರೆ. ಕ್ರಿಕೆಟಿಗರು ಹಣ ಗಳಿಸುವುದರ ಕಡೆಗೂ ಗಮನ ಕೊಡಬೇಕು, ಹಾಗಂತೂ ದೇಶಿ ಕ್ರಿಕೆಟ್ ಕಡೆಗಣಿಸಿ ಈ ರೀತಿ ಮಾಡಬಾರದು. ಐಪಿಎಲ್‌ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕಡೆಗಣಿಸಬೇಡಿ ಎಂದು ಯುವ ಕ್ರಿಕೆಟಿಗರಿಗೆ ಪ್ರವೀಣ್ ಕುಮಾರ್ ಕಿವಿಮಾತು ಹೇಳಿದ್ದಾರೆ.
"ನಾನು ತುಂಬಾ ಹಿಂದಿನಿಂದಲೇ ಇದನ್ನು ಹೇಳುತ್ತಾ ಬಂದಿದ್ದೇನೆ. ಹಣ ಮಾಡಿ ಯಾರು ಬೇಡ ಅಂತಾರೆ ಹೇಳಿ?. ಹಣಗಳಿಸಬೇಕು ಹಾಗಂತ ದೇಶಿ ಕ್ರಿಕೆಟ್ ಅಥವಾ ರಾಷ್ಟ್ರೀಯ ತಂಡವನ್ನು ಕಡೆಗಣಿಸಿ ಹಣ ಮಾಡುವುದಲ್ಲ. ಈ ವಿಚಾರವನ್ನು ಎಲ್ಲಾ ಆಟಗಾರರು ಗಮನದಲ್ಲಿಟ್ಟುಕೊಳ್ಳಬೇಕು. ನಾನು ಒಂದು ತಿಂಗಳು ರೆಸ್ಟ್ ಮಾಡುತ್ತೇನೆ, ಆಮೇಲೆ ಐಪಿಎಲ್ ಆಡುತ್ತೇನೆ. ಈ ಥರದ ಮನಸ್ಥಿತಿಯವರು ಇರುತ್ತಾರೆ. ಯಾಕೆಂದರೆ ಅಷ್ಟೊಂದು ಹಣವನ್ನು ಕಳೆದುಕೊಳ್ಳಲು ಬಯಸಲ್ಲ. ಆದರೆ ಇದು ಸರಿಯಲ್ಲ. ಆಟಗಾರರಾದವರು ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಹಣ ಮುಖ್ಯ, ಆದರೆ ಫ್ರಾಂಚೈಸಿ ಕ್ರಿಕೆಟ್‌ಗೆ ಒತ್ತು ನೀಡಿ ಹಣ ಗಳಿಸುವುದು ಸರಿಯಲ್ಲ" ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ.
ಶ್ರೇಯಸ್ ಅಯ್ಯರ್, ಇಂಗ್ಲೆಂಡ್ ಎದುರಿನ ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಕಣಕ್ಕಿಳಿದಿದ್ದರು. ಆ ಬಳಿಕ ಬೆನ್ನು ನೋವಿನ ಸಮಸ್ಯೆಯಿದೆ ಎಂದು ಹೇಳಿ ತಂಡದಿಂದ ಹೊರಗುಳಿದಿದ್ದರು. ಇದಾದ ಬಳಿಕ ಎನ್‌ಸಿಎ ಅಯ್ಯರ್ ಆಡಲು ಫಿಟ್ ಆಗಿದ್ದಾರೆ ಎನ್ನುವ ರಿಪೋರ್ಟ್ ನೀಡಿತು. ಆಗ ಬಿಸಿಸಿಐ ಅಯ್ಯರ್‌ಗೆ ಮುಂಬೈ ಪರ ರಣಜಿ ಕ್ರಿಕೆಟ್ ಆಡುವಂತೆ ಸೂಚಿಸಿತ್ತು. ಆದರೆ ಬಿಸಿಸಿಐ ಮನವಿಗೆ ಅಯ್ಯರ್ ಸೊಪ್ಪು ಹಾಕಲಿಲ್ಲ. ಪರಿಣಾಮ ಅಯ್ಯರ್ ಅವರನ್ನು ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಗೇಟ್‌ಪಾಸ್ ನೀಡಿತು.
ಅದೇ ರೀತಿ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಕೂಡಾ ಟೀಂ ಇಂಡಿಯಾದಿಂದ ಹೊರಗುಳಿದು ಮುಂಬೈ ಇಂಡಿಯನ್ಸ್ ಪರ ಆಡಲು ಐಪಿಎಲ್‌ಗಾಗಿ ಅಭ್ಯಾಸ ನಡೆಸುತ್ತಿದ್ದರು. ಬಿಸಿಸಿಐ ಇಶಾನ್ ಕಿಶನ್‌ಗೂ ರಣಜಿ ಆಡುವಂತೆ ಹೇಳಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಪರಿಣಾಮ ಇಶಾನ್ ಕಿಶನ್ ಅವರನ್ನು ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಕೈಬಿಡಲಾಗಿದೆ.
ಇನ್ನು ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡು ಶ್ರೇಯಸ್ ಅಯ್ಯರ್, ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಕೂಡಿಕೊಂಡಿದ್ದರು. ಆದರೆ ಮೊದಲ ಇನಿಂಗ್ಸ್‌ನಲ್ಲಿ ಅಯ್ಯರ್ 8 ಎಸೆತಗಳನ್ನು ಎದುರಿಸಿ ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು.