ದಕ್ಷಿಣಕ್ಕೆ 14ನೇ, ಪಶ್ವಿಮಕ್ಕೆ 20ನೇ ಪ್ರಶಸ್ತಿ ಗುರಿ ದುಲೀಪ್ ಟ್ರೋಫಿ ಫೈನಲ್‌ಗೆ ಚಿನ್ನಸ್ವಾಮಿ ಮೈದಾನ ಆತಿಥ್ಯಎರಡು ತಂಡದಲ್ಲೂ ತಾರಾ ಆಟಗಾರರ ದಂಡು

ಬೆಂಗಳೂರು(ಜು.12): 2023ರ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, ಕಳೆದ ಬಾರಿಯಂತೆಯೇ ಈ ಬಾರಿಯೂ ದಕ್ಷಿಣ ಹಾಗೂ ಪಶ್ಚಿಮ ವಲಯಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಪಂದ್ಯಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ದಕ್ಷಿಣ ವಲಯ ಎದುರು ಟಾಸ್ ಗೆದ್ದ ಪಶ್ಚಿಮ ವಲಯದ ನಾಯಕ ಪ್ರಿಯಾಂಕ್ ಪಾಂಚಾಲ್‌ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

24ನೇ ಬಾರಿ ಫೈನಲ್‌ ಆಡುತ್ತಿರುವ ದಕ್ಷಿಣ ವಲಯ ತಂಡ 14ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಕಳೆದ ಬಾರಿಯೂ ದಕ್ಷಿಣ ತಂಡವನ್ನುಫೈನಲ್‌ನಲ್ಲಿ ಸೋಲಿಸಿದ್ದ ಪಶ್ಚಿಮ ವಲಯ ದಾಖಲೆಯ 20ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳುವ ತವಕದಲ್ಲಿದೆ. ಕಳೆದ ಬಾರಿ ಫೈನಲ್‌ಗೇರಿದ್ದರಿಂದ ಈ ಎರಡೂ ತಂಡಗಳು ಈ ಬಾರಿ ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದವು.

ಪ್ರಮುಖರು ಆಕರ್ಷಣೆ: ಹನುಮ ವಿಹಾರಿ ನಾಯಕತ್ವದ ದಕ್ಷಿಣ ತಂಡದಲ್ಲಿ ಮಯಾಂಕ್‌ ಅಗರ್‌ವಾಲ್‌, ಸಾಯಿ ಸುದರ್ಶನ್‌, ವಾಷಿಂಗ್ಟನ್‌ ಸುಂದರ್‌, ಕನ್ನಡಿಗರಾದ ವಿದ್ವತ್‌ ಕಾವೇರಪ್ಪ, ವೈಶಾಕ್‌ ಹಾಗೂ ತಿಲಕ್‌ ವರ್ಮಾ ಸೇರಿದಂತೆ ಪ್ರಮುಖರಿದ್ದಾರೆ. ಇನ್ನು, ಪಶ್ಚಿಮ ತಂಡವನ್ನು ಪ್ರಿಯಾಂಕ್‌ ಪಾಂಚಾಲ್‌ ಮುನ್ನಡೆಸಲಿದ್ದು, ಹಿರಿಯ ಬ್ಯಾಟರ್‌ ಚೇತೇಶ್ವರ್‌ ಪೂಜಾರ, ಸೂರ್ಯಕುಮಾರ್‌, ಪೃಥ್ವಿ ಶಾ, ಸರ್ಫರಾಜ್‌ ಖಾನ್‌ ಮೇಲೆ ಹೆಚ್ಚಿನ ಭರವಸೆ ಇರಿಸಿದೆ.

ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ನಾಳೆಯಿಂದ ಆರಂಭ, ಇಲ್ಲಿದೆ ಟೂರ್ನಿ ವೇಳಾಪಟ್ಟಿ!

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರಪ್ರಸಾರ: ಬಿಸಿಸಿಐ.ಟಿವಿ

13ನೇ ಫೈನಲ್‌ ಮುಖಾಮುಖಿ!

ಪಶ್ಚಿಮ ಹಾಗೂ ದಕ್ಷಿಣ ವಲಯ ತಂಡಗಳು ಈವರೆಗೆ ಫೈನಲ್‌ನಲ್ಲಿ 12 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 7 ಬಾರಿ ಪಶ್ಚಿಮ ತಂಡ ಗೆದ್ದಿದ್ದರೆ, 4 ಬಾರಿ ದಕ್ಷಿಣ ವಲಯ ತಂಡ ಚಾಂಪಿಯನ್‌ ಆಗಿವೆ. 1963-64ರಲ್ಲಿ ಉಭಯ ತಂಡಗಳನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಲಾಗಿತ್ತು.

ದೇವಧಾರ್‌ ಟ್ರೋಫಿ: ದಕ್ಷಿಣ ತಂಡಕ್ಕೆ ಮಯಾಂಕ್‌ ನಾಯಕ

ಬೆಂಗಳೂರು: ಜು.24ರಿಂದ ಆರಂಭಗೊಳ್ಳಲಿರುವ ದೇವಧಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ದಕ್ಷಿಣ ವಲಯ ತಂಡಕ್ಕೆ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ ನಾಯಕತ್ವ ವಹಿಸಲಿದ್ದಾರೆ. ಇದೇ ವೇಳೆ ರೋಹನ್‌ ಕುನ್ನುಮ್ಮಾಲ್‌ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಯ್ಕೆ ಸಮಿತಿಯು ಮೊದಲ 3 ಪಂದ್ಯಕ್ಕೆ 15 ಮಂದಿಯ ತಂಡ ಪ್ರಕಟಿಸಿದ್ದು, ಕರ್ನಾಟಕದ ದೇವದತ್‌ ಪಡಿಕ್ಕಲ್‌, ವಿದ್ವತ್‌ ಕಾವೇರಪ್ಪ, ವಿ.ಕೌಶಿಕ್‌, ವೈಶಾಕ್‌ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅರ್ಜುನ್‌ ತೆಂಡುಲ್ಕರ್ ಕೂಡಾ ತಂಡದಲ್ಲಿದ್ದು, ವಾಷಿಂಗ್ಟನ್‌ ಸುಂದರ್‌, ಎನ್‌.ಜಗದೀಶನ್‌ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸಾಯಿ ಸುದರ್ಶನ್‌, ಕೆ.ಎಸ್‌.ಭರತ್‌, ನಿಕಿನ್‌ ಜೋಸ್‌ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ.