Asianet Suvarna News Asianet Suvarna News

Ind vs Pak Series: ಭಾರತ-ಪಾಕ್‌ ಸರಣಿ ಆತಿಥ್ಯಕ್ಕೆ ದುಬೈ ಆಸಕ್ತಿ..!

* ಭಾರತ-ಪಾಕ್ ಸರಣಿಗೆ ವೇದಿಕೆಯಾಗಲು ದುಬೈ ಉತ್ಸುಕ

* 2013ರ ಬಳಿಕ ದ್ವಿಪಕ್ಷೀಯ ಸರಣಿಯನ್ನಾಡಿಲ್ಲ ಉಭಯ ತಂಡಗಳು

* ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ದ ಸೋಲು ಕಂಡಿದ್ದ ಭಾರತ

Dubai Cricket Council chairman offers to host India vs Pakistan series in Dubai kvn
Author
Bengaluru, First Published Nov 24, 2021, 2:09 PM IST
  • Facebook
  • Twitter
  • Whatsapp

ದುಬೈ(ನ.24): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಬಹು ನಿರೀಕ್ಷಿತ ದ್ವಿಪಕ್ಷೀಯ ಸರಣಿ ದುಬೈನಲ್ಲಿ (Dubai) ಆಯೋಜಿಸಬಹುದು ಎಂದು ದುಬೈ ಕ್ರಿಕೆಟ್‌ ಸಮಿತಿ ಮುಖ್ಯಸ್ಥ ಅಬ್ದುಲ್‌ ರಹ್ಮಾನ್‌ ಫಲಕ್‌ನಜ್‌ ಹೇಳಿದ್ದಾರೆ. ಪಿಎಸ್‌ಎಲ್‌, ಐಪಿಎಲ್‌ ಹಾಗೂ ಟಿ20 ವಿಶ್ವಕಪ್‌ ಯಶಸ್ವಿ ಆಯೋಜನೆಯ ಬಳಿಕ ಭಾರತ-ಪಾಕ್‌ ಸರಣಿ ಆಯೋಜನೆ ಬಗ್ಗೆ ಅಬ್ದುಲ್‌ ಆಸಕ್ತಿ ತೋರ್ಪಡಿಸಿದ್ದಾರೆ.

‘ಭಾರತ-ಪಾಕ್‌ ನಡುವಿನ ಪಂದ್ಯ ಇಲ್ಲಿ ಆಯೋಜಿಸುವುದು ಉತ್ತಮ. ವರ್ಷಗಳ ಹಿಂದೆ ಶಾರ್ಜಾದಲ್ಲಿ (Sharjah) ಉಭಯ ತಂಡಗಳ ನಡುವೆ ನಡೆದ ಪಂದ್ಯ ಒಂದು ಯುದ್ಧದಂತಿತ್ತು. ಆದರೆ ಅದು ಕ್ರೀಡಾ ಯುದ್ಧವಾಗಿತ್ತು. ಅದು ಮತ್ತೊಮ್ಮೆ ನಡೆಯಬೇಕೆಂದು ನಾವು ಬಯಸುತ್ತೇವೆ. ಪಾಕ್‌ ವಿರುದ್ಧ ಇಲ್ಲಿಗೆ ಬಂದು ಪಂದ್ಯವಾಡಲು ಭಾರತವನ್ನು ಒಪ್ಪಿಸಲು ಸಾಧ್ಯವಾದರೆ ಅದು ನಿಜಕ್ಕೂ ಅದ್ಭುತವಾಗಿರಲಿದೆ’ ಎಂದಿದ್ದಾರೆ.

ನನಗಿನ್ನೂ ನೆನಪಿದೆ, ಬಾಲಿವುಡ್ ನಟ ರಾಜ್‌ ಕಪೂರ್ (Raj Kapoor) ಒಮ್ಮೆ ಇಲ್ಲಿಗೆ ಕುಟುಂಬ ಸಮೇತರಾಗಿ ಬಂದಿದ್ದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದ ರಾಜ್ ಕಪೂರ್, ಶಾರ್ಜಾದಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಎಷ್ಟು ಅಮೋಘವಾಗಿತ್ತು. ಕ್ರಿಕೆಟ್‌ ಎರಡು ದೇಶಗಳ ಜನರನ್ನು ಮತ್ತಷ್ಟು ಹತ್ತಿರ ತರುತ್ತದೆ. ಮುಂದೆಯೂ ಹೀಗಿಯೇ ಇರಲಿ ಎಂದು ಮೈಕ್ ಹಿಡಿದು ರಾಜ್‌ ಕಪೂರ್ ಹೇಳಿದ ಮಾತುಗಳನ್ನು ದುಬೈ ಕ್ರಿಕೆಟ್‌ ಸಮಿತಿ ಮುಖ್ಯಸ್ಥ ಅಬ್ದುಲ್‌ ರಹ್ಮಾನ್‌ ಫಲಕ್‌ನಜ್‌ ಮೆಲುಕು ಹಾಕಿದ್ದಾರೆ. 

ಒಂದು ವೇಳೆ ಭಾರತ ತಂಡಕ್ಕೆ ದುಬೈನಲ್ಲಿ ಪಾಕಿಸ್ತಾನ ವಿರುದ್ದ ದ್ವಿಪಕ್ಷೀಯ ಸರಣಿಯನ್ನಾಡಲು ಮನವೊಲಿಸಿದರೆ, ವರ್ಷದಲ್ಲಿ ಉಭಯ ತಂಡಗಳ ನಡುವೆ ಒಂದು ಇಲ್ಲವೇ ಎರಡು ದ್ವಿಪಕ್ಷೀಯ ಸರಣಿಗಳು ನಡೆದರೆ, ಕ್ರಿಕೆಟ್ ಅಭಿಮಾನಿಗಳಿಗೆ (Cricket Fans) ಭರಪೂರ ಮನರಂಜನೆ ಸಿಗಲಿದೆ ಎಂದು ಅಬ್ದುಲ್‌ ರಹ್ಮಾನ್‌ ಫಲಕ್‌ನಜ್‌ ಅಭಿಪ್ರಾಯಪಟ್ಟಿದ್ದಾರೆ. 

IND vs NZ Test; ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹೊಡೆತ, ಕೆಎಲ್ ರಾಹುಲ್ ಔಟ್!

ಭಾರತ-ಪಾಕಿಸ್ತಾನ ತಂಡಗಳ ನಡುವೆ 2013ರಲ್ಲಿ ಕೊನೆಯ ಬಾರಿ ದ್ವಿಪಕ್ಷೀಯ ಸರಣಿ (Bilateral Cricket Series) ನಡೆದಿತ್ತು. ಇದಾದ ಬಳಿಕ ರಾಜತಾಂತ್ರಿಕ ಕಾರಣಗಳಿಂದಾಗಿ ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಇತ್ತೀಚೆಗಷ್ಟೇ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಭಾರತ ವಿರುದ್ದ 10 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿತ್ತು. ಇದರೊಂದಿಗೆ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡವು ಮೊದಲ ಬಾರಿಗೆ ಪಾಕ್ ವಿರುದ್ದ ಸೋಲು ಕಂಡು ಮುಖಭಂಗ ಅನುಭವಿಸಿತ್ತು.

2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯದ ಹಕ್ಕನ್ನು ಬಿಸಿಸಿಐ ಪಡೆದುಕೊಂಡಿತ್ತು. ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಟೂರ್ನಿಯು ಕೋವಿಡ್‌ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರಗೊಂಡಿತ್ತು. ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಆತಿಥ್ಯದ ಹಕ್ಕನ್ನು ಬಿಸಿಸಿಐ ಪಡೆದುಕೊಂಡಿದ್ದು, 2011ರ ಬಳಿಕ ಮತ್ತೊಮ್ಮೆ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ. ಇನ್ನು 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (ICC Champions Trophy) ಟೂರ್ನಿಯ ಆತಿಥ್ಯದ ಹಕ್ಕನ್ನು ಪಾಕಿಸ್ತಾನವು ಪಡೆದುಕೊಂಡಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳುವ ಕುರಿತಂತೆ ಮುಂಬರುವ ದಿನಗಳಲ್ಲಿ ಸರ್ಕಾರವು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕ್ರೀಡಾಸಚಿವ ಅನುರಾಗ್ ಠಾಕೂರ್ ತಿಳಿಸಿದ್ದರು.

IPL 2022: ಈ ಐವರು ಬ್ಯಾಟರ್‌ಗಳು RCB ಪರ ಎಬಿ ಡಿವಿಲಿಯರ್ಸ್‌ ಸ್ಥಾನ ತುಂಬಬಲ್ಲರು..!

2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ನ್ಯೂಜಿಲೆಂಡ್ ತಂಡವು ದಶಕಗಳ ಬಳಿಕ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿತ್ತು. ಆದರೆ ಸೀಮಿತ ಓವರ್‌ಗಳ ಸರಣಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಭದ್ರತೆಯ ಭೀತಿಯಿಂದಾಗಿ ನ್ಯೂಜಿಲೆಂಡ್ ಆಟಗಾರರು ಮೈದಾನಕ್ಕಿಳಿಯಲು ನಿರಾಕರಿಸಿದ್ದರು. ಬಳಿಕ ಸುರಕ್ಷಿತವಾಗಿ ಆಟಗಾರರು ನ್ಯೂಜಿಲೆಂಡ್‌ಗೆ ವಾಪಾಸ್ಸಾಗಿದ್ದರು. ನ್ಯೂಜಿಲೆಂಡ್ ತಂಡವು ದಿಢೀರ್ ಎನ್ನುವಂತೆ ಪಾಕ್‌ ವಿರುದ್ದ ಕಣಕ್ಕಿಳಿಯಲು ನಿರಾಕರಿಸಿದ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಕೂಡಾ ಪಾಕ್ ಪ್ರವಾಸದಿಂದ ಹಿಂದೆ ಸರಿದಿತ್ತು. ಇದರಿಂದ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ವ್ಯಾಪಕ ಮುಖಭಂಗಕ್ಕೆ ಒಳಗಾಗಿತ್ತು.

Follow Us:
Download App:
  • android
  • ios