ಢಾಕಾ(ಮೇ.28): ನೂತನ ನಾಯಕ ಕುಸಾಲ್ ಪೆರೆರಾ ನೇತೃತ್ವದ ಶ್ರೀಲಂಕಾ ತಂಡವು ಬಾಂಗ್ಲಾದೇಶ ಎದುರು ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಲಂಕಾ ಕೋಚ್‌ ಮಿಕ್ಕಿ ಆರ್ಥರ್, ಹಿರಿಯ ಆಟಗಾರರಿಗೆ ತಂಡದ ಬಾಗಿಲು ಮುಚ್ಚಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ನಡೆಯಲಿದ್ದು, ಈ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶ ವಿರುದ್ದದ ಏಕದಿನ ಸರಣಿಗೆ ಟೆಸ್ಟ್ ತಂಡದ ನಾಯಕ ದೀಮುತ್ ಕರುಣಾರತ್ನೆ, ಏಂಜಲೋ ಮ್ಯಾಥ್ಯೂಸ್‌ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಈ ಪ್ರಯೋಗ ಲಂಕಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಬಾಂಗ್ಲಾದೇಶ ಎದುರು ಕುಸಾಲ್ ಪೆರೆರಾ ಪಡೆ ಮೊದಲೆರಡು ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಂಡಿದ್ದು, ವೈಟ್‌ವಾಷ್‌ ಭೀತಿಗೆ ಸಿಲುಕಿದೆ.

ಮುಷ್ಫಿಕುರ್ ಆಕರ್ಷಕ ಶತಕ; ಲಂಕಾ ಎದುರು ಸರಣಿ ಗೆದ್ದ ಬಾಂಗ್ಲಾದೇಶ

ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಹೆಡ್‌ ಕೋಚ್‌ ಮಿಕ್ಕಿ ಆರ್ಥರ್, ಯಾರಿಗೂ ಶ್ರೀಲಂಕಾ ತಂಡದ ಬಾಗಿಲು ಮುಚ್ಚಿಲ್ಲ. ನಾವು 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ತಂಡ ಕಟ್ಟುವತ್ತ ನಮ್ಮ ಪ್ರಯಾಣ ಆರಂಭಿಸಿದ್ದೇವೆ. ಹಾಗಂತ ಯಾರಿಗೂ ತಂಡದ ಬಾಗಿಲು ಮುಚ್ಚಿಲ್ಲ ಎಂದು ಆರ್ಥರ್ ಹೇಳಿದ್ದಾರೆ.

ಹಿರಿಯ ಆಟಗಾರರು ತಂಡದೊಳಗೆ ಬಂದು ನಂಬಿಕೆ ಉಳಿಸುವಂತ ಪ್ರದರ್ಶನ ತೋರಬೇಕಿದೆ. ನಮ್ಮ ತಂಡವನ್ನು ಬಲಿಷ್ಠವಾಗಿ ಕಟ್ಟುವತ್ತ ಹೆಜ್ಜೆಯಿಡಲಾರಂಭಿಸಿದ್ದೇವೆ. ಹೀಗಾಗಿ ಪ್ರತಿಯೊಬ್ಬರ ಮೇಲೂ ಉತ್ತಮ ಪ್ರದರ್ಶನ ತೋರಲೇಬೇಕಾದ ಒತ್ತಡವಿದೆ ಎಂದು ಆರ್ಥರ್‌ ಹೇಳಿದ್ದಾರೆ.