ಇಂಗ್ಲೆಂಡ್ ಆಲ್ರೌಂಡರ್ ಜತೆ ಹಾರ್ದಿಕ್ ಪಾಂಡ್ಯ ಹೋಲಿಕೆ ಸಾಧ್ಯವೇ ಇಲ್ಲವೆಂದ ಪಾಕ್ ಮಾಜಿ ಕ್ರಿಕೆಟಿಗ..!
ಆಸ್ಟ್ರೇಲಿಯಾ ಎದುರು ಸ್ಪೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದ ಹಾರ್ದಿಕ್ ಪಾಂಡ್ಯ
ಮೊಹಾಲಿಯಲ್ಲಿ ಕೇವಲ 30 ಎಸೆತಗಳಲ್ಲಿ ಅಜೇಯ 71 ರನ್ ಚಚ್ಚಿದ್ದ ಪಾಂಡ್ಯ
ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್ ಆಲ್ರೌಂಡರ್ ಜತೆಗೆ ಈಗಲೇ ಹೋಲಿಕೆ ಸರಿಯಲ್ಲವೆಂದ ಲತೀಫ್
ಮೊಹಾಲಿ(ಸೆ.22): ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದು, ಸ್ಪೋಟಕ ಬ್ಯಾಟಿಂಗ್ ಹಾಗೂ ಆಕರ್ಷಕ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್, ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಕೌಶಲ್ಯವನ್ನು ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಅವರೊಂದಿಗೆ ಹೋಲಿಸಲು ಸಾಧ್ಯವೇ ಇಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ದದ ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 30 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸಿದ್ದರು. ಇದರ ಹೊರತಾಗಿಯೂ ಅಸ್ಟ್ರೇಲಿಯಾ ತಂಡವು ಗೆಲುವಿನ ನಗೆ ಬೀರಿತ್ತು.
ಹಾರ್ದಿಕ್ ಪಾಂಡ್ಯ ಅವರೊಬ್ಬ ಒಳ್ಳೆಯ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ದ್ವಿಪಕ್ಷೀಯ ಸರಣಿಗಳಲ್ಲಿ ಇಂತಹ ಬ್ಯಾಟಿಂಗ್ ಎಲ್ಲರೂ ಆಡುತ್ತಾರೆ ಎಂದು ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗಷ್ಟೇ ಏಷ್ಯಾಕಪ್ ಟೂರ್ನಿಯು ಮುಕ್ತಾಯವಾಗಿದೆ, ಅಲ್ಲಿಯ ಪ್ರದರ್ಶನವನ್ನು ನೀವು ಗಮನಿಸಬೇಕು. ನಾನು ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯವನ್ನು ಉದ್ದೇಶಿಸಿ ಮಾತ್ರವೇ ಮಾತನಾಡುತ್ತಿಲ್ಲ, ಆದರೆ ಬೆನ್ ಸ್ಟೋಕ್ಸ್ ಜತೆಗೆ ಹಾರ್ದಿಕ್ ಪಾಂಡ್ಯ ಹೋಲಿಕೆ ಕುರಿತಂತೆ ಮಾತನಾಡುತ್ತಿದ್ದೇನೆ ಎಂದು ಲತೀಫ್ ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ಈಗಾಗಲೇ ತಾವೇನು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ವಿಶ್ವಕಪ್ ಗೆದ್ದಿದ್ದಾರೆ, ಟೆಸ್ಟ್ ಪಂದ್ಯಗಳನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ಬೆನ್ ಸ್ಟೋಕ್ಸ್ ಜತೆಗೆ ಹಾರ್ದಿಕ್ ಪಾಂಡ್ಯ ಹೋಲಿಕೆ ಸರಿಯಲ್ಲ. ಯಾಕೆಂದರೆ ಟ್ರೋಫಿ ಗೆಲ್ಲಿಸುವುದು ಮುಖ್ಯ. ಈ ವಿಚಾರದಲ್ಲಿ ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ ಅವರಿಗಿಂತ ಸಾಕಷ್ಟು ಮುಂದಿದ್ದಾರೆ ಎಂದು ಲತೀಫ್ ಅಭಿಪ್ರಾಯಪಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯ ಟ್ರೋಲ್ ಮಾಡಲು ಮುಂದಾದ ಪಾಕ್ ನಟಿ; ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ ನೆಟ್ಟಿಗರು..!
ಆದರೆ ಕೆಲವೊಂದು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ ಬೆನ್ ಸ್ಟೋಕ್ಸ್ ಅವರ ಪ್ರದರ್ಶನಕ್ಕಿಂತ ಉತ್ತಮವಾಗಿದೆ ಎಂದು ಹೇಳಬಹುದು. ಆದರೆ ಉತ್ತಮ ಇನಿಂಗ್ಸ್‌ಗೂ, ಉತ್ತಮ ಆಟಗಾರ ಇವೆರಡು ವಿಭಿನ್ನ ವಿಚಾರಗಳು ಎಂದು ರಶೀದ್ ಲತೀಫ್ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ತವರಿನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 200+ ರನ್ ಬಾರಿಸಿದ ಹೊರತಾಗಿಯೂ ಆ ರನ್‌ಗಳನ್ನು ರಕ್ಷಿಸಿಕೊಳ್ಳಲು ವಿಫಲವಾಗುವ ಮೂಲಕ ಆಘಾತಕಾರಿ ಸೋಲು ಅನುಭವಿಸಿತ್ತು. ಡೆತ್ ಓವರ್ ಸ್ಪೆಷಲಿಸ್ಟ್‌ಗಳಾದ ಹರ್ಷಲ್ ಪಟೇಲ್ ಹಾಗೂ ಭುವನೇಶ್ವರ್ ಕುಮಾರ್ ಸಾಕಷ್ಟು ದುಬಾರಿಯಾಗಿದ್ದರು. ಹೀಗಾಗಿ ಅಸ್ಟ್ರೇಲಿಯಾ ತಂಡವು ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಟಿ20 ಸರಣಿ ಗೆಲ್ಲುವ ಕನಸನ್ನು ಭಾರತ ತಂಡವು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ನಾಗ್ಪುರದಲ್ಲಿ ಸೆಪ್ಟೆಂಬರ್ 23ರಂದು ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.