ಹಾರ್ದಿಕ್ ಪಾಂಡ್ಯ ಟ್ರೋಲ್ ಮಾಡಲು ಮುಂದಾದ ಪಾಕ್ ನಟಿ; ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ ನೆಟ್ಟಿಗರು..!
* ಆಸ್ಟ್ರೇಲಿಯಾ ಎದುರು ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ರೋಚಕ ಸೋಲು
* ಈ ಸೋಲಿನಿಂದ ಪಾಠ ಕಲಿಯುತ್ತೇವೆಂದ ಹಾರ್ದಿಕ್ ಪಾಂಡ್ಯ ಕಾಲೆಳೆದ ಪಾಕ್ ನಟಿ
* ಪಾಕ್ ನಟಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ ನೆಟ್ಟಿಗರು
ಮೊಹಾಲಿ(ಸೆ.22): ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, 2022ರ ಐಪಿಎಲ್‌ನಿಂದ ಭರ್ಜರಿ ಫಾರ್ಮ್‌ನಲ್ಲಿದ್ದು, ತಮ್ಮ ಅದ್ಭುತ ಪ್ರದರ್ಶನದ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 30 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸುವ ಮೂಲಕ ಮಿಂಚಿದ್ದರು.
ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಾಂಡ್ಯ ಬಾರಿಸಿದ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತ್ತು. ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆರಂಭದಲ್ಲೇ ವಿಕೆಟ್ ಒಪ್ಪಿಸಿದರೂ ಸಹಾ, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಸ್ಪೋಟಕ ಅರ್ಧಶತಕ ಹಾಗೂ ಸೂರ್ಯಕುಮಾರ್ ಯಾದವ್ ಅವರ ಸಿಡಿಲಬ್ಬರದ ಬ್ಯಾಟಿಂಗ್(46) ನೆರವಿನಿಂದ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಲು ನೆರವಾಯಿತು. ಹಾರ್ದಿಕ್ ಪಾಂಡ್ಯ ಕೇವಲ 30 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಮಿಂಚಿನ 71 ರನ್ ಚಚ್ಚಿದರು.
ಇದೆಲ್ಲದರ ಹೊರತಾಗಿಯೂ ಟೀಂ ಇಂಡಿಯಾ, ಡೆತ್ ಓವರ್‌ನಲ್ಲಿ ವೈಫಲ್ಯ ಅನುಭವಿಸಿದ್ದರಿಂದ, ಭಾರತ ಎದುರು ಆಸ್ಟ್ರೇಲಿಯಾ ತಂಡವು 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕೊನೆಯಲ್ಲಿ ಮ್ಯಾಥ್ಯೂ ವೇಡ್ ಕೇವಲ 21 ಎಸೆತಗಳಲ್ಲಿ ಅಜೇಯ 45 ರನ್ ಚಚ್ಚುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
Ind vs Aus: ದಿನೇಶ್ ಕಾರ್ತಿಕ್ ಕುತ್ತಿಗೆ ಕೈ ಹಾಕಿದ ರೋಹಿತ್ ಶರ್ಮಾ..! ವಿಡಿಯೋ ವೈರಲ್
ಆಸ್ಟ್ರೇಲಿಯಾ ಎದುರಿನ ಪಂದ್ಯ ಮುಕ್ತಾಯದ ಬಳಿಕ, ಪಂದ್ಯದ ಕೆಲವು ಫೋಟೋಗಳೊಂದಿಗೆ, ಭಾರತ ತಂಡವು ಈ ಬಾರಿ ಮಾಡಿದ ತಪ್ಪಿನಿಂದ ಪಾಠ ಕಲಿಯಲಿದೆ. ಈ ಮೂಲಕ ಬಲಿಷ್ಠವಾಗಿ ಟೀಂ ಇಂಡಿಯಾ ಕಮ್‌ಬ್ಯಾಕ್ ಮಾಡಲಿದೆ ಎಂದು ಟ್ವೀಟ್ ಮಾಡಿದ್ದರು.
ಇನ್ನು ಹಾರ್ದಿಕ್ ಪಾಂಡ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ ಎಂಬಾಕೆ, ಪಾಕಿಸ್ತಾನ ವಿರುದ್ದ ಅಕ್ಟೋಬರ್ 23ರಂದು ನಡೆಯಲಿರುವ ಪಂದ್ಯದಲ್ಲೂ ನೀವು ಸೋಲಿ, ಆಗ ಮತ್ತಷ್ಟು ಪಾಠವನ್ನು ಕಲಿಯುತ್ತೀರ ಎಂದು ಕಾಲೆಳೆದಿದ್ದರು.
ಭಾರತ ತಂಡವು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೊರ್ನ್ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಲಿದೆ.
ಇನ್ನು ಈ ಟ್ವೀಟ್ ಬೆಳಕಿಗೆ ಬರುತ್ತಿದ್ದಂತೆಯೇ ಹಲವು ನೆಟ್ಟಿಗರು ಪಾಕ್ ನಟಿಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರಗಳನ್ನು ನೀಡಿದ್ದಾರೆ. ಪಾಕಿಸ್ತಾನವು ತಮ್ಮ ದೇಶದಲ್ಲಿಯೇ ಕ್ರಿಕೆಟ್ ಆಡುತ್ತಿದ್ದರೂ ಸಹಾ, ನೀವು ಭಾರತದ ಪಂದ್ಯವನ್ನು ನೋಡುತ್ತಿದ್ದೀರಾ ಎಂದರೆ ನಿಜಕ್ಕೂ ಗ್ರೇಟ್. ಇದೇ ವಿಶ್ವ ಕ್ರಿಕೆಟ್‌ನಲ್ಲಿ ಭಾರತಕ್ಕಿರುವ ಬ್ರ್ಯಾಂಡ್ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಬ್ಬ ನೆಟ್ಟಿಗ, ತವರಿನಲ್ಲೇ ಇಂಗ್ಲೆಂಡ್ ವಿರುದ್ದ ಪಾಕಿಸ್ತಾನ ಸೋತ ಬಗ್ಗೆ ಕೊಂಚವಾದರೂ ನಾಚಿಕೆಯಿರಲಿ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ತಂಡವು ಆಸ್ಟ್ರೇಲಿಯಾ ಎದುರು ಸೆಪ್ಟೆಂಬರ್ 24ರಂದು ನಾಗ್ಪುರದಲ್ಲಿ ಎರಡನೇ ಟಿ20 ಪಂದ್ಯವನ್ನಾಡಲಿದೆ. ಇದಾದ ಬಳಿಕ ಸೆಪ್ಟೆಂಬರ್ 25ರಂದು ಮೂರನೇ ಹಾಗೂ ಕೊನೆಯ ಟಿ20 ಪಂದ್ಯವನ್ನು ಹೈದರಾಬಾದ್‌ನಲ್ಲಿ ಆಡಲಿದೆ.