T20 World Cup ಮಳೆಯಿಂದ ಜಿಂಬಾಬ್ವೆ-ದಕ್ಷಿಣ ಆಫ್ರಿಕಾ ಪಂದ್ಯ ರದ್ದು, ಟೀಂ ಇಂಡಿಯಾ ಸೆಮೀಸ್ ಹಾದಿ ಸಲೀಸು..!
ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ನಡುವಿನ ಪಂದ್ಯ ನೀರಲ್ಲಿ ಹೋಮ
ತಲಾ ಒಂದೊಂದು ಅಂಕಕ್ಕೆ ತೃಪ್ತಿಪಟ್ಟ ಉಭಯ ತಂಡಗಳು
ಈ ಫಲಿತಾಂಶದಿಂದಾಗಿ ಟೀಂ ಇಂಡಿಯಾ ಸೆಮೀಸ್ ಹಾದಿ ಮತ್ತಷ್ಟು ಸುಗಮ
ಹೋಬರ್ಡ್(ಅ.24): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡಿವೆ. ಇದರಿಂದಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಸೆಮೀಸ್ ದಾರಿ ಮತ್ತಷ್ಟು ಸುಲಭವಾಗಿದೆ. ಕಳೆದ ಬಾರಿ ಟೀಂ ಇಂಡಿಯಾ ಗ್ರೂಪ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು.
ಹೌದು, ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಬೆಲೆರಿವ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿತ್ತು. ಈ ಪಂದ್ಯಕ್ಕೆ ಆರಂಭದಿಂದಲೇ ಮಳೆ ಅಡ್ಡಿಪಡಿಸುತ್ತಲೇ ಇತ್ತು. ಹೀಗಾಗಿ 20 ಓವರ್‌ಗಳ ಇನಿಂಗ್ಸ್ ಬದಲಿಗೆ ತಲಾ 9 ಓವರ್‌ಗಳ ಇನಿಂಗ್ಸ್ ಆಡಿಸಲು ಅಂಪೈರ್ ತೀರ್ಮಾನಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ತೀರ್ಮಾನಿಸಿದ ಜಿಂಬಾಬ್ವೆ ತಂಡವು, ಹರಿಣಗಳ ಪಡೆಯ ವೇಗಿಗಳ ದಾಳಿಗೆ ತತ್ತರಿಸಿ ನಿಗದಿತ 9 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 79 ರನ್ ಗಳಿಸಲಷ್ಟೇ ಶಕ್ತವಾಯಿತು. ಜಿಂಬಾಬ್ವೆ ತಂಡದ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ 19 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ, ಜಿಂಬಾಬ್ವೆ ತಂಡಕ್ಕೆ 5ನೇ ವಿಕೆಟ್‌ಗೆ ವೆಸ್ಲೆ ಮದೆವರೆ ಹಾಗೂ ಮಿಲ್ಟನ್ ಶುಂಬಾ 60 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವೆಸ್ಲೆ ಮದೆವರೆ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 35 ರನ್ ಬಾರಿಸಿದರೆ, ಮಿಲ್ಟನ್ ಶುಂಬಾ 18 ರನ್ ಬಾರಿಸಿ ನೊಕಿಯಾಗೆ ವಿಕೆಟ್ ಒಪ್ಪಿಸಿದರು.
ಇನ್ನು ದಕ್ಷಿಣ ಆಫ್ರಿಕಾ ಪರ ಲುಂಗಿ ಎಂಗಿಡಿ 20 ರನ್ ನೀಡಿ 2 ವಿಕೆಟ್ ಪಡೆದರೆ, ಎಡಗೈ ವೇಗಿ ವೇಯ್ನ್ ಪಾರ್ನೆಲ್ ಹಾಗೂ ಏನ್ರಿಚ್ ನೊಕಿಯ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲ ಓವರ್‌ನಲ್ಲೇ ವಿಶ್ವದಾಖಲೆ ನಿರ್ಮಿಸಿದ ದಕ್ಷಿಣ ಆಫ್ರಿಕಾ: ಇನ್ನು ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ವಿಂಟನ್ ಡಿ ಕಾಕ್ ವಿಸ್ಪೋಟಕ ಆರಂಭವನ್ನು ಒದಗಿಸಿಕೊಟ್ಟರು. ಮೊದಲ ಓವರ್ ಬೌಲಿಂಗ್ ಮಾಡಿದ ಟೆಂಡೈ ಚಟಾರ್ ಎಸೆದ ಮೊದಲ 3 ಎಸೆತಗಳನ್ನು ಕ್ವಿಂಟನ್ ಡಿ ಕಾಕ್ ಬೌಂಡರಿ ಬಾರಿಸಿದರು. ಇನ್ನು ನಾಲ್ಕನೇ ಎಸೆತವನ್ನು ಮಿಡ್ ವಿಕೆಟ್ ಕಡೆ ಸಿಕ್ಸರ್ ಚಚ್ಚಿದರೆ, 5ನೇ ಎಸೆತವನ್ನು ಮಿಡ್ ವಿಕೆಟ್ ಕಡೆಯೇ ಬೌಂಡರಿ ಬಾರಿಸಿದರು. ಇನ್ನು ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸಿದರು. ಈ ಮೂಲಕ ಮೊದಲ ಓವರ್‌ನಲ್ಲೇ ಬರೋಬ್ಬರಿ 23 ರನ್ ಸಿಡಿಸುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದರು.
ಹೌದು, ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಓವರ್‌ನಲ್ಲೇ ಗರಿಷ್ಠ ರನ್ ದಾಖಲಿಸಿದ ವಿಶ್ವದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿತ್ತು. 2016ರಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಇಂಗ್ಲೆಂಡ್ ತಂಡದ ಆರಂಭಿಕರು ಮೊದಲ ಓವರ್‌ನಲ್ಲೇ 21 ರನ್ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ ಆ ದಾಖಲೆಯನ್ನು ಅಳಿಸಿ ಹಾಕುವಲ್ಲಿ ದಕ್ಷಿಣ ಆಫ್ರಿಕಾ ತಂಡವು ಯಶಸ್ವಿಯಾಗಿದೆ.
Ind vs Pak ಮತ್ತೆ ಮತ್ತೆ ನೋಡಬೇಕೆನಿಸುವ ಆ ಕೊನೆಯ 8 ಎಸೆತ..! ಕಿಂಗ್ ಕೊಹ್ಲಿಗೆ ಸೆಲ್ಯೂಟ್, ವಿಡಿಯೋ ವೈರಲ್ ..!
ಪಂದ್ಯ ತೊಳೆದ ಮಳೆರಾಯ: ಮಳೆ ಅಡ್ಡಿ ಪಡಿಸುವ ಮುನ್ಸೂಚನೆ ಇದ್ದಿದ್ದರಿಂದಲೇ ಡಿ ಕಾಕ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಇನ್ನು ಎರಡನೇ ಓವರ್ ಆರಂಭವಾಗುತ್ತಿದ್ದಂತೆಯೇ ಮತ್ತೆ ಮಳೆರಾಯ ಪಂದ್ಯಕ್ಕೆ ಅಡ್ಡಿಪಡಿಸಿದ. ಹೀಗಾಗಿ 7 ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 64 ರನ್‌ಗಳ ಗುರಿ ನಿಗದಿ ಪಡಿಸಲಾಯಿತು. ಎರಡನೇ ಓವರ್‌ನಲ್ಲಿ ಮತ್ತೆ ಅಬ್ಬರಿಸಿದ ಡಿ ಕಾಕ್ 4 ಬೌಂಡರಿ ಸಹಿತ 17 ರನ್ ಗಳಿಸಿದರು. ಇನ್ನು ಮೂರನೆ ಓವರ್‌ನಲ್ಲಿ ಹರಿಣಗಳ ಪಡೆಯು 11 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಕ್ವಿಂಟನ್ ಡಿ ಕಾಕ್ ಕೇವಲ 18 ಎಸೆತಗಳಲ್ಲಿ ಅಜೇಯ 47 ರನ್ ಸಿಡಿಸಿದರೆ, ನಾಯಕ ತೆಂಬ ಬವುಮಾ 2 ಎಸೆತಗಳಲ್ಲಿ 2 ರನ್ ಬಾರಿಸಿದ್ದರು. ಇನ್ನು ದಕ್ಷಿಣ ಆಫ್ರಿಕಾ ಗೆಲ್ಲಲು ಕೊನೆಯ 4 ಓವರ್‌ಗಳಲ್ಲಿ ಕೇವಲ 13 ರನ್‌ಗಳ ಅಗತ್ಯವಿತ್ತು. ಆಗ ಮತ್ತೆ ಜೋರಾಗಿ ಮಳೆ ಸುರಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು. ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡವು. ಒಂದು ವೇಳೆ 5 ಓವರ್ ಪೂರ್ತಿಗೊಂಡಿದ್ದರೆ ಡೆಕ್ವರ್ಥ್ ಲೂಯಿಸ್ ನಿಯಮ ಅಳವಡಿಸಿ ಹರಿಣಗಳ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತಿತ್ತು, ಇದಕ್ಕೂ ಮಳೆರಾಯ ಅವಕಾಶ ನೀಡಲಿಲ್ಲ.
ಟೀಂ ಇಂಡಿಯಾ ಸೆಮೀಸ್ ಹಾದಿ ಸಲೀಸು: ಹೌದು, ಈ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ, ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡದ ಸೆಮಿಫೈನಲ್ ಹಾದಿ ಸುಗಮವಾಗಿದೆ. ಭಾರತ ತಂಡವು ಸೂಪರ್ 12 ಹಂತದಲ್ಲಿ ಎರಡನೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಪಾಕಿಸ್ತಾನ ಹಾಗೂ ನೆದರ್‌ಲೆಂಡ್ಸ್ ತಂಡಗಳ ಸ್ಥಾನ ಪಡೆದಿವೆ. ಈಗಾಗಲೇ ಟೀಂ ಇಂಡಿಯಾ ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ರೋಚಕ ಗೆಲುವು ಸಾಧಿಸುವ ಮೂಲಕ ಎರಡು ಅಂಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದು, ಇನ್ನುಳಿದ 4 ಪಂದ್ಯಗಳ ಪೈಕಿ ಮೂರರಲ್ಲಿ ಅಂದರೆ ಬಾಂಗ್ಲಾದೇಶ, ಜಿಂಬಾಬ್ವೆ, ನೆದರ್‌ಲೆಂಡ್ಸ್ ವಿರುದ್ದ ಗೆಲುವು ಸಾಧಿಸಿದರೆ 8 ಅಂಕಗಳೊಂದಿಗೆ ಸುಲಭವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡಲಿದೆ. ಆದರೆ ಈ ಮೂರು ಪಂದ್ಯಗಳಿಗೆ ಮಳೆ ಅಡ್ಡಿಪಡಿಸಬಾರದಷ್ಟೇ. ಹೀಗಾದಲ್ಲಿ ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ದ ಮುಗ್ಗರಿಸಿದರೂ, ಟೀಂ ಇಂಡಿಯಾ ಸೆಮೀಸ್ ಪ್ರವೇಶಕ್ಕೆ ಯಾವುದೇ ಅಡ್ಡಿಯಾಗಲಾರದು. ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಪೈಕಿ ಒಂದು ತಂಡ ತಮ್ಮ ಪಾಲಿನ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಜಯಿಸಿದರೆ ಸೆಮೀಸ್‌ಗೆ ಏರಲಿದೆ