ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಚತುರ್ದಿನ ಟೆಸ್ಟ್‌ನಲ್ಲಿ, ಧ್ರುವ್ ಜುರೆಲ್ ಅವರ ಅಜೇಯ ಶತಕ ಮತ್ತು ರಿಷಭ್ ಪಂತ್, ಹರ್ಷ್ ದುಬೆ ಅವರ ಅರ್ಧಶತಕಗಳ ನೆರವಿನಿಂದ ಭಾರತ ಎ ತಂಡವು 417 ರನ್‌ಗಳ ಬೃಹತ್ ಗುರಿ ನೀಡಿದೆ. 3ನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಎ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದೆ

ಬೆಂಗಳೂರು: ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಚತುರ್ದಿನ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಅವರ ಅಜೇಯ ಶತಕ, ನಾಯಕ ರಿಷಭ್ ಪಂತ್ ಮತ್ತು ಹರ್ಷ್ ದುಬೆ ಅವರ ಅರ್ಧಶತಕಗಳ ಬಲದಿಂದ ಭಾರತ ಎ ತಂಡವು 417 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಎ, ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದೆ. ಜೋರ್ಡಾನ್ ಹರ್ಮನ್ 15 ರನ್ ಮತ್ತು ಲೆಸೆಗೊ ಸೆನೊಕ್ವಾನೆ 9 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಅಂತಿಮ ದಿನ ಗೆಲ್ಲಲು ದಕ್ಷಿಣ ಆಫ್ರಿಕಾ ಎ ತಂಡಕ್ಕೆ ಇನ್ನೂ 392 ರನ್‌ಗಳು ಬೇಕಾಗಿವೆ. ಭಾರತ 'ಎ' ತಂಡಕ್ಕೆ ಗೆಲ್ಲಲು ಕೊನೆಯ ದಿನ 10 ವಿಕೆಟ್ ಅಗತ್ಯವಿದೆ.

ಮತ್ತೆ ಆಪತ್ಬಾಂದವನಾದ ಧ್ರುವ್ ಜುರೆಲ್

ಮೂರನೇ ದಿನ 78-3 ಸ್ಕೋರ್‌ನೊಂದಿಗೆ ಆಟ ಆರಂಭಿಸಿದ ಭಾರತ ಎ, ಒಂದು ಹಂತದಲ್ಲಿ 116-5ಕ್ಕೆ ಕುಸಿದು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮೊದಲ ಇನ್ನಿಂಗ್ಸ್‌ನಂತೆ ಎರಡನೇ ಇನ್ನಿಂಗ್ಸ್‌ನಲ್ಲೂ ಅಜೇಯ ಶತಕ (127*) ಸಿಡಿಸಿದ ಧ್ರುವ್ ಜುರೆಲ್, ಅರ್ಧಶತಕ ಗಳಿಸಿದ ಹರ್ಷ್ ದುಬೆ (84) ಮತ್ತು ಗಾಯಗೊಂಡು ಮರಳಿ ಬಂದು 54 ಎಸೆತಗಳಲ್ಲಿ 65 ರನ್ ಗಳಿಸಿದ ನಾಯಕ ರಿಷಭ್ ಪಂತ್ ಅವರ ಬ್ಯಾಟಿಂಗ್ ನೆರವಿನಿಂದ ಭಾರತ 'ಎ' ತಂಡ 7 ವಿಕೆಟ್ ನಷ್ಟಕ್ಕೆ 382 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆರನೇ ವಿಕೆಟ್‌ಗೆ ಜುರೆಲ್ ಮತ್ತು ಹರ್ಷ್ ದುಬೆ 184 ರನ್‌ಗಳ ಜೊತೆಯಾಟವಾಡಿ ಭಾರತಕ್ಕೆ ಉತ್ತಮ ಮುನ್ನಡೆ ತಂದುಕೊಟ್ಟರು.

17 ರನ್ ಗಳಿಸಿದ್ದಾಗ ಮಣಿಕಟ್ಟಿಗೆ ಚೆಂಡು ಬಡಿದು ಗಾಯಗೊಂಡು ಕ್ರೀಸ್ ತೊರೆದಿದ್ದ ರಿಷಭ್ ಪಂತ್ ಮತ್ತು ಜುರೆಲ್, 7ನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟವಾಡಿ ಭಾರತಕ್ಕೆ ಬೃಹತ್ ಮುನ್ನಡೆ ತಂದುಕೊಟ್ಟರು. ರಿಷಭ್ ಪಂತ್ ಔಟಾದ ಕೂಡಲೇ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. 170 ಎಸೆತಗಳಲ್ಲಿ 15 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ಜುರೆಲ್ 127 ರನ್ ಗಳಿಸಿ ಅಜೇಯರಾಗಿ ಉಳಿದರು. ಮೊದಲ ಇನ್ನಿಂಗ್ಸ್‌ನಲ್ಲೂ ಭಾರತ ಬ್ಯಾಟಿಂಗ್ ಕುಸಿತ ಕಂಡಾಗ, 175 ಎಸೆತಗಳಲ್ಲಿ 132 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಜುರೆಲ್ ಅವರ ಶತಕವೇ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ದಿತ್ತು.

ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಭಾರತ ಕೆ ಎಲ್ ರಾಹುಲ್ (27) ಮತ್ತು ಕುಲ್ದೀಪ್ ಯಾದವ್ (16) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 27 ರನ್ ಗಳಿಸಿದ್ದ ರಾಹುಲ್ ಅವರನ್ನು ಒಖುಲೆ ಸಿಲೆ ಬೌಲ್ಡ್ ಮಾಡಿದರೆ, 16 ರನ್ ಗಳಿಸಿದ್ದ ಕುಲ್ದೀಪ್ ಅವರನ್ನು ಸುಬ್ರಾಯನ್ ಔಟ್ ಮಾಡಿದರು. ಇದಕ್ಕೂ ಮೊದಲು, ಭಾರತ ಎ ತಂಡದ ಮೊದಲ ಇನ್ನಿಂಗ್ಸ್ 255 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಎ 221 ರನ್‌ಗಳಿಗೆ ಆಲೌಟ್ ಆಗಿತ್ತು.

ರಿಷಭ್ ಪಂತ್ ವಾಪಸಾತಿ ನಿರಾಳ

ದಕ್ಷಿಣ ಆಫ್ರಿಕಾದ ವೇಗಿ ಶೆಪ್ಪೊ ಮೊರೆಕಿ ಅವರ ಚೆಂಡು ಮಣಿಕಟ್ಟಿಗೆ ಬಡಿದು ನಾಯಕ ರಿಷಭ್ ಪಂತ್ ಗಾಯಗೊಂಡು ಪೆವಿಲಿಯನ್‌ಗೆ ಮರಳಿದ್ದು ಭಾರತಕ್ಕೆ ಆತಂಕ ತಂದಿತ್ತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ರಿಸ್ ವೋಕ್ಸ್ ಅವರ ಚೆಂಡು ಪಾದಕ್ಕೆ ಬಡಿದು ಗಾಯಗೊಂಡಿದ್ದ ರಿಷಭ್ ಪಂತ್, ಮೂರು ತಿಂಗಳ ವಿರಾಮದ ನಂತರ ಟೆಸ್ಟ್ ತಂಡಕ್ಕೆ ಮರಳಿದ್ದರು. ಈಗ ಮತ್ತೆ ಗಾಯಗೊಂಡಿರುವುದು ಚಿಂತೆಗೆ ಕಾರಣವಾಗಿತ್ತು. ಮುಂದಿನ ವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ರಿಷಭ್ ಪಂತ್ ಭಾರತದ ಉಪನಾಯಕರಾಗಿದ್ದಾರೆ. ಆದರೆ, ಮೂರನೇ ದಿನ ಹರ್ಷ್ ದುಬೆ ವಿಕೆಟ್ ಬಿದ್ದ ನಂತರ ರಿಷಭ್ ಪಂತ್ ಮತ್ತೆ ಬ್ಯಾಟಿಂಗ್‌ಗೆ ಇಳಿದಿದ್ದು ಭಾರತಕ್ಕೆ ನಿರಾಳ ತಂದಿದೆ.