ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 50 ರನ್‌ಗಳಿಂದ ಗೆದ್ದಿದೆ. 2008ರ ನಂತರ ಚೆಪಾಕ್‌ನಲ್ಲಿ ಆರ್‌ಸಿಬಿ ಮೊದಲ ಜಯ ಇದಾಗಿದೆ. ಸಿಎಸ್‌ಕೆ ಸೋಲಿನಿಂದ ಅಭಿಮಾನಿಗಳು ಧೋನಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದು, 30 ರನ್ ಗಳಿಸಿದರು, ಆದರೆ ತಂಡವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಈ ನಿರ್ಧಾರದ ಬಗ್ಗೆ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೆನ್ನೈ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕಾದಾಟದಲ್ಲಿ ಆರ್‌ಸಿಬಿ ತಂಡವು 50 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನಲ್ಲಿ ಸೋಲುತ್ತಿದ್ದಂತೆಯೇ ಮಾಜಿ ನಾಯಕ ಎಂ ಎಸ್ ಧೋನಿಯನ್ನು ಸಿಎಸ್‌ಕೆ ಫ್ಯಾನ್ಸ್ ಟ್ರೋಲ್ ಮಾಡಲಾರಂಭಿಸಿದ್ದಾರೆ.
2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಚೆಪಾಕ್ ಮೈದಾನದಲ್ಲಿ ಕೊನೆಯ ಬಾರಿಗೆ ಗೆಲುವು ಸಾಧಿಸಿತ್ತು. ಇದಾದ ಬಳಿಕ ಕಳೆದ 17 ವರ್ಷಗಳಿಂದ ಸಿಎಸ್‌ಕೆ ಎದುರು ಚೆಪಾಕ್ ಮೈದಾನದಲ್ಲಿ ಗೆಲುವು ಸಾಧಿಸಲು ಆರ್‌ಸಿಬಿ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಚೆಪಾಕ್ ಭದ್ರಕೋಟೆ ಭೇದಿಸುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಸಿಎಸ್‌ಕೆ ಫ್ಯಾನ್ಸ್ ಧೋನಿಯನ್ನು ಟ್ರೋಲ್ ಮಾಡತೊಡಗಿದ್ದಾರೆ.
ಇದನ್ನೂ ಓದಿ: ಒಂದು ವೇಳೆ ವಿಕೆಟ್ ಕೀಪರ್ ಆಗದಿದ್ರೆ ಧೋನಿ ಏನಾಗ್ತಿದ್ರು? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಕ್ಯಾಪ್ಟನ್ ಕೂಲ್!
ಆರ್‌ಸಿಬಿ ನೀಡಿದ್ದ 197 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪವರ್‌ಪ್ಲೇನಲ್ಲೇ ಆರ್‌ಸಿಬಿ ವೇಗಿಗಳಾದ ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಮಾರಕ ದಾಳಿಗೆ ಸಿಎಸ್‌ಕೆ ಬ್ಯಾಟರ್‌ಗಳು ತತ್ತರಿಸಿ ಹೋದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಯಶ್ ದಯಾಳ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಸಿಎಸ್‌ಕೆ ಬ್ಯಾಟರ್‌ಗಳ ರನ್ ಗಳಿಸಲು ಪರದಾಡುವಂತೆ ಮಾಡಿದರು. ಒಂದು ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತ್ತು. ಆಗ ಆರ್‌ಸಿಬಿ ಫ್ಯಾನ್ಸ್ ಧೋನಿ ಕ್ರೀಸ್‌ಗಿಳಿಯಬಹುದು ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ ಫ್ಯಾನ್ಸ್ ನಿರೀಕ್ಷೆ ಹುಸಿಯಾಯಿತು, ಧೋನಿಗಿಂತ ಮೊದಲು ಅಶ್ವಿನ್ ಬ್ಯಾಟಿಂಗ್ ಮಾಡಲಿಳಿದರು. ಇದು ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
ಓರ್ವ ನೆಟ್ಟಿಗ, ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಬ್ರ್ಯಾಂಡ್ ವ್ಯಾಲ್ಯೂಗಾಗಿ ಆಡುತ್ತಿದ್ದಾರೆಯೇ ಹೊರತು, ಸಿಎಸ್‌ಕೆ ಗೆಲ್ಲಿಸುವುದಕ್ಕಾಗಿ ಅಲ್ಲ ಎನ್ನುವುದನ್ನು ಈಗಲಾದರೂ ಒಪ್ಪಿಕೊಳ್ಳಿ ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ: IPL 2025: RCB ಚೆಪಾಕ್ ಕೋಟೆಯನ್ನು ಭೇದಿಸಿದ್ದು ಹೇಗೆ?
ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದು 16 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 30 ರನ್ ಗಳಿಸಿ ಅಜೇಯರಾಗುಳಿದರಾದರೂ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇನ್ನು ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದಿದ್ದು ಸಿಎಸ್‌ಕೆ ಫ್ಯಾನ್ಸ್‌ಗೆ ಮಾತ್ರವಲ್ಲ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ವಿರೇಂದ್ರ ಸೆಹ್ವಾಗ್‌ಗೂ ಕೂಡ ಇಷ್ಟವಾಗಲಿಲ್ಲ. ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದಿದ್ದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
