ಡೆಲ್ಲಿ ಟೆಸ್ಟ್ ಪಂದ್ಯದಲ್ಲೇ ಉಸ್ಮಾನ್ ಖವಾಜ ಆಕರ್ಷಕ ಅರ್ಧಶತಕಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿ ಮಿಂಚಿದ ರವಿಚಂದ್ರನ್ ಅಶ್ವಿನ್‌ಲಂಚ್ ಬ್ರೇಕ್ ವೇಳೆಗೆ 3 ವಿಕೆಟ್ ಕಳೆದುಕೊಂಡು 94 ರನ್ ಕಲೆಹಾಕಿದ ಆಸ್ಟ್ರೇಲಿಯಾ
ದೆಹಲಿ(ಫೆ.17): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಇನ್ನು ರವಿಚಂದ್ರನ್ ಅಶ್ವಿನ್, ಒಂದೇ ಓವರ್‌ನಲ್ಲಿ ಎರಡು ಮಹತ್ವದ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಕಮ್‌ಬ್ಯಾಕ್ ಮಾಡುವಂತೆ ಮಾಡಿದ್ದಾರೆ. ಇದೀಗ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನ ಲಂಚ್ ಬ್ರೇಕ್ ವೇಳೆಗೆ ಆಸ್ಟ್ರೇಲಿಯಾ ತಂಡವು 3 ವಿಕೆಟ್ ಕಳೆದುಕೊಂಡು 94 ರನ್ ಕಲೆಹಾಕಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡವು, ಎರಡನೇ ಟೆಸ್ಟ್‌ನಲ್ಲಿ ದಿಟ್ಟ ಆರಂಭವನ್ನೇ ಪಡೆಯಿತು. ಉಸ್ಮಾನ್ ಖವಾಜ ಚುರುಕಾಗಿ ರನ್ ಗಳಿಸಿದರೆ, ಡೇವಿಡ್ ವಾರ್ನರ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಈ ಜೋಡಿ ಮೊದಲ ವಿಕೆಟ್‌ಗೆ 15.2 ಓವರ್‌ಗಳಲ್ಲಿ 50 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಈ ಜೋಡಿ ಅಪಾಯಕಾರಿಯಾಗುವ ಮುನ್ಸೂಚನೆ ಅರಿತ ನಾಯಕ ರೋಹಿತ್ ಶರ್ಮಾ, ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಕಣಕ್ಕಿಳಿಸಿದರು. ಶಮಿ, ಡೇವಿಡ್ ವಾರ್ನರ್ ಅವರನ್ನು ಮತ್ತೊಮ್ಮೆ ಪೆವಿಲಿಯನ್ನಿಗಟ್ಟುವ ಮೂಲಕ ನಾಯಕನ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಡೇವಿಡ್ ವಾರ್ನರ್ 44 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಎರಡನೇ ವಿಕೆಟ್‌ಗೆ ಮಾರ್ನಸ್ ಲಬುಶೇನ್ ಹಾಗೂ ಉಸ್ಮಾನ್ ಖವಾಜ ಕೂಡಾ ಚುರುಕಿನ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ 41 ರನ್‌ಗಳ ಜತೆಯಾಟ ನಿಭಾಯಿಸಿತು. ಮಾರ್ನಸ್ ಲಬುಶೇನ್ 25 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 18 ರನ್ ಬಾರಿಸಿ ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದೇ ಓವರ್‌ನಲ್ಲಿ ಸ್ಟೀವ್ ಸ್ಮಿತ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್ನಿಗಟ್ಟುವಲ್ಲಿ ಅಶ್ವಿನ್ ಯಶಸ್ವಿಯಾದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟೀವ್ ಸ್ಮಿತ್ ಅವರನ್ನು ಎರಡು ಬಾರಿ ಶೂನ್ಯಕ್ಕೆ ಬಲಿಪಡೆದ ಏಕೈಕ ಬೌಲರ್ ಎನ್ನುವ ಹಿರಿಮೆಗೆ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು.
ಚೇತೇಶ್ವರ್ ಪೂಜಾರ 100ನೇ ಟೆಸ್ಟ್: ಈ ಐತಿಹಾಸಿಕ ಸಾಧನೆ ಮಾಡಲು ಪೂಜಾರಗೆ ಗವಾಸ್ಕರ್ ಶುಭ ಹಾರೈಕೆ
ಆಸೀಸ್‌ಗೆ ಖವಾಜ ಆಸರೆ: ಮೊದಲ ಟೆಸ್ಟ್ ಪಂದ್ಯದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದ ಆಸೀಸ್ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ, ಎರಡನೇ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಆರಂಭದಿಂದಲೇ ಆಕ್ರಮಣಕಾರಿಯಾಟಕ್ಕೆ ಮೊರೆ ಹೋದ ಖವಾಜ, ಆಕರ್ಷಕ ಬೌಂಡರಿ ಬಾರಿಸುವ ಮೂಲಕ ಮಿಂಚಿದ್ದಾರೆ. ಸದ್ಯ ಖವಾಜ ಒಟ್ಟು 74 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 50 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ಟ್ರಾವಿಸ್ ಹೆಡ್ ಒಂದು ರನ್ ಗಳಿಸಿದ್ದಾರೆ.
