ನವ​ದೆ​ಹ​ಲಿ[ನ.01]: ರಾಷ್ಟ್ರ ರಾಜ​ಧಾನಿ​ಯಲ್ಲಿ ತೀವ್ರ ವಾಯು ಮಾಲಿ​ನ್ಯ​ವಿ​ದ್ದರೂ ಭಾರತ-ಬಾಂಗ್ಲಾ​ದೇಶ ನಡು​ವಿನ ಮೊದಲ ಟಿ20 ಪಂದ್ಯ ನ.3ರಂದು ನವ​ದೆ​ಹ​ಲಿಯ ಅರುಣ್ ಜೇಟ್ಲಿ ಮೈದಾನದಲ್ಲೇ ನಡೆ​ಯ​ಲಿದೆ ಎಂದು ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಸ್ಪಷ್ಟಪಡಿ​ಸಿ​ದ್ದಾರೆ. ಇದೇ ವೇಳೆ ಸರ​ಣಿ​ಯಲ್ಲಿ ಭಾರತ ತಂಡ​ವನ್ನು ಮುನ್ನ​ಡೆ​ಸ​ಲಿ​ರುವ ರೋಹಿತ್‌ ಶರ್ಮಾ, ಮಾಲಿ​ನ್ಯದಿಂದಾಗಿ ತಮ​ಗೇನು ತೊಂದರೆಯಾಗಿಲ್ಲ. ಪಂದ್ಯದ ದಿನವೂ ಯಾವುದೇ ಸಮ​ಸ್ಯೆಯಾಗು​ವು​ದಿಲ್ಲ ಎಂದು ಭರ​ವಸೆ ವ್ಯಕ್ತ​ಪ​ಡಿ​ಸಿ​ದ್ದಾರೆ.

ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ; ಮಾಸ್ಕ್ ಧರಿಸಿ ಬಾಂಗ್ಲಾ ಕ್ರಿಕೆಟಿಗರ ಅಭ್ಯಾಸ!

ಕೋಲ್ಕ​ತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಗುರು​ವಾರ ಮಾತ​ನಾ​ಡಿದ ಗಂಗೂಲಿ, ‘ಈಗ ಪಂದ್ಯ ಸ್ಥಳಾಂತ​ರಿ​ಸು​ವುದು ಅಸಾ​ಧ್ಯ. ಟಿಕೆಟ್‌ ಮಾರಾಟ ಸೇರಿ​ದಂತೆ ಹಲವು ಸವಾ​ಲು​ಗಳು ಎದು​ರಾ​ಗ​ಲಿವೆ. ಕೊನೆ ಕ್ಷಣದ ಬದ​ಲಾ​ವಣೆ ಕಷ್ಟ. ಆದರೆ ಮುಂದಿನ ದಿನ​ಗ​ಳಲ್ಲಿ ದೀಪಾ​ವಳಿ ಬಳಿಕ ಕೆಲ ದಿನ​ಗಳ ವರೆಗೂ ಹಾಗೂ ಚಳಿಗಾಲ​ದಲ್ಲಿ, ಉತ್ತರ ಭಾರ​ತ​ದಲ್ಲಿ ಪಂದ್ಯ​ಗ​ಳನ್ನು ಆಯೋ​ಜಿ​ಸು​ವಾಗ ಎಚ್ಚರ ವಹಿ​ಸ​ಲಾ​ಗು​ತ್ತದೆ’ ಎಂದರು.

ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ 72 ಪಿಂಕ್‌ ಬಾಲ್‌!

ಗುರು​ವಾರ ದೆಹ​ಲಿಗೆ ಬಂದಿ​ಳಿದ ಭಾರತ ತಂಡ, ಅಭ್ಯಾಸ ನಡೆ​ಸ​ಲಿಲ್ಲ. ಖಾಸಗಿ ಕಾರ್ಯ​ಕ್ರ​ಮ​ವೊಂದ​ರಲ್ಲಿ ಪಾಲ್ಗೊಂಡಿದ್ದ ರೋಹಿತ್‌, ಮಾಧ್ಯ​ಮ​ಗ​ಳೊಂದಿಗೆ ಮಾತ​ನಾ​ಡುತ್ತಾ ‘ನಾ​ವಿಲ್ಲಿ ಶ್ರೀಲಂಕಾ ವಿರುದ್ಧ ಇಂಥದ್ದೇ ವಾತಾ​ವ​ರಣದಲ್ಲಿ ಟೆಸ್ಟ್‌ ಆಡಿ​ದ್ದೇವೆ. ಸದ್ಯದ ಸ್ಥಿತಿ ಬಗ್ಗೆ ತಂಡ​ದಲ್ಲಿ ಗಂಭೀರವಾದ ಚರ್ಚೆ ಏನು ಆಗಿಲ್ಲ. ಆದರೆ ವೈಯ​ಕ್ತಿ​ಕ​ವಾಗಿ ನನಗೆ ಯಾವುದೇ ಸಮಸ್ಯೆಯಾಗಿಲ್ಲ’ ಎಂದರು.

ಬುಧ​ವಾರ ಭಾರ​ತಕ್ಕೆ ಬಂದ ಬಾಂಗ್ಲಾ​ದೇಶ ತಂಡ, ಗುರು​ವಾರ ಕೋಟ್ಲಾ ಮೈದಾ​ನ​ದಲ್ಲಿ ಅಭ್ಯಾಸ ನಡೆ​ಸಿತು. ತಂಡದ ಆಟ​ಗಾರ ಲಿಟನ್‌ ದಾಸ್‌ ಮಾಸ್ಕ್‌ ಧರಿಸಿ ಅಭ್ಯಾಸಕ್ಕಿಳಿ​ದಿದ್ದು ಹಲ​ವ​ರಲ್ಲಿ ಅಚ್ಚರಿ ಮೂಡಿ​ಸಿತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಲಿಟನ್‌, ದೆಹಲಿ ಮಾಲಿ​ನ್ಯಕ್ಕೂ ತಾವು ಮಾಸ್ಕ್‌ ಧರಿ​ಸಿ​ರು​ವು​ದಕ್ಕೂ ಸಂಬಂಧ​ವಿಲ್ಲ ಎಂದರು.