ಐಪಿಎಲ್ ಪಂದ್ಯದ ವೇಳೆ ಕ್ಯಾಚ್ ಹಿಡಿಯಲು ಹೋಗಿ ತಲೆಗೆ ಪೆಟ್ಟು ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಲುಂಗಿ ಎನ್‌ಗಿಡಿ ಅವರನ್ನು ಆಸ್ಪತ್ರೆಗೆ ಸಾಗಿಸಲು ದೆಹಲಿ ಪೊಲೀಸರು ಗ್ರೀನ್ ಕಾರಿಡಾರ್ ನಿರ್ಮಿಸಿ ಮಾನವೀಯತೆ ಮೆರೆದಿದ್ದಾರೆ. ದೆಹಲಿಯ ಭಾರಿ ಟ್ರಾಫಿಕ್ ನಡುವೆಯೂ, ಆಂಬ್ಯುಲೆನ್ಸ್ ಕೇವಲ 11 ನಿಮಿಷಗಳಲ್ಲಿ ಆಸ್ಪತ್ರೆ ತಲುಪಿದ್ದು, ಸದ್ಯ ಎನ್‌ಗಿಡಿ ಅವರ ಆರೋಗ್ಯ ಸ್ಥಿರವಾಗಿದೆ.

ನವದೆಹಲಿ: ಐಪಿಎಲ್ ಪಂದ್ಯದ ವೇಳೆ ಕ್ಯಾಚ್ ಹಿಡಿಯಲು ಹೋಗಿ ತಲೆಗೆ ಪೆಟ್ಟು ಮಾಡಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಲುಂಗಿ ಎನ್‌ಗಿಡಿ ಅವರನ್ನು ಆಸ್ಪತ್ರೆಗೆ ಸಾಗಿಸಲು ದೆಹಲಿ ಪೊಲೀಸರು ಗ್ರೀನ್ ಕಾರಿಡಾರ್ ನಿರ್ಮಿಸಿ ಮಾನವೀಯತೆ ಮೆರೆದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಈ ಘಟನೆ ನಡೆದಿದೆ.

ಪಂಜಾಬ್ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಪ್ರಿಯಾಂಶು ಆರ್ಯ ಅವರ ಕ್ಯಾಚ್ ಹಿಡಿಯಲು ಎನ್‌ಗಿಡಿ ಹಿಂದಕ್ಕೆ ಓಡಿದ್ದರು. ಈ ವೇಳೆ ನಿಯಂತ್ರಣ ತಪ್ಪಿ, ತಲೆ ಕೆಳಗೆ ಬಿದ್ದರು. ತಕ್ಷಣವೇ ಅವರನ್ನು ಸ್ಟ್ರೆಚರ್ ಮೂಲಕ ಆಂಬ್ಯುಲೆನ್ಸ್‌ಗೆ ಶಿಫ್ಟ್ ಮಾಡಲಾಯಿತು.

ಸಂಜೆ ಹೊತ್ತಿನ ಭಾರಿ ಟ್ರಾಫಿಕ್ ನಡುವೆಯೂ, ಎನ್‌ಗಿಡಿ ಇದ್ದ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ದೆಹಲಿ ಪೊಲೀಸರು ಮಾದರಿ ಕೆಲಸ ಮಾಡಿದ್ದಾರೆ. ಸ್ಟೇಡಿಯಂನಿಂದ ಬಿ.ಎಲ್.ಕೆ-ಮ್ಯಾಕ್ಸ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಯಾವುದೇ ಅಡೆತಡೆ ಇಲ್ಲದೆ ಹೋಗಲು 'ಗ್ರೀನ್ ಕಾರಿಡಾರ್' ವ್ಯವಸ್ಥೆ ಮಾಡಿದರು. ಬೆಂಗಳೂರಿನ ಟ್ರಾಫಿಕ್ ನೆನಪಿಸುವ ದೆಹಲಿಯ ರಸ್ತೆಗಳಲ್ಲಿ ಪೊಲೀಸರು ಟ್ರಾಫಿಕ್ ನಿಯಂತ್ರಿಸಿದ್ದರಿಂದ, ಕೇವಲ 11 ನಿಮಿಷಗಳಲ್ಲಿ ಎನ್‌ಗಿಡಿ ಅವರನ್ನು ಆಸ್ಪತ್ರೆಗೆ ತಲುಪಿಸಲಾಯಿತು.

Scroll to load tweet…

ಎಂಗಿಡಿ ಆರೋಗ್ಯದ ಅಪ್‌ಡೇಟ್ಸ್

ಎನ್‌ಗಿಡಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಐಪಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರೀಕ್ಷೆಗಳ ನಂತರ ಅವರನ್ನು ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಲೆಗೆ ಪೆಟ್ಟಾದ ಕಾರಣ ಎನ್‌ಗಿಡಿಗೆ ತೀವ್ರ ತಲೆನೋವು ಮತ್ತು ಕುತ್ತಿಗೆ ನೋವು ಕಾಣಿಸಿಕೊಂಡಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ, ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಹೆಚ್ಚಿನ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯಕ್ಕೆ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. 'ಹೆಡ್ ಇಂಜುರಿ ಪ್ರೊಟೊಕಾಲ್' ಪ್ರಕಾರವೇ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ, ಆತಂಕಪಡುವ ಅಗತ್ಯವಿಲ್ಲ ಎಂದು ಐಪಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ರನ್ ಚೇಸ್ ನಡೆದ ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ನೀಡಿದ್ದ 265 ರನ್‌ಗಳ ಗುರಿಯನ್ನು ಪಂಜಾಬ್ ತಂಡ ಏಳು ಎಸೆತಗಳು ಬಾಕಿ ಇರುವಂತೆಯೇ ತಲುಪಿತ್ತು. ಈ ಪಂದ್ಯದಲ್ಲಿ ಎನ್‌ಗಿಡಿ ಬೌಲಿಂಗ್ ಮಾಡದಿರುವುದು ಡೆಲ್ಲಿ ತಂಡಕ್ಕೆ ದೊಡ್ಡ ಹೊಡೆತ ನೀಡಿತು.

ಹೇಗಿತ್ತು ಡೆಲ್ಲಿ-ಪಂಜಾಬ್ ಮ್ಯಾಚ್?

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕನ್ನಡಿಗ ಕೆ ಎಲ್ ರಾಹುಲ್ ಬಾರಿಸಿದ ಅಜೇಯ 152 ಹಾಗೂ ನಿತೀಶ್ ರಾಣಾ ಬಾರಿಸಿದ ಸ್ಪೋಟಕ 91 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್ ಕಲೆಹಾಕಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ತಂಡಕ್ಕೆ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಪ್ರಿಯಾನ್ಶ್‌ ಆರ್ಯ ಕೇವಲ 6.5 ಓವರ್‌ಗಳಲ್ಲಿ 126 ರನ್ ಸಿಡಿಸುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಪ್ರಿಯಾನ್ಶ್‌ 43, ಪ್ರಭ್‌ಸಿಮ್ರನ್ ಸಿಂಗ್ 76, ನಾಯಕ ಶ್ರೇಯಸ್ ಅಯ್ಯರ್ ಅಜೇಯ 71 ರನ್ ಸಿಡಿಸುವ ಮೂಲಕ ಇನ್ನೂ ಆರು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.