ಐಪಿಎಲ್‌ನಲ್ಲಿ ಸತತ ಎರಡು ಗೆಲುವುಗಳಿಂದ ಬೀಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌, ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ, ಸತತ ಸೋಲುಗಳಿಂದ ಕಂಗೆಟ್ಟಿರುವ ಗುಜರಾತ್ ಟೈಟಾನ್ಸ್ ಗೆಲುವಿನ ಹಾದಿಗೆ ಮರಳಲು ಹೋರಾಡಲಿದೆ. ಆದರೆ, ಈ ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ.

ನವದೆಹಲಿ: ಈ ಬಾರಿ ಐಪಿಎಲ್‌ನಲ್ಲಿ ಆರಂಭಿಕ 2 ಪಂದ್ಯಗಳಲ್ಲೂ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಹ್ಯಾಟ್ರಿಕ್‌ ಜಯದ ಕಾತರದಲ್ಲಿದ್ದು, ಬುಧವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಾಡಲಿದೆ. ಮೊದಲೆರಡು ಪಂದ್ಯದಲ್ಲೂ ಪರಾಭವಗೊಂಡಿರುವ ಗುಜರಾತ್‌ ಹ್ಯಾಟ್ರಿಕ್‌ ಸೋಲು ತಪ್ಪಿಸಲು ಹೋರಾಡಬೇಕಿದೆ. ಆದರೆ ಇದೆಲ್ಲದರ ನಡುವೆ ಮಳೆಯ ಭೀತಿಯಿಂದಾಗಿ ಮ್ಯಾಚ್ ನಡಿಯೋದೇ ಅನುಮಾನ ಎನ್ನಲಾಗುತ್ತಿದೆ.

Add Asianetnews Kannada as a Preferred SourcegooglePreferred

ಎರಡೂ ಮ್ಯಾಚ್‌ನಲ್ಲೂ ಡೆಲ್ಲಿ ಗೆಲ್ಲಿಸಿದ ಸಮೀರ್ ರಿಜ್ವಿ

ಡೆಲ್ಲಿ 2 ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಎರಡರಲ್ಲೂ ಯುವ ಬ್ಯಾಟರ್‌ ಸಮೀರ್‌ ರಿಜ್ವಿ ಅಮೋಘ ಆಟವಾಡಿ, ತಂಡವನ್ನು ಗೆಲ್ಲಿಸಿದ್ದಾರೆ. ಸತತ 2 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಅವರು ಗುಜರಾತ್‌ ವಿರುದ್ಧವೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಆಡಿರುವ 2 ಪಂದ್ಯಗಳಲ್ಲಿ ಕೇವಲ 1 ರನ್‌ ಗಳಿಸಿರುವ ಕನ್ನಡಿಗ ಕೆ.ಎಲ್‌.ರಾಹುಲ್ ಲಯಕ್ಕೆ ಮರಳಲು ಕಾಯುತ್ತಿದ್ದಾರೆ. ನಿತೀಶ್‌ ರಾಣಾ ಒತ್ತಡದಲ್ಲಿ ಆಡುತ್ತಿದ್ದು, ಫಾರ್ಮ್‌ಗೆ ಮರಳಲು ಪರದಾಡುತ್ತಿದ್ದಾರೆ.

ಮತ್ತೊಂದೆಡೆ ಗುಜರಾತ್‌ ತಂಡ 2 ಪಂದ್ಯಗಳಲ್ಲೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದೆ. 2025ರಿಂದ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸರಾಸರಿ ಕೇವಲ 20.1. ಇದು ಯಾವುದೇ ತಂಡದ ಪೈಕಿ ಕನಿಷ್ಠ. ಹೀಗಾಗಿ ಆರಂಭಿಕ ಬ್ಯಾಟರ್‌ಗಳಾದ ಶುಭ್‌ಮನ್‌ ಗಿಲ್‌, ಸಾಯಿ ಸುದರ್ಶನ್‌, ಜೋಸ್‌ ಬಟ್ಲರ್‌ ಮೇಲೆ ಒತ್ತಡವಿದೆ. ಕಳೆದ ಪಂದ್ಯಕ್ಕೆ ಗೈರಾಗಿದ್ದ ಗಿಲ್‌ ಈ ಪಂದ್ಯದಲ್ಲಿ ಆಡಲಿದ್ದು, ತಂಡಕ್ಕೆ ಬಲ ಒದಗಿಸಿದೆ. ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ, ಕಗಿಸೊ ರಬಾಡ ತಂಡಕ್ಕೆ ನೆರವಾಗಬೇಕಿದೆ.

ಮುಖಾಮುಖಿ: 07

ಡೆಲ್ಲಿ: 03

ಗುಜರಾತ್: 04

--

ಸಂಭಾವ್ಯ ಆಟಗಾರರು

ಡೆಲ್ಲಿ ಕ್ಯಾಪಿಟಲ್ಸ್‌: ರಾಹುಲ್‌, ನಿಸ್ಸಾಂಕ, ನಿತೀಶ್‌, ಸಮೀರ್‌, ಮಿಲ್ಲರ್‌, ಸ್ಟಬ್ಸ್‌, ಅಕ್ಷರ್(ನಾಯಕ), ವಿಪ್ರಾಜ್‌, ಕುಲ್ದೀಪ್‌, ಲುಂಗಿ ಎನ್‌ಗಿಡಿ, ನಟರಾಜನ್‌, ಮುಕೇಶ್‌.

ಗುಜರಾತ್‌ ಟೈಟಾನ್ಸ್: ಗಿಲ್‌(ನಾಯಕ), ಸುದರ್ಶನ್‌, ಬಟ್ಲರ್‌, ವಾಷಿಂಗ್ಟನ್‌, ಗ್ಲೆನ್‌ ಫಿಲಿಪ್ಸ್‌, ಶಾರುಖ್‌, ರಾಹುಲ್ ತೆವಾಟಿಯಾ, ರಶೀದ್‌, ರಬಾಡ, ಪ್ರಸಿದ್ಧ್‌, ಸಿರಾಜ್‌, ಅಶೋಕ್‌,

ಪಂದ್ಯ: ಸಂಜೆ 7.30ಕ್ಕೆ

2 ಪಂದ್ಯಗಳಿಗೆ ಮಳೆ ಕಾಟ, ಇನ್ನೆರಡು ಪಂದ್ಯಕ್ಕೂ ಭೀತಿ

ಸೋಮವಾರ ಕೋಲ್ಕತಾದಲ್ಲಿ ನಡೆಯಬೇಕಿದ್ದ ಪಂಜಾಬ್‌ ಹಾಗೂ ಕೆಕೆಆರ್‌ ನಡುವಿನ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಮಂಗಳವಾರ ಗುವಾಹಟಿಯಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತು. ಪಂದ್ಯ ಬರೋಬ್ಬರಿ 2 ಗಂಟೆ 40 ನಿಮಿಷ ತಡವಾಗಿ ಆರಂಭಗೊಂಡಿತು. 

ಬುಧವಾರ ನವದೆಹಲಿಯಲ್ಲಿ ನಡೆಯಲಿರುವ ಡೆಲ್ಲಿ-ಗುಜರಾತ್‌ ನಡುವಿನ ಪಂದ್ಯಕ್ಕೂ ಮಳೆ ಭೀತಿ ಇದೆ. ನಗರದಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಇನ್ನು, ಕೋಲ್ಕತಾದಲ್ಲಿ ಮಳೆ ಇನ್ನೂ ಕಡಿಮೆಯಾಗಿಲ್ಲ. ಇದರಿಂದಾಗಿ ಗುರುವಾರ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಬೇಕಿರುವ ಕೆಕೆಆರ್ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಬಹುದು.