ಡೆಲ್ಲಿ ಕ್ಯಾಪಿಟಲ್ಸ್ ತವರಿನಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ 14 ರನ್‌ಗಳಿಂದ ಸೋಲನುಭವಿಸಿದೆ. ಕೆಕೆಆರ್ 204/9 ರನ್ ಗಳಿಸಿದರೆ, ಡೆಲ್ಲಿ 190/9 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿಯ ನಂಬಿಗಸ್ಥ ಬ್ಯಾಟರ್‌ಗಳು ಕೈಕೊಟ್ಟರು ಮತ್ತು ಕೆಕೆಆರ್‌ನ ಮಿಸ್ಟ್ರಿ ಸ್ಪಿನ್ನರ್‌ಗಳು ಮಿಂಚಿದರು.

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತವರಿನಲ್ಲಿ ಸತತ 2ನೇ ಸೋಲು ಅನುಭವಿಸಿದ್ದು, ಪ್ಲೇ-ಆಫ್‌ನಲ್ಲಿ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗುತ್ತಿರುವ ಸಮಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತಂಡದ ಕನಸಿಗೆ ಅಡ್ಡಿಯಾಗಿದೆ.

ಮಂಗಳವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ಪಡೆಯನ್ನು 14 ರನ್‌ಗಳಿಂದ ಬಗ್ಗುಬಡಿಯಿತು. ಈ ಆವೃತ್ತಿಯಲ್ಲಿ 4ನೇ ಜಯ ಸಾಧಿಸಿದ ಹಾಲಿ ಚಾಂಪಿಯನ್ ತಂಡ, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್, 20 ಓವರಲ್ಲಿ 9 ವಿಕೆಟ್‌ಗೆ 204 ರನ್ ಕಲೆಹಾಕಿತು. ಅಂಗ್‌ಕೃಷ್ ರಘುವಂಶಿ ಹಾಗೂ ರಿಂಕು ಸಿಂಗ್‌ ಹೋರಾಟ, ಕೊನೆಯಲ್ಲಿ ಆಲ್ರೌಂಡರ್ ಆ್ಯಂಡ್ರೆ ರಸೆಲ್ 9 ಎಸೆತದಲ್ಲಿ 17 ರನ್ ಕೊಡುಗೆ ನೀಡಿದ್ದು, ತಂಡ ದೊಡ್ಡ ಮೊತ್ತ ಕಲೆಹಾಕಲು ಕಾರಣವಾಯಿತು. ಮಿಚೆಲ್ ಸ್ಟಾರ್ಕ್ 3 ವಿಕೆಟ್ ಕಿತ್ತರೂ, 4 ಓವರಲ್ಲಿ 43 ರನ್ ನೀಡಿ ದುಬಾರಿಯಾದರು. 

ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಅಭಿಷೇಕ್ ಪೊರೆಲ್ (4), ಕರುಣ್ ನಾಯರ್ (15), ಕೆ.ಎಲ್.ರಾಹುಲ್ (1) ವೈಫಲ್ಯ ಕಂಡರೂ, ಫಾಫ್ ಡು ಪ್ಲೆಸಿ ಹಾಗೂ ನಾಯಕ ಅಕ್ಷರ್ ಪಟೇಲ್‌ ಹೋರಾಟ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿತ್ತು. ಡು ಪ್ಲೆಸಿ 45 ಎಸೆತದಲ್ಲಿ 62 ರನ್ ಸಿಡಿಸಿದರೆ, ಅಕ್ಷರ್ 23 ಎಸೆತದಲ್ಲಿ 43 ರನ್ ಕಲೆಹಾಕಿದರು. ಕೊನೆಯಲ್ಲಿ ವಿಪ್ರಜ್ ನಿಗಂ 19 ಎಸೆತದಲ್ಲಿ 38 ರನ್ ಗಳಿಸಿ ಹೋರಾಟ ಪ್ರದರ್ಶಿಸಿದರೂ, ಹಾಲಿ ಚಾಂಪಿಯನ್ನರನ್ನು ಗೆಲುವಿನಿಂದ ದೂರವಿಡಲು ಸಾಧ್ಯವಾಗಲಿಲ್ಲ. ನರೇನ್ 3, ವರುಣ್ 2 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಡೆಲ್ಲಿ ಸೋಲಿಗೆ ಎರಡು ಪ್ರಮುಖ ಕಾರಣ

1, ಕೈಕೊಟ್ಟ ಡೆಲ್ಲಿ ನಂಬಿಗಸ್ಥ ಬ್ಯಾಟರ್‌ಗಳು: ಡೆಲ್ಲಿ ತಂಡವು ಈ ಬಾರಿಯ ಐಪಿಎಲ್‌ನಲ್ಲಿ ಯಶಸ್ವಿ ಪ್ರದರ್ಶನ ತೋರಲು ಕಾರಣವಾಗಿದ್ದೇ ಪ್ರಮುಖ ಬ್ಯಾಟರ್‌ಗಳ ಕಾಂಟ್ರಿಬ್ಯೂಷನ್‌ನಿಂದ. ತಂಡದ ಅಗ್ರಕ್ರಮಾಂಕದ ಬ್ಯಾಟರ್ ಅಭಿಷೇಕ್ ಪೊರೆಲ್, ಕೆ ಎಲ್ ರಾಹುಲ್ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ ಕಟ್ಟಿದ್ದಾರೆ. ಆದರೆ ಕೋಲ್ಕತಾ ನೈಟ್ ರೈಡರ್ಸ್ ಎದುರು ಈ ಮೂವರು ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು, ಡೆಲ್ಲಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

3 ಮೋಡಿ ಮಾಡಿದ ಕೆಕೆಆರ್ ಮಿಸ್ಟ್ರಿ ಸ್ಪಿನ್ನರ್ಸ್‌: ಕಳೆದ ಪಂದ್ಯದಲ್ಲಿ ಕೊಂಚ ಲಯ ತಪ್ಪಿದಂತೆ ಕಂಡು ಬಂದಿದ್ದ ಕೆಕೆಆರ್ ತಂಡದ ಮಿಸ್ಟ್ರಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್‌ ಮಹತ್ವದ ಪಂದ್ಯದಲ್ಲಿ ತಂಡದ ಗೆಲುವಿಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರಲ್ಲೂ ಸುನಿಲ್ ನರೈನ್, ಡೆಲ್ಲಿಯ ಅಪಾಯಕಾರಿ ಬ್ಯಾಟರ್‌ಗಳಾದ ಫಾಫ್ ಡು ಪ್ಲಸಿಸ್, ಅಕ್ಷರ್ ಪಟೇಲ್ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ವಿಕೆಟ್ ಕಬಳಿಸಿ ಪಂದ್ಯದ ದಿಕ್ಕನ್ನೆ ಬದಲಿಸಿದರು. ಇನ್ನು ವರುಣ್ ಚಕ್ರವರ್ತಿ ಎರಡು ವಿಕೆಟ್ ಕಬಳಿಸುವ ಮೂಲಕ ನರೈನ್‌ಗೆ ಉತ್ತಮ ಸಾಥ್ ನೀಡಿದರು.

ಸ್ಕೋರ್: ಕೆಕೆಆರ್ 20 ಓವರಲ್ಲಿ 204/9 (ಅಂಗ್ ಕೃಷ್ 44, ರಿಂಕು 36, ಸ್ಟಾರ್ಕ್ 3-43), ಡೆಲ್ಲಿ 20 ಓವರಲ್ಲಿ 190/9 (ಡು ಪ್ಲೆಸಿ 62, ಅಕ್ಷರ್ 43, ವಿಪ್ರಜ್ 38, ನರೇನ್ 3-29, ವರುಣ್ 2-39)