ಶುಭ್‌ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಗುಜರಾತ್ ಟೈಟಾನ್ಸ್, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 39 ರನ್‌ಗಳ ಜಯ ಸಾಧಿಸಿತು. ಗಿಲ್ ಮತ್ತು ಸುದರ್ಶನ್ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು.
ಕೋಲ್ಕತಾ: ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್, 2025ರ ಐಪಿಎಲ್‌ನಲ್ಲಿ ಪ್ಲೇ-ಆಫ್‌ನತ್ತ ಮುನ್ನುಗ್ಗುತ್ತಿದೆ. ಈ ಆವೃತ್ತಿಯಲ್ಲಿ 6ನೇ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸೋಮವಾರ ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ 39 ರನ್‌ಗಳ ಗೆಲುವು ಸಾಧಿಸಿತು. ಕೆಕೆಆರ್‌ಗೆ ತವರಿನಲ್ಲಿ ಇದು 3ನೇ ಸೋಲು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್, ನಾಯಕ ಶುಭ್‌ಮನ್ ಗಿಲ್ ಹಾಗೂ ಸಾಯಿ ಸುದರ್ಶನ್‌ರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 20 ಓವರಲ್ಲಿ 3 ವಿಕೆಟ್‌ಗೆ 198 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಕೆಕೆಆರ್, ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ತಾರಾ ಸ್ಪಿನ್ನರ್ ರಶೀದ್ ಖಾನ್‌ರ ಆಕರ್ಷಕ ಬೌಲಿಂಗ್ ದಾಳಿ ಎದುರು ಪರದಾಡಿ 20 ಓವರಲ್ಲಿ 8 ವಿಕೆಟ್‌ಗೆ 159 ರನ್ ಗಳಿಸಲಷ್ಟೇ ಶಕ್ತವಾಯಿತು.
ಶತಕದ ಜೊತೆಯಾಟ: ಗಿಲ್ ಹಾಗೂ ಸುದರ್ಶನ್, ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿ ಗುಜರಾತ್‌ಗೆ ಭರ್ಜರಿ ಆರಂಭ ಒದಗಿಸಿದರು. 12.2 ಓವರಲ್ಲಿ ಈ ಜೋಡಿ 114 ರನ್ ಸೇರಿಸಿತು. 36 ಎಸೆತದಲ್ಲಿ 6 ಬೌಂಡರಿ, 1 ಸಿಕ್ಸರ್‌ನೊಂದಿಗೆ 52 ರನ್ ಸಿಡಿಸಿ, ಸುದರ್ಶನ್ ಔಟಾದಾಗ ಈ ಜೊತೆಯಾಟಕ್ಕೆ ತೆರೆ ಬಿತ್ತು.
2ನೇ ವಿಕೆಟ್‌ಗೆ ಗಿಲ್ ಜೊತೆಗೆ ಜೋಸ್ ಬಟ್ಲರ್ ಕೈ ಜೋಡಿಸಿ, ತಂಡದ ರನ್ ಗಳಿಕೆ ವೇಗ ಕಳೆದುಕೊಳ್ಳುವಂತೆ ನೋಡಿಕೊಂಡರು. 55 ಎಸೆತದಲ್ಲಿ 10 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 90 ರನ್ ಗಳಿಸಿ ಔಟಾದ ಗಿಲ್, ಶತಕದಿಂದ ವಂಚಿತರಾದರು. ಜೋಸ್ ಬಟ್ಲರ್ 23 ಎಸೆತದಲ್ಲಿ 8 ಬೌಂಡರಿಯೊಂದಿಗೆ ಔಟಾಗದೆ 41 ರನ್ ಸಿಡಿಸಿದರೆ, ಶಾರುಖ್ ಖಾನ್ 5 ಎಸೆತದಲ್ಲಿ 11 ರನ್ ಸಿಡಿಸಿ ಅಜೇಯವಾಗಿ ಉಳಿದರು.
ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ವೈಭವ್ ಅರೋರ, ಹರ್ಷಿತ್ ರಾಣಾ ಹಾಗೂ ಆಂಡ್ರೆ ರಸೆಲ್ ತಲಾ ಒಂದೊಂದು ವಿಕೆಟ್ ಪಡೆದರು. ಆದರೆ ಪ್ರಮುಖ ಸ್ಪಿನ್ ಅಸ್ತ್ರಗಳಾದ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ ವಿಕೆಟ್ ಕಬಳಿಸಲು ವಿಫಲರಾದರು.
ಕೆಕೆಆರ್ ಕುಸಿತ: ಕೋಲ್ಕತಾಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕ್ವಿಂಟನ್ ಡಿ ಕಾಕ್ ಬದಲು ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಜ್ ಕೇವಲ 1 ರನ್ ಗಳಿಸಿ ಔಟಾದರೆ, ಸುನಿಲ್ ನರೈನ್ ಆಟ 17 ರನ್‌ಗೆ ಕೊನೆಗೊಂಡಿತು. ವೆಂಕಟೇಶ್ ಅಯ್ಯರ್ 14 ರನ್ ಗಳಿಸಲು 19 ಎಸೆತ ವ್ಯರ್ಥ ಮಾಡಿದರು. ರಿಂಕು ಸಿಂಗ್ 17, ಆ್ಯಂಡ್ರೆ ರಸೆಲ್ 21, ರಮಣ್‌ದೀಪ್ 1 ನಿರಾಸೆ ಮೂಡಿಸಿದರು. ಏಕಾಂಗಿ ಹೋರಾಟ ನಡೆಸಿದ ನಾಯಕ ಅಜಿಂಕ್ಯ ರಹಾನೆ 36 ಎಸೆತದಲ್ಲಿ 50 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಅಂಗ್‌ಕೃಷ್ ರಘುವಂಶಿ 27 ರನ್ ಸಿಡಿಸಿ, ಸೋಲಿನ ಅಂತರವನ್ನು ತಗ್ಗಿಸಿದರು. ಅಂಕಪಟ್ಟಿಯಲ್ಲಿ ಕೆಕೆಆರ್ 7ನೇ ಸ್ಥಾನದಲ್ಲೇ ಉಳಿದುಕೊಂಡಿತುಗುಜರಾತ್ ಟೈಟಾನ್ಸ್ ಪರ ನೀಳಕಾಯದ ವೇಗಿ ಪ್ರಸಿದ್ದ್ ಕೃಷ್ಣ ಹಾಗೂ ಲೆಗ್ ಸ್ಪಿನ್ನರ್ ರಶೀದ್ ಖಾನ್ ತಲಾ ಎರಡು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‌ಗಳಾಗಿ ಹೊರಹೊಮ್ಮಿದರು. ಇನ್ನು ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್ ಹಾಗೂ ಆರ್ ಸಾಯಿ ಕಿಶೋರ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
