Asianet Suvarna News Asianet Suvarna News

ಟೀಂ ಇಂಡಿಯಾ ಮಾರಕ ದಾಳಿ: ಸಾಧಾರಣ ಮೊತ್ತಕ್ಕೆ ಜಿಂಬಾಬ್ವೆ ಆಲೌಟ್..!

ಜಿಂಬಾಬ್ವೆ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಮಿಂಚಿದ ಭಾರತೀಯ ಬೌಲರ್‌ಗಳು
* ತಲಾ 3 ವಿಕೆಟ್ ಕಬಳಿಸಿದ ದೀಪಕ್ ಚಹರ್, ಪ್ರಸಿದ್ದ್ ಕೃಷ್ಣ, ಅಕ್ಷರ್ ಪಟೇಲ್
* ಭಾರತಕ್ಕೆ ಮೊದಲ ಏಕದಿನ ಪಂದ್ಯ ಗೆಲ್ಲಲು 190 ರನ್‌ಗಳ ಸಾಧಾರಣ ಗುರಿ

Deep Chahar Siraj Prasidh Shine Zimbabwe sets 190 runs target to Team India in 1st ODI kvn
Author
Bengaluru, First Published Aug 18, 2022, 4:03 PM IST

ಹರಾರೆ(ಆ.18): ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಮಾರಕ ದಾಳಿ ನಡೆಸುವ ಮೂಲಕ ಜಿಂಬಾಬ್ವೆ ಬ್ಯಾಟರ್‌ಗಳನ್ನು ತಬ್ಬಿಬ್ಬುಗೊಳಿಸಿದ್ದಾರೆ. ದೀಪಕ್ ಚಹರ್, ಪ್ರಸಿದ್ದ್ ಕೃಷ್ಣ, ಅಕ್ಷರ್ ಪಟೇಲ್, ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಜಿಂಬಾಬ್ವೆ ತಂಡವು ಕೇವಲ 189 ರನ್‌ಗಳಿಗೆ ಸರ್ವಪತನ ಕಂಡಿದೆ. 

ಇಲ್ಲಿನ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ ಎಲ್ ರಾಹುಲ್, ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಯಶಸ್ವಿಯಾದರು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲಿಳಿದ ಆತಿಥೇಯ ಜಿಂಬಾಬ್ವೆ ತಂಡವು ಎಚ್ಚರಿಕೆಯ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಇನೋಸೆಂಟ್ ಕಾಲಾ ಹಾಗೂ ಮುರುಮಾನಿ ರಕ್ಷಣಾತ್ಮಕ ಆಟಕ್ಕೆ ಮೊರೆಹೋದರು. ಮೊದಲ 6.4 ಓವರ್‌ಗಳಲ್ಲಿ ಈ ಜೋಡಿ 25 ರನ್‌ಗಳ ಜತೆಯಾಟವಾಡಿತು.

ದೀಪಕ್ ಚಹರ್ ಮಾರಕ ದಾಳಿ: ಗಾಯದ ಸಮಸ್ಯೆಯಿಂದಾಗಿ ಕಳೆದ 6 ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಇದೀಗ ಕಮ್‌ಬ್ಯಾಕ್‌ ಪಂದ್ಯದಲ್ಲಿ ಕೇವಲ  4 ಎಸೆತಗಳಲ್ಲೇ ಜಿಂಬಾಬ್ವೆ ಆರಂಭಿಕ ಬ್ಯಾಟರ್‌ಗಳಿಬ್ಬರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.  ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ವೆಸ್ಲೆ ಮಡೆವೆರೆ (5) ಕೂಡಾ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ದೀಪಕ್ ಚಹರ್ ಅವಕಾಶ ನೀಡಲಿಲ್ಲ.

ಕೊಂಚ ಪ್ರತಿರೋಧ ತೋರಿದ ಮಧ್ಯಮ ಕ್ರಮಾಂಕ: ಜಿಂಬಾಬ್ವೆ ತಂಡದ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು. ಜಿಂಬಾಬ್ವೆ ತಂಡವು ಕೇವಲ 6 ರನ್‌ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಜಿಂಬಾಬ್ವೆ ತಂಡವು ಒಂದು ಹಂತದಲ್ಲಿ 10.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 31 ರನ್‌ ಗಳಿಸಿತ್ತು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸಿಕಂದರ್ ರಾಜಾ(12), ನಾಯಕ ರೆಗಿಸ್‌ ಚಕಬ್ವಾ(35), ರಿಯಾನ್ ಬುರ್ಲ್‌(11) ಹಾಗೂ ಲೂಕ್ ಜೋಗ್ವೆ(13) ಉಪಯುಕ್ತ ರನ್ ಕಾಣಿಕೆ ನೀಡುವ ಮೂಲಕ ರನ್‌ ಕಾಣಿಕೆ ನೀಡಿದರು.

Ind vs Zim ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ಜಿಂಬಾಬ್ವೆಗೆ ಆಸರೆಯಾದ ಗರಾವ- ಎವಾನ್ಸ್‌ ಜತೆಯಾಟ: ಹೌದು, ಒಂದು ಹಂತದಲ್ಲಿ ಜಿಂಬಾಬ್ವೆ ತಂಡವು ಕೇವಲ 110 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ 9ನೇ ವಿಕೆಟ್‌ಗೆ ರಿಚರ್ಡ್‌ ಗರಾವ ಹಾಗೂ ಬ್ರಾಡ್ ಇವಾನ್ಸ್‌ 70 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ತಲುಪಿಸಿದರು. ಆಕರ್ಷಕ ಬ್ಯಾಟಿಂಗ್ ನಡೆಸಿದ ರಿಚರ್ಡ್ ಗರಾವ 42 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 34 ರನ್ ಬಾರಿಸಿ ಪ್ರಸಿದ್ದ್ ಕೃಷ್ಣಗೆ ವಿಕೆಟ್‌ ಒಪ್ಪಿಸಿದರೇ, ಮತ್ತೊಂದು ತುದಿಯಲ್ಲಿ ಬ್ರಾಡ್ ಎವಾನ್ಸ್‌ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 33 ರನ್ ಬಾರಿಸಿದರು.

ಟೀಂ ಇಂಡಿಯಾ ಪರ  ವೇಗಿ ದೀಪಕ್ ಚಹರ್, ಪ್ರಸಿದ್ದ್ ಕೃಷ್ಣ ಹಾಗೂ ಲೆಗ್‌ ಸ್ಪಿನ್ನರ್ ಅಕ್ಷರ್ ಪಟೇಲ್ ತಲಾ 3 ವಿಕೆಟ್ ಕಬಳಿಸಿದರೇ, ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಕಬಳಿಸಿದರು. ಇನ್ನು ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ 10 ಓವರ್ ಬೌಲಿಂಗ್ ಮಾಡಿದರೂ ಸಹಾ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ.

Follow Us:
Download App:
  • android
  • ios