ಮುಂಬೈ(ಜೂ.04): ಪ್ರಾಣಿಗಳ ಹಿಂಸೆ ಗಂಭೀರ ಅಪರಾಧ. ಹಾಗಂತ ಭಾರತದಲ್ಲಿ ಪ್ರಾಣಿಗಳ ಹಿಂಸೆ ಕಡಿಮೆಯಾಗಿಲ್ಲ. ಪ್ರತಿ ದಿನ ಒಂದಲ್ಲೂ ಒಂದು ರೀತಿಯಲ್ಲಿ ಪ್ರಾಣಿಗಳ ಹಿಂಸೆ ನೀಡಿದ ಘಟನೆಗಳು ಮರುಕಳಿಸುತ್ತಲೇ ಇದೆ. ಆದರೆ ಕೇರಳದಲ್ಲಿ ನಡೆದ ಘಟನೆ ಇಡೀ ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ಮನುಷ್ಯನ ಕ್ರೂರತೆಗೆ ಹಿಡಿದ ಕನ್ನಡಿ. ಆಹಾರ ಹುಡುಗಿ ಗ್ರಾಮಿವಿಡೀ ಅಲೆದಾಡಿದ ಗರ್ಭಿಣಿ ಆನೆಗೆ ಕಟುಕರು ಸ್ಫೋಟಕವಿಟ್ಟ ಪೈನಾಪಲ್ ನೀಡಿ ಕೊಂದೇ ಬಿಟ್ಟಿದ್ದರು. ಈ ಸುದ್ದಿ ಕೇಳಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಕ್ರೂರತೆ ನಿಲ್ಲಿಸಲು ಮನವಿ ಮಾಡಿದ್ದಾರೆ.

ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!.

ಕೇರಳದ ಘಟನೆ ಕೇಳಿ ಬೆಚ್ಚಿ ಬಿದ್ದಿದ್ದೇನೆ. ದಯವಿಟ್ಟು ಪ್ರಾಣಿಗಳನ್ನು ಪ್ರೀತಿಯಿಂದ, ಅಕ್ಕರೆಯಿಂದ ಆರೈಕೆ ಮಾಡಿ. ಇಂತಹ ಹೇಡಿತನದ ಕ್ರೊರತೆಯನ್ನು ನಿಲ್ಲಿಸಿ ಎಂದು ಕೊಹ್ಲಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

 

ಇತ್ತ ರೋಹಿತ್ ಶರ್ಮಾ ಕೂಡ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ನಾವು ಅನಾಗರಿಕರು. ನಾವಿನ್ನು ಕಲಿತಿಲ್ಲ. ಕೇರಳದಲ್ಲಿ ಗರ್ಭಿಣಿ ಆನೆ ಪ್ರಕರಣ ಕೇಳಿ ಅತೀವ ನೋವಾಗಿದೆ. ಯಾವ ಪ್ರಾಣಿಯನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದು ರೋಹಿತ್ ಮನವಿ ಮಾಡಿದ್ದಾರೆ. 

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಈ ಅಮಾನವೀಯ ಘಟನೆಯನ್ನು ಅರಗಿಸಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ.  ಆಹಾರವಿಲ್ಲದೆ ಸೊರಗಿದ್ದ ಗರ್ಭಿಣಿ ಆನೆ, ಕಟುಕರು ನೀಡಿದ ಪೈನಾಪಲ್ ಹಿಂದೂ ಮುಂದೂ ಯೋಚಿಸಿದೆ ತಿಂದಿತ್ತು. ಆದರೆ ದವಡೆಯಲ್ಲಿ ಸ್ಫೋಟಕವಿದ್ದ ಪೈನಾಪಲ್ ಸ್ಫೋಟಗೊಂಡಿತ್ತು. ಹೀಗಾಗಿ ಸಂಪೂರ್ಣ ದವಡೆ, ಬಾಯಿ ಪುಡಿ ಪುಡಿಯಾಗಿತ್ತು. ನೋವಿನಿಂದ ನರಳಿದ ಹೆಣ್ಣಾನೆ, ಹೊಟ್ಟೆಯೊಳಗಿನ ಪುಟ್ಟ ಕಂದಮ್ಮನನ್ನು ರಕ್ಷಿಸಲು ಇನ್ನಿಲ್ಲದ ಕಸರತ್ತು ಮಾಡಿತ್ತು. 

ಆನೆ ಮರಿ ರಕ್ಷಿಸಲು ಕಾಲುವೆಗಿಳಿದಾತ ತನ್ನದೇ ಪ್ರಾಣ ಕಳೆದುಕೊಂಡ!

ಅತ್ತ ಯಾವ ಆಹಾರ ತಿನ್ನಲೂ ಆಗದೆ, ಇತ್ತ ನರಕ ವೇದನೆ ತಾಳಲಾರದೆ, ನದಿಯಲ್ಲಿ ಸೊಂಡಿಲ ಮುಳುಗಿಸಿ ನಿಂತು ಬಿಟ್ಟಿತು. ಅದೇನು ಮಾಡಿದರೂ ಅನೆಯನ್ನು ದಡ ಸೇರಿಸಲು ಸಾಧ್ಯವಾಗಲಿಲ್ಲ. ಸೊಂಡಿಲ ಮುಳುಗಿಸಿ ಹೆಣ್ಣಾನೆ ಸವಾನಪ್ಪಿದ್ದಲ್ಲದೆ, ಹೊಟ್ಟೆಯೊಳಗಿನ ಪುಟ್ಟ ಆನೆಮರಿ ಕೂಡ ಉಸಿರುಗಟ್ಟಿ ಸಾವನ್ನಪ್ಪಿತ್ತು. ಈ ಸುದ್ದಿ ಕೇಳಿದ ಕೊಹ್ಲಿ ಹಾಗೂ ರೋಹಿತ್ ಟ್ವಿಟರ್ ಮೂಲಕ ಕ್ರೂರತೆ ನಿಲ್ಲಿಸಲು ಮನವಿ ಮಾಡಿದ್ದಾರೆ.

ಸಂಪೂರ್ಣ ಸಾಕ್ಷರತೆ ಹೊಂದಿದ ಕೇರಳ ರಾಜ್ಯದ ಈ ಕಟುಕರಿಗೆ ಇಂತಹ ಮನವಿ ಓದಿ ಅರ್ಥಮಾಡಿಕೊಳ್ಳುವ ಅಥವಾ ಆನೆಯ ನೋವು ಅರಿಯುವ ಶಕ್ತಿ ಇದ್ದಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ.