IPL 2022 ಡೆಲ್ಲಿ ವಿರುದ್ಧ ಮುಂಬೈಗೆ ಗೆಲುವು, ಆರ್‌ಸಿಬಿಗೆ ಸಿಕ್ತು ಪ್ಲೇ ಆಫ್ ಚಾನ್ಸ್!
- ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ ಮುಂಬೈ ಇಂಡಿಯನ್ಸ್
- ಮುಂಬೈ ಗೆಲುವಿನಿಂದ ಆರ್‌ಸಿಬಿ ಪ್ಲೇ ಆಫ್ ಪ್ರವೇಶ
- ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಔಟ್
ಮುಂಬೈ(ಮೇ.21): ಕೊನೆಗೂ ಆರ್‌ಸಿಬಿ ಅಭಿಮಾನಿಗಳ ಪ್ರಾರ್ಥನೆ ಫಲಿಸಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಗೆಲುವಿಗಾಗಿ ಹಾತೊರೆಯುತ್ತಿದ್ದ ಆರ್‌ಸಿಬಿ ಲೆಕ್ಕಾಚಾರ ವರ್ಕೌಟ್ ಆಗಿದೆ. ಮಹತ್ವದ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮುಂಬೈ ಇಂಡಿಯನ್ಸ್ ಮಣಿಸಿದೆ. ಈ ಮೂಲಕ ಮುಂಬೈ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಇತ್ತ ಡೆಲ್ಲಿ ಟೂರ್ನಿಯಿಂದ ಹೊರಬಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಿದೆ.
ಐಪಿಎಲ್ 2022 ಟೂರ್ನಿಯ ಪ್ಲೇ ಫ್ ಹಂತಕ್ಕೆ ನಾಲ್ಕನೇ ತಂಡವಾಗಿ ಆರ್‌ಸಿಬಿ ಲಗ್ಗೆ ಇಟ್ಟಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತೀವ್ರ ನಿರಾಸೆಯೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಪ್ಲೇ ಆಪ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ, ಲಖನೌ ವಿರುದ್ದ ಹೋರಾಟ ನಡೆಸಲಿದೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 160 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಲಿ ಅನ್ನೋದು ಆರ್‌ಸಿಬಿ ಪ್ರಾರ್ಥನೆಯಾಗಿತ್ತು. ಆದರೆ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಪತನ ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಆರ್‌ಸಿಬಿಯಲ್ಲಿ ಆತಂಕ ಹೆಚ್ಚಿಸಿತ್ತು. ಇತ್ತ ಇಶಾನ್ ಕಿಶನ್ ಹಾಗೂ ಡೇವಾಲ್ಡ್ ಬ್ರೆವಿಸ್ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ ಚೇತರಿಸಿಕೊಂಡಿತು.
ಇಶಾನ್ ಕಿಶನ್ 35 ಎಸೆತದಲ್ಲಿ 48 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಡೇವಾಲ್ಡ್ ಬ್ರೆವಿಸ್ 37 ರನ್ ಸಿಡಿಸಿ ನಿರ್ಗಮಿಸಿದರು. 95 ರನ್‌ಗಳಿಗೆ ಮುಂಬೈ ಇಂಡಿಯನ್ಸ್ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಚಿಂತೆಯಾಯಿತು.
ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಬ್ಯಾಟಿಂಗ್ ಮುಂಬೈ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿದರೆ, ಇತ್ತ ಆರ್‌ಸಿಬಿ ಪಾಳಯದಲ್ಲಿ ಪ್ಲೇ ಆಫ್ ಲೆಕ್ಕಾಚಾರ ಹೆಚ್ಚಾಗತೊಡಗಿತು. ಟಿಮ್ ಡೇವಿಡ್ 34 ರನ್ ಸಿಡಿಸಿ ಔಟಾದರು.ಅಷ್ಟರಲ್ಲಿ ಮುಂಬೈ ಗೆಲುವಿನ ಹಾದಿಯಲ್ಲಿ ಸಾಗಿತ್ತು. ಮಂಬೈ ಇಂಡಿಯನ್ಸ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 14 ರನ್ ಅವಶ್ಯಕತೆ ಇತ್ತು.
21 ರನ್ ಸಿಡಿಸಿದ ತಿಲಕ್ ವರ್ಮಾ ವಿಕೆಟ್ ಪತನಗೊಂಡಿತು. ಮುಂಬೈ ಗೆಲುವಿಗೆ ಅಂತಿಮ 6 ಎಸೆತದಲ್ಲಿ 5 ರನ್ ಅವಶ್ಯಕತೆ ಇತ್ತು. ರಮನದೀಪ್ ಸಿಂಗ್ ಭರ್ಜರಿ ಬೌಂಡರಿಯೊಂದಿಗೆ ಮುಂಬೈ ಇಂಡಿಯನ್ಸ್ 19.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಮುಂಬೈ 5 ವಿಕೆಟ್ ಗೆಲುವು ಸಾಧಿಸಿತು. ಇದರೊಂದಿಗೆ ಡೆಲ್ಲಿ ಟೂರ್ನಿಯಿಂದ ಹೊರಬಿದ್ದರೆ, ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿತು.
ಡೆಲ್ಲಿ ಇನ್ನಿಂಗ್ಸ್
ಡೆಲ್ಲಿ ಕ್ಯಾಪಿಟಲ್ಸ್ ಮಹತ್ವದ ಪಂದ್ಯದಲ್ಲಿ ಅಬ್ಬರಿಸಲು ವಿಫಲವಾಯಿತು. ನಾಯಕ ರಿಷಬ್ ಪಂತ್, ರೋವ್ಮನ್ ಪೊವೆಲ್ ಬ್ಯಾಟಿಂಗ್ ನೆರವಿನಿಂದ 159 ರನ್ ಸಿಡಿಸಿತು. ಪೃಥ್ವಿ ಶಾ 24 ರನ್ ಸಿಡಿಸಿದರೆ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್ ಅಬ್ಬರಿಸಿಲ್ಲ. ರಿಷಬ್ ಪಂತ್ 39 ರನ್ ಕಾಣಿಕೆ ನೀಡಿದರು. ಇತ್ತ ಸರ್ಫರಾಜ್ ಖಾನ್ 10 ರನ್ ಸಿಡಿಸಿ ನಿರ್ಗಮಿಸಿದರು. ರೋವ್ಮೆನ್ ಪೊವೆಲ್ 43 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಅಕ್ಸರ್ ಪಟೇಲ್ ಅಜೇಯ 19 ರನ್ ಸಿಡಿಸಿದರು. ಇದರೊಂದಿಗೆ ಡೆಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿತು.