Asianet Suvarna News Asianet Suvarna News

IPL 2023: ವಿರಾಟ್ ಕೊಹ್ಲಿಯ ಅತಿದೊಡ್ಡ ದಾಖಲೆ ಮುರಿದ ಡೇವಿಡ್ ವಾರ್ನರ್..!

ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಡೇವಿಡ್ ವಾರ್ನರ್
ಏಳನೇ ಬಾರಿಗೆ ಐಪಿಎಲ್‌ನಲ್ಲಿ 500+ ರನ್ ಬಾರಿಸಿದ ಡೆಲ್ಲಿ ನಾಯಕ
ಆರ್‌ಸಿಬಿಯ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ವಾರ್ನರ್

David Warner Goes Past Virat Kohli To Claim Gigantic IPL Record kvn
Author
First Published May 21, 2023, 4:57 PM IST

ನವದೆಹಲಿ(ಮೇ.21): ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್‌ ವಾರ್ನರ್‌, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದ್ದ ಅತಿದೊಡ್ಡ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ 500+ ರನ್ ಬಾರಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಪಾತ್ರರಾಗಿದ್ದಾರೆ.

ಇಲ್ಲಿನ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್‌ ಎದುರಿನ ಡೆಲ್ಲಿ ಕ್ಯಾಪಿಟಲ್ಸ್ ಪಾಲಿನ ಕೊನೆಯ ಲೀಗ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದಾರೆ. ಚೆನ್ನು ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಡೇವಿಡ್‌ ವಾರ್ನರ್ ಕೇವಲ 58 ಎಸೆತಗಳನ್ನು ಎದುರಿಸಿ ಕೆಚ್ಚೆದೆಯ 86 ರನ್ ಬಾರಿಸಿದರು. ಈ ಇನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್‌ಗಳು ಸೇರಿದ್ದವು. ಇದರ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್ ತಂಡವು 77 ರನ್ ಅಂತರದ ಹೀನಾಯ ಸೋಲು ಅನುಭವಿಸಿತು.

ಡೇವಿಡ್ ವಾರ್ನರ್ ದಾಖಲೆ: ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್‌ 14 ಪಂದ್ಯಗಳನ್ನಾಡಿ 36.85ರ ಬ್ಯಾಟಿಂಗ್ ಸರಾಸರಿಯಲ್ಲಿ 516 ರನ್ ಸಿಡಿಸಿದ್ದಾರೆ. ಈ ಆವೃತ್ತಿಯಲ್ಲಿ ವಾರ್ನರ್‌ 6 ಅರ್ಧಶತಕ ಬಾರಿಸಿದ್ದು, 86 ರನ್‌ ಈ ಸೀಸನ್‌ನಲ್ಲಿ ವಾರ್ನರ್‌ ಬ್ಯಾಟಿಂದ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. ಇನ್ನು ಡೇವಿಡ್ ವಾರ್ನರ್, ಇದೀಗ ವಿರಾಟ್ ಕೊಹ್ಲಿ ಹಿಂದಿಕ್ಕಿ ಏಳನೇ ಬಾರಿಗೆ ಐಪಿಎಲ್‌ ಆವೃತ್ತಿಯಲ್ಲಿ 500+ ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೆ ವಾರ್ನರ್ ಪಾತ್ರರಾಗಿದ್ದಾರೆ.

ಈ ಮೊದಲು ಡೇವಿಡ್ ವಾರ್ನರ್ 2014(528 ರನ್), 2015(562 ರನ್& ಆರೆಂಜ್ ಕ್ಯಾಪ್), 2016(848 ರನ್), 2017(641 ರನ್‌& ಆರೆಂಜ್ ಕ್ಯಾಪ್), 2019(692 ರನ್ & ಆರೆಂಜ್ ಕ್ಯಾಪ್‌) ಹಾಗೂ 2020ರಲ್ಲಿ 548 ರನ್ ಸಿಡಿಸಿದ್ದರು.

'ನಮ್ಮಿಬ್ಬರಲ್ಲಿ ಯಾರು ಬೆಸ್ಟ್'?: ಜಡೇಜಾ ಸ್ಟೈಲ್ ಅನುಕರಿಸಿದ ವಾರ್ನರ್..! ವಿಡಿಯೋ ವೈರಲ್

ಇನ್ನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ, 6 ಬಾರಿ 500+ ರನ್ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ 2011(557 ರನ್), 2013(634 ರನ್), 2015(505 ರನ್), 2016(973 ರನ್& ಆರೆಂಜ್ ಕ್ಯಾಪ್), 2018(530 ರನ್) ಹಾಗೂ 2023ರಲ್ಲಿ ಈಗಾಗಲೇ 538 ರನ್ ಬಾರಿಸಿದ್ದಾರೆ.

ಇನ್ನುಳಿದಂತೆ ಪಂಜಾಬ್ ಕಿಂಗ್ಸ್‌ ತಂಡದ ನಾಯಕ ಶಿಖರ್ ಧವನ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್, ಐಪಿಎಲ್‌ನಲ್ಲಿ 5 ಬಾರಿ 500+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. 

ಆಸ್ಟ್ರೇಲಿಯಾ ಮೂಲದ ಸ್ಪೋಟಕ ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್, ಐಪಿಎಲ್‌ ಇತಿಹಾಸದಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ ಇದುವರೆಗೂ 176 ಪಂದ್ಯಗಳನ್ನಾಡಿ 41.54ರ ಬ್ಯಾಟಿಂಗ್ ಸರಾಸರಿಯಲ್ಲಿ 6,397 ರನ್ ಬಾರಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 61 ಅರ್ಧಶತಕಗಳು ಸೇರಿವೆ. ಇನ್ನು ಐಪಿಎಲ್‌ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ(7162) ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ.

Follow Us:
Download App:
  • android
  • ios