* ಐಪಿಎಲ್ ಟೂರ್ನಿಯಲ್ಲಿಂದು ಹಾಲಿ ಚಾಂಪಿಯನ್ ಚೆನ್ನೈಗೆ, ಸನ್‌ರೈಸರ್ಸ್ ಸವಾಲು* ಡಿವೈ ಪಾಟೀಲ್ ಮೈದಾನದಲ್ಲಿ ನಡೆಯಲಿದೆ ಹೈವೋಲ್ಟೇಜ್ ಪಂದ್ಯ* ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್
ಮುಂಬೈ(ಏ.09): 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯ 17ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಲಿದೆ. ಎರಡೂ ತಂಡಗಳೂ ಟೂರ್ನಿಯಲ್ಲಿ ಚೊಚ್ಚಲ ಗೆಲುವಿಗಾಗಿ ಹಾತೊರೆಯುತ್ತಿದ್ದು, ಅಂಕಪಟ್ಟಿಯಲ್ಲಿ ತಮ್ಮ ಖಾತೆ ತೆರೆಯಲು ಪೈಪೋಟಿ ನಡೆಸಲಿವೆ.
ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದ್ದು, ಇದೀಗ ಶತಾಯಗತಾಯ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಏಕಪಕ್ಷೀಯವಾಗಿ ನಡೆದ ಕಾದಾಟದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಸಿಎಸ್‌ಕೆ ತಂಡವು 6 ವಿಕೆಟ್‌ಗಳ ಸೋಲು ಕಂಡಿತ್ತು. ಇದಾದ ಬಳಿಕ ಲಖನೌ ಸೂಪರ್ ಜೈಂಟ್ಸ್ ಎದುರು 210 ರನ್ ಬಾರಿಸಿದ್ದರೂ, ಚೆನ್ನೈಗೆ ಗೆಲುವು ದಕ್ಕಿರಲಿಲ್ಲ. ಇನ್ನು ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಕೂಡಾ ಚೆನ್ನೈ ಸೋಲಿನ ಆಘಾತ ಅನುಭವಿಸಿತ್ತು.
ಇನ್ನೊಂದೆಡೆ ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರಿಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 61 ರನ್‌ಗಳ ಅಂತರದ ಸೋಲು ಕಂಡಿದ್ದ ಆರೆಂಜ್ ಆರ್ಮಿ, ಎರಡನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ರೋಚಕ ಸೋಲು ಕಂಡಿತ್ತು. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವುದು ಸನ್‌ರೈಸರ್ಸ್ ಪಾಲಿಗೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿದೆ.
ಪಿಚ್ ರಿಪೋರ್ಟ್:
ಇಲ್ಲಿನ ಡಿವೈ ಪಾಟೀಲ್ ಮೈದಾನವು ಸ್ಪಿನ್ ಹಾಗೂ ವೇಗದ ಬೌಲರ್‌ಗಳಿಗೆ ಸಮಾನ ನೆರವು ನೀಡಿದ್ದನ್ನು ನಾವು ಗಮನಿಸಬಹುದಾಗಿದೆ. ಇನ್ನು ಪವರ್ ಪ್ಲೇ ಓವರ್‌ಗಳಲ್ಲಿ ಬ್ಯಾಟರ್‌ಗಳು ಕೂಡಾ ಅಬ್ಬರಿಸಿದ್ದು ಇದೆ. ಇದು ಮಧ್ಯಾಹ್ನದ ಪಂದ್ಯವಾಗಿರುವುದರಿಂದ ಟಾಸ್ ಗೆದ್ದಂತಹ ನಾಯಕ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು. ಮೊದಲು ಬ್ಯಾಟ್ ಮಾಡಿ 180 ರನ್ ಬಾರಿಸಿದರೆ, ಆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದಾಗಿದೆ.
IPL 2022 ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್-ಸನ್‌ರೈಸರ್ಸ್ ಹೈದರಾಬಾದ್..!
ಇಂದಿನ ಪಂದ್ಯ ಗೆಲ್ಲೋರು ಯಾರು..?
ಮೇಲ್ನೋಟಕ್ಕೆ ಎರಡೂ ತಂಡಗಳ ಸದ್ಯದ ಫಾರ್ಮ್ ಒಂದೇ ರೀತಿಯಲ್ಲಿದ್ದರೂ ಸಹಾ, ಸಾಕಷ್ಟು ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚು. ಅಗ್ರಕ್ರಮಾಂಕದಲ್ಲಿ ಋತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೋಯಿನ್ ಅಲಿ ಅಬ್ಬರಿಸಿದರೆ, ದೊಡ್ಡ ಮೊತ್ತ ಕಲೆಹಾಕುವುದು ಚೆನ್ನೈಗೆ ಕಷ್ಟವೇನಲ್ಲ.
ಚೆನ್ನೈ ಸೂಪರ್ ಕಿಂಗ್ಸ್: ಋುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೋಯಿನ್ ಅಲಿ, ಅಂಬಟಿ ರಾಯುಡು, ಎಂ ಎಸ್ ಧೋನಿ, ರವೀಂದ್ರ ಜಡೇಜಾ(ನಾಯಕ), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್, ಡ್ವೇನ್ ಪ್ರಿಟೋರಿಯಸ್, ತುಷಾರ್ ದೇಶಪಾಂಡೆ, ಮುಕೇಶ್ ಚೌಧರಿ.
ಸನ್‌ರೈಸರ್ಸ್ ಹೈದ್ರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್(ನಾಯಕ), ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ರೊಮ್ಯಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್.
ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್ ಸ್ಟೇಡಿಯಂ
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
