* ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂದು ಸನ್‌ರೈಸರ್ಸ್ ಸವಾಲು* ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ಕನವರಿಯಲ್ಲಿವೆ ಉಭಯ ತಂಡಗಳು* ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿ ಕೇನ್ ವಿಲಿಯಮ್ಸನ್ ಪಡೆ
ನವಿ ಮುಂಬೈ(ಏ.09): 15ನೇ ಆವೃತ್ತಿಯ ಐಪಿಎಲ್‌ನಲ್ಲಿ (Indian Premier League) ಇನ್ನೂ ಗೆಲುವನ್ನೇ ಕಾಣದಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಪೈಕಿ ಒಂದು ತಂಡ ಶನಿವಾರ ಖಾತೆ ತೆರೆದು ನಿಟ್ಟುಸಿರುವ ಬಿಡಲಿದೆ. ನೂತನ ನಾಯಕ ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಸತತ 3 ಪಂದ್ಯಗಳಲ್ಲಿ ಸೋತರೆ, ಸನ್‌ರೈಸರ್ಸ್ ಆಡಿರುವ ಎರಡೂ ಪಂದ್ಯಗಳಲ್ಲಿ ಪರಾಭವಗೊಂಡಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಯುವ ಬ್ಯಾಟಿಂಗ್ ತಾರೆ ಋುತುರಾಜ್ ಗಾಯಕ್ವಾಡ್ ಲಯಕ್ಕೆ ಮರಳಲಿ ಎಂದು ಪ್ರಾರ್ಥಿಸುತ್ತಿದ್ದು, ಅನುಭವಿ ಆಟಗಾರರಾದ ರಾಬಿನ್ ಉತ್ತಪ್ಪ, ಮೋಯಿನ್ ಅಲಿ (Moeen Ali), ಅಂಬಟಿ ರಾಯುಡು, ಎಂ ಎಸ್ ಧೋನಿ (MS Dhoni), ಡ್ವೇನ್ ಬ್ರಾವೋ, ನಾಯಕ ರವೀಂದ್ರ ಜಡೇಜಾರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ. ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಹರ್, ಆ್ಯಡಂ ಮಿಲ್ನೆ ಅವರ ಅನುಪಸ್ಥಿತಿ ಕಾಡುತ್ತಿದ್ದು, ಯುವ ವೇಗಿ ಮುಕೇಶ್ ಚೌಧರಿ ಒತ್ತಡಕ್ಕೆ ಸಿಲುಕಿದ್ದಾರೆ.
ಇನ್ನು ಸನ್‌ರೈಸರ್ಸ್ ಮೊದಲೆರಡು ಪಂದ್ಯಗಳಲ್ಲಿ ಗುರಿ ಬೆನ್ನತ್ತಲು ವಿಫಲವಾಗಿತ್ತು. ಹೀಗಾಗಿ ಈ ಪಂದ್ಯದಲ್ಲಿ ತಂಡ ಮೊದಲು ಬ್ಯಾಟ್ ಮಾಡುವ ಅವಕಾಶಕ್ಕಾಗಿ ಕಾಯುತ್ತಿರಬಹುದು. ತಂಡದ ಬೌಲಿಂಗ್ ಪಡೆ ಉತ್ತಮವಾಗಿದ್ದರೂ ಬ್ಯಾಟರ್‌ಗಳ ವೈಫಲ್ಯರಿಂದ ತಂಡಕ್ಕಿನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಕೇನ್ ವಿಲಿಯಮ್ಸನ್‌ಗೆ (Kane Williamson) ಉಳಿದ ಬ್ಯಾಟರ್‌ಗಳಿಂದ ಬೆಂಬಲ ಸಿಗಬೇಕಿದೆ. ನಿಕೋಲಸ್ ಪೂರನ್, ಏಯ್ಡನ್ ಮಾರ್ಕ್‌ರಮ್ ಜತೆಗೆ ರಾಹುಲ್ ತ್ರಿಪಾಠಿ ಕೂಡಾ ಅಬ್ಬರಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಎದುರು ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಲಿದೆ.
IPL 2022: ಮುಂಬೈಯನ್ನು ಮುಳುಗಿಸುತ್ತಾ ಆರ್‌ಸಿಬಿ..?
ಇತಿಹಾಸದ ಎದುರು ಈಜಬೇಕಿದೆ ಸನ್‌ರೈಸರ್ಸ್: ಈಗಾಗಲೇ ಸತತ ಎರಡು ಸೋಲು ಕಂಡು ಹ್ಯಾಟ್ರಿಕ್ ಸೋಲಿನ ಭೀತಿ ಅನುಭವಿಸುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಈಗ ಇತಿಹಾಸದ ವಿರುದ್ದವೂ ಈಜಬೇಕಿದೆ. ಚೆನ್ನೈ ಸೂಪರ್ ಕಿಂಗ್ಸ್ ಎದುರು ಈ ಹಿಂದಿನ ಮುಖಾಮುಖಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಿನ್ನೆಡೆ ಅನುಭವಿಸಿದೆ. ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 16 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 16 ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಆರೆಂಜ್ ಆರ್ಮಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೇವಲ 4 ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ. ಹೀಗಾಗಿ ಹಾಲಿ ಚಾಂಪಿಯನ್ ಚೆನ್ನೈ ಮಣಿಸಲು ಸನ್‌ರೈಸರ್ಸ್ ಹೈದರಾಬಾದ್ ತಂಡವು 100% ಪ್ರದರ್ಶನ ತೋರಬೇಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್: ಋುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೋಯಿನ್ ಅಲಿ, ಅಂಬಟಿ ರಾಯುಡು, ಎಂ ಎಸ್ ಧೋನಿ, ರವೀಂದ್ರ ಜಡೇಜಾ(ನಾಯಕ), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್, ಡ್ವೇನ್ ಪ್ರಿಟೋರಿಯಸ್, ತುಷಾರ್ ದೇಶಪಾಂಡೆ, ಮುಕೇಶ್ ಚೌಧರಿ.
ಸನ್‌ರೈಸರ್ಸ್ ಹೈದ್ರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್(ನಾಯಕ), ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ರೊಮ್ಯಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್.
ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್ ಸ್ಟೇಡಿಯಂ
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
