ಬೆಂಗಳೂರು(ನ.20): ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ರೋಹಿತ್‌ ಶರ್ಮಾ, ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ಗುರುವಾರ ದಿಂದ ಫಿಟ್ನೆಸ್‌ ತರಬೇತಿ ಆರಂಭಿಸಿದ್ದಾರೆ. 

ಸಂಪೂರ್ಣ ಫಿಟ್‌ ಆಗದ ಕಾರಣದಿಂದ ರೋಹಿತ್‌ರನ್ನು ಆಸೀಸ್‌ ವಿರುದ್ಧ ಸೀಮಿತ ಓವರ್‌ಗಳ ಸರಣಿಗೆ ಪರಿಗಣಿಸಿಲ್ಲ. ಯುಎಇಯಲ್ಲಿ ನಡೆದ 13ನೇ ಆವೃತ್ತಿ ಐಪಿಎಲ್‌ ವೇಳೆ ರೋಹಿತ್‌ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಆದರೂ ರೋಹಿತ್‌ ಪ್ಲೇ ಆಫ್‌ ಹಾಗೂ ಫೈನಲ್‌ ಪಂದ್ಯಗಳಲ್ಲಿ ಮುಂಬೈ ಪರ ಆಡಿದ್ದರು. 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಹಿತ್ ಶರ್ಮಾ 68 ರನ್ ಬಾರಿಸಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಆಸೀಸ್‌ನಲ್ಲಿ ನೆಟ್ಸ್ ಅಭ್ಯಾಸ ಆರಂಭಿಸಿದ ಕೊಹ್ಲಿ ಪಡೆ..!

ಇಶಾಂತ್‌ ಕೆಲ ದಿನಗಳ ಹಿಂದಷ್ಟೇ ಫಿಟ್ನೆಸ್‌ ಟೆಸ್ಟ್‌ಗೆ ಒಳಗಾಗಿದ್ದರು. ರೋಹಿತ್‌ ಕೂಡಾ ಫಿಟ್ನೆಸ್‌ ಸಾಬೀತುಪಡಿಸಿದರೆ, ರೋಹಿತ್‌ ಮತ್ತು ಇಶಾಂತ್‌ ಒಟ್ಟಿಗೆ ಆಸೀಸ್‌ಗೆ ಪ್ರಯಾಣಿಸಲಿದ್ದಾರೆ. ಸೀಮಿತ ಓವರ್‌ಗಳ ಸರಣಿ ಮುಕ್ತಾಯದ ಬಳಿಕ ಡಿಸೆಂಬರ್ 17ರಿಂದ 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಡಿಲೇಡ್(ಮೊದಲ) ಟೆಸ್ಟ್ ಬಳಿಕ ತವರಿಗೆ ವಾಪಾಸಾಗಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯ ಹೊರತಾಗಿಯೂ ರೋಹಿತ್ ಶರ್ಮಾ ತಂಡ ಕೂಡಿಕೊಳ್ಳುವುದು ಭಾರತ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.