* ರಣಜಿ ಟ್ರೋಫಿ ಟೂರ್ನಿಯಲ್ಲಿ ಶತಕ ಚಚ್ಚಿದ ಮನೋಜ್ ತಿವಾರಿ* ಪಶ್ಚಿಮ ಬಂಗಾಳ ಸರ್ಕಾರದ ಕ್ರೀಡಾ ಸಚಿವ ಮನೋಜ್ ತಿವಾರಿ* ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಎದುರು ಶತಕ ಬಾರಿಸಿದ ಕ್ರೀಡಾ ಸಚಿವ
ಬೆಂಗಳೂರು(ಜೂ.10): ಭಾರತದ ಕ್ರಿಕೆಟಿಗ ಹಾಗೂ ಪಶ್ಚಿಮ ಬಂಗಾಳದ ಕ್ರೀಡಾ ಹಾಗೂ ಯುವಜನ ಸಬಲೀಕರಣ ಸಚಿವ ಮನೋಜ್ ತಿವಾರಿ (Manoj Tiwary), ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಎದುರು ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಮನೋಜ್ ತಿವಾರಿ 152 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಜಸ್ಟ್ ಕ್ರಿಕೆಟ್ ಅಕಾಡೆಮಿ (Just Cricket Academy) ಮೈದಾನದಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಎದುರು ಬೆಂಗಾಲ್ ತಂಡವು ಆರಂಭದಿಂದಲೂ ಹಿಡಿತ ಸಾಧಿಸುತ್ತಲೇ ಬಂದಿತ್ತು. ಇನ್ನು ಪಂದ್ಯದ 5ನೇ ದಿನದಾಟದ ವೇಳೆ ಬೆಂಗಾಲ್ ತಂಡವು 129 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗಿಳಿದ ಮನೋಜ್ ತಿವಾರಿ ಎದುರಾಳಿ ತಂಡದ ಬೌಲರ್‌ಗಳ ಮೇಲೆ ಸವಾರಿ ಮಾಡಿಸಿದರು. 5ನೇ ವಿಕೆಟ್‌ಗೆ ಮನೋಜ್ ತಿವಾರಿ ಹಾಗೂ ಅಭಿಷೇಕ್ ಪೋರೆಲ್ ಜೋಡಿ 72 ರನ್‌ಗಳ ಜತೆಯಾಟ ನಿಭಾಯಿಸಿತು. ಮನೋಜ್ ತಿವಾರಿ ಒಟ್ಟು 185 ಎಸೆತಗಳನ್ನು ಎದುರಿಸಿ 136 ರನ್ ಗಳಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಅವರ ಸೊಗಸಾದ ಇನಿಂಗ್ಸ್‌ನಲ್ಲಿ 19 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್ ಕೂಡಾ ಸೇರಿತ್ತು.
ಹೇಗಿತ್ತು ಮೊದಲ ಕ್ವಾರ್ಟರ್ ಫೈನಲ್ ಪಂದ್ಯ:
ಜಾರ್ಖಂಡ್ ಎದುರು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಾಲ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 773 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಬೆಂಗಾಲ್ ತಂಡದ ಮೊದಲ ಇನಿಂಗ್ಸ್‌ನಲ್ಲಿ ಅಗ್ರಕ್ರಮಾಂಕದ 9 ಬ್ಯಾಟರ್‌ಗಳು 50+ ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ (First Class Cricket) ಇತಿಹಾಸದಲ್ಲಿ ಮೊದಲ ಬಾರಿಗೆ ಇನಿಂಗ್ಸ್‌ವೊಂದರಲ್ಲಿ ಅಗ್ರಕ್ರಮಾಂಕದ 9 ಬ್ಯಾಟರ್‌ಗಳು 50+ ರನ್ ಬಾರಿಸಿದ ಸಾಧನೆ ಮಾಡಿದ್ದರು. ಈ ಮೊದಲು 1893ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ವೊಂದರಲ್ಲಿ ಅಗ್ರಕ್ರಮಾಂಕದ 8 ಬ್ಯಾಟರ್‌ಗಳು 50+ ರನ್ ಬಾರಿಸಿದ ಸಾಧನೆ ಮಾಡಿದ್ದರು. ಇದೀಗ ಒಂದು ಶತಮಾನದ ಬಳಿಕ ಬೆಂಗಾಲ್ ಕ್ರಿಕೆಟ್ ತಂಡವು ಐತಿಹಾಸಿಕ ಸಾಧನೆ ಮಾಡಿತ್ತು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಬೆಂಗಾಲ್, ಶತಮಾನದ ದಾಖಲೆ ಉಡೀಸ್ ..!
ಇನ್ನು ಬೃಹತ್ ಮೊತ್ತ ಬೆನ್ನತ್ತಿದ ಜಾರ್ಖಂಡ್ ತಂಡವು ವಿರಾಟ್ ಸಿಂಗ್ ಬಾರಿಸಿದ ಅಜೇಯ ಶತಕದ ಹೊರತಾಗಿಯೂ 298 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹಿನ್ನಡೆ ಅನುಭವಿಸಿತು. ಇನ್ನು ಭಾರೀ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬೆಂಗಾಲ್ ತಂಡವು 5ನೇ ದಿನದಾಟದಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 318 ರನ್ ಬಾರಿಸಿತ್ತು. ಬಳಿಕ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಿದ್ದರಿಂದ ಬೆಂಗಾಲ್ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಟ್ಟರೇ, ಜಾರ್ಖಂಡ್ ಹೋರಾಟ ಅಧಿಕೃತವಾಗಿ ಅಂತ್ಯವಾಯಿತು.
