* ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಬೆಂಗಾಲ್* ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಾಲ್‌ನ 9 ಬ್ಯಾಟರ್‌ಗಳು 50+ ರನ್* ಜಾರ್ಖಂಡ್ ವಿರುದ್ದ ಬೃಹತ್ ಮೊತ್ತ ಕಲೆಹಾಕಿದ ಬೆಂಗಾಲ್
ಬೆಂಗಳೂರು(ಜೂ.08): ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ ಬೆಂಗಾಲ್ ತಂಡವು ಹೊಸ ಇತಿಹಾಸ ಬರೆದಿದೆ. ಇಲ್ಲಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ವಿರುದ್ದದ ಪಂದ್ಯದಲ್ಲಿ ಬೆಂಗಾಲ್‌ನ ಅಗ್ರಕ್ರಮಾಂಕದ 9 ಬ್ಯಾಟರ್‌ಗಳು 50+ ರನ್ ಬಾರಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಭಿಮನ್ಯು ಈಶ್ವರನ್ ನೇತೃತ್ವದ ಬೆಂಗಾಲ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 773 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಹೌದು, ಪ್ರಥಮ ದರ್ಜೆ ಕ್ರಿಕೆಟ್ (First Class Cricket) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇನಿಂಗ್ಸ್‌ವೊಂದರಲ್ಲಿ ಅಗ್ರಕ್ರಮಾಂಕದ 9 ಬ್ಯಾಟರ್‌ಗಳು 50+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಮೊದಲು 1893ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ವೊಂದರಲ್ಲಿ ಅಗ್ರಕ್ರಮಾಂಕದ 8 ಬ್ಯಾಟರ್‌ಗಳು 50+ ರನ್ ಬಾರಿಸಿದ ಸಾಧನೆ ಮಾಡಿದ್ದರು. ಇದೀಗ ಒಂದು ಶತಮಾನದ ಬಳಿಕ ಬೆಂಗಾಲ್ ಕ್ರಿಕೆಟ್ ತಂಡವು ಐತಿಹಾಸಿಕ ಸಾಧನೆ ಮಾಡಿದೆ.
ಬೆಂಗಾಲ್ ತಂಡದ ಪರ ಅಭಿಷೇನ್ ರಾಮನ್(61), ಅಭಿಮನ್ಯು ಈಶ್ವರನ್(65), ಸುದಿಪ್ ಘರ್ಮಿ(186), ಅನುಸ್ತೂಪ್ ಮಜುಂದರ್(117), ಮನೋಜ್ ತಿವಾರಿ(73), ಅಭಿಷೇಕ್ ಪೊರೆಲ್(68), ಶಾಬಾಜ್ ಅಹಮ್ಮದ್(78), ಸಾಯನ್ ಮೊಂಡಲ್(53*) ಹಾಗೂ ಆಕಾಶ್ ದೀಪ್(53*) ಹೀಗೆ 9 ಮಂದಿ ಇನಿಂಗ್ಸ್‌ವೊಂದರಲ್ಲಿ 50+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.
Ranji Trophy: ಒಂದೇ ದಿನ 21 ವಿಕೆಟ್ ಪತನ, ರೋಚಕ ಘಟ್ಟದತ್ತ ಕರ್ನಾಟಕ-ಉತ್ತರ ಪ್ರದೇಶ ಫೈಟ್..!
ಇಲ್ಲಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಾಲ್ ತಂಡವು, ಜಾರ್ಖಂಡ್ ಬೌಲರ್‌ಗಳ ಎದುರು ಅಕ್ಷರಶಃ ಸವಾರಿಯನ್ನೇ ನಡೆಸಿದ್ದಾರೆ. ಬೆಂಗಾಲ್‌ನ ಎಲ್ಲಾ ಬ್ಯಾಟರ್‌ಗಳು ಕೂಡಾ ಜಾರ್ಖಂಡ್‌ನ ಎಲ್ಲಾ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಬಹುತೇಕ ಏಕಪಕ್ಷೀಯವಾಗಿ ಸಾಗುತ್ತಿರುವ ಪಂದ್ಯದಲ್ಲಿ ಬೆಂಗಾಲ್ ತಂಡವು ಸಂಪೂರ್ಣ ಮೇಲುಗೈ ಸಾಧಿಸಿದೆ. ಬೆಂಗಾಲ್ ತಂಡವು 773 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿರುವ ಜಾರ್ಖಂಡ್ ತಂಡವು ಮೊದಲ 21 ಓವರ್ ಅಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿದೆ.
ಉತ್ತರಖಂಡ ಎದುರು ಮುಂಬೈ ಮೇಲುಗೈ
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು ಸುವೆಂದ್ ಪಾರ್ಕರ್(252) ಹಾಗೂ ಸರ್ಫರಾಜ್ ಖಾನ್(153) ಬಾರಿಸಿದ ಶತಕಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 647 ರನ್‌ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿರುವ ಉತ್ತರಖಂಡ ಕೇವಲ 114 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಹಿನ್ನಡೆ ಅನುಭವಿಸಿದೆ. ಇನ್ನು ಎರಡನೇ ಇನಿಂಗ್ಸ್ ಆರಂಭಿಸಿರುವ ಮುಂಬೈ 38 ಓವರ್ ಅಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 173 ರನ್ ಬಾರಿಸಿದ್ದು ಒಟ್ಟಾರೆ 706 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.
