ಕೋವಿಡ್ ಹೋರಾಟಕ್ಕೆ ಕೈಜೋಡಿಸಿದ ಪೂರನ್, ಉನಾದ್ಕತ್, ಧವನ್
ಇಡೀ ದೇಶವೇ ಕೋವಿಡ್ ವಿರುದ್ದ ಹೋರಡುತ್ತಿರುವ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಕೆಲವು ಕ್ರಿಕೆಟಿಗರು ತಮ್ಮ ನೆರವಿನ ಹಸ್ತವನ್ನು ಚಾಚಿದ್ದಾರೆ. ವಿಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್ ಸೇರಿದಂತೆ ಭಾರತದ ಧವನ್, ಉನಾದ್ಕತ್ ತಮ್ಮ ಸಂಭಾವನೆಯ ಒಂದು ಭಾಗವನ್ನು ಕೋವಿಡ್ ವಿರುದ್ದದ ಹೋರಾಟಕ್ಕೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.01): ಕೊರೋನಾ ವಿರುದ್ಧ ಹೋರಾಟಕ್ಕೆ ಕ್ರಿಕೆಟಿಗರಿಂದ ಆರ್ಥಿಕ ನೆರವು ಮುಂದುವರಿದಿದೆ. ವಿಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್, ಟೀಂ ಇಂಡಿಯಾ ಕ್ರಿಕೆಟಿಗರಾದ ಜಯದೇವ್ ಉನಾದ್ಕತ್ ಹಾಗೂ ಶಿಖರ್ ಧವನ್ ಕೋವಿಡ್ ವಿರುದ್ದದ ಹೋರಾಟಕ್ಕೆ ಕೈಜೋಡಿಸಿದ್ದಾರೆ
ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ತಮ್ಮ ಐಪಿಎಲ್ ವೇತನದ ಶೇ.10ರಷ್ಟನ್ನು ದೇಣಿಗೆಯಾಗಿ ನೀಡುವುದಾಗಿ ರಾಜಸ್ಥಾನ ರಾಯಲ್ಸ್ ಬೌಲರ್ ಜಯದೇವ್ ಉನಾದ್ಕತ್ ಘೋಷಿಸಿದ್ದಾರೆ. ಒಂದು ಆವೃತ್ತಿಗೆ ಉನಾದ್ಕತ್‌ಗೆ 3 ಕೋಟಿ ರು. ವೇತನ ಸಿಗಲಿದ್ದು, ಅದರ ಶೇ.10ರಷ್ಟು ಎಂದರೆ 30 ಲಕ್ಷ ರು. ದೇಣಿಗೆ ನೀಡಲಿದ್ದಾರೆ.
ಇನ್ನು ಭಾರತ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್‌ಮನ್ ಶಿಖರ್ ಧವನ್ ಆಕ್ಸಿಜನ್ ಪೂರೈಕೆಗೆ 20 ಲಕ್ಷ ರುಪಾಯಿ ನೆರವು ಘೋಷಿಸಿದ್ದು, ಈ ಆವೃತ್ತಿಯ ಐಪಿಎಲ್ ಪಂದ್ಯಗಳಲ್ಲಿ ಗಳಿಸುವ ವೈಯಕ್ತಿಕ ಪ್ರಶಸ್ತಿಗಳ ಮೊತ್ತವನ್ನೂ ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.
ಆಕ್ಸಿಜನ್ ಪೂರೈಕೆಗೆ ಸಚಿನ್ 1 ಕೋಟಿ ರೂ ಬೆಂಬಲ
ಇನ್ನು ಪಂಜಾಬ್ ಕಿಂಗ್ಸ್ ಆಟಗಾರ, ವೆಸ್ಟ್‌ಇಂಡೀಸ್‌ನ ನಿಕೋಲಸ್ ಪೂರನ್ ಸಹ ಭಾರತಕ್ಕೆ ನೆರವಿನ ಭರವಸೆ ನೀಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪೂರನ್, ಸಾಕಷ್ಟು ದೇಶಗಳು ಕೋವಿಡ್ ಅಟ್ಟಹಾಸಕ್ಕೆ ನಲುಗಿವೆಯಾದರೂ, ಭಾರತದಲ್ಲಿ ಸದ್ಯದ ಪರಿಸ್ಥಿತಿ ಸಾಕಷ್ಟು ಗಂಭೀರವಾಗಿದೆ. ನಾನು ಈ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ ಹಾಗೆಯೇ ನಾನು ಐಪಿಎಲ್ ಸಂಭಾವನೆಯ ಒಂದು ಭಾಗವನ್ನು ಕೋವಿಡ್ ವಿರುದ್ದ ಹೋರಾಡಲು ಭಾರತಕ್ಕೆ ದೇಣಿಗೆ ನೀಡುತ್ತೇನೆ. ಸಹ ಆಟಗಾರರು ಈ ಸಂದರ್ಭದಲ್ಲಿ ಕೋವಿಡ್ ವಿರುದ್ದದ ಹೋರಾಟಕ್ಕೆ ಕೈ ಜೋಡಿ ಎಂದು ಟ್ವೀಟ್ ಮೂಲಕ ಪೂರನ್ ಮನವಿ ಮಾಡಿಕೊಂಡಿದ್ದಾರೆ.
ಈ ಮೊದಲು ಆಸ್ಟ್ರೇಲಿಯಾ ಕ್ರಿಕೆಟಿಗರಾದ ಪ್ಯಾಟ್ ಕಮಿನ್ಸ್, ಬ್ರೆಟ್ ಲೀ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಸ್ವಯಂ ಪ್ರೇರಿತವಾಗಿ ದೇಶದ ಕೋವಿಡ್ ವಿರುದ್ದದ ಹೋರಾಟಕ್ಕೆ ಕೈ ಜೋಡಿಸಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"