Asianet Suvarna News Asianet Suvarna News

1983 World Cup ನಮ್ಮದು 7 ಒಳ್ಳೆಯ & 7 ಕೆಟ್ಟ ಆಟಗಾರರನ್ನೊಳಗೊಂಡ ತಂಡವಾಗಿತ್ತು: ಕಪಿಲ್ ದೇವ್

ಲಾರ್ಡ್ಸ್‌ನಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಜಯಿಸಿದ್ದ ಟೀಂ ಇಂಡಿಯಾ
1983ರ ಏಕದಿನ ವಿಶ್ವಕಪ್ ಗೆದ್ದು ಬೀಗಿದ್ದ ಕಪಿಲ್ ಡೆವಿಲ್ಸ್ ಪಡೆ
ತಮ್ಮ ತಂಡ ಹೇಗಿತ್ತು ಎನ್ನುವುದನ್ನು ಮೆಲುಕು ಹಾಕಿದ ಕಪಿಲ್ ದೇವ್

Cricket Legend Kapil Dev remembers 1983 World Cup on 39th anniversary of triumph kvn
Author
Bengaluru, First Published Jun 27, 2022, 10:40 AM IST


ನವದೆಹಲಿ(ಜೂ.27): ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಜೂನ್ 25, 1983ರ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ. ಅಂದು ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಬಲಾಢ್ಯ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ಚೊಚ್ಚಲ ವಿಶ್ವಕಪ್ ಜಯಿಸಿದ ದಿನ. ಎರಡು ಬಾರಿ ವಿಶ್ವಚಾಂಪಿಯನ್‌ ಆಗಿ ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿದಿದ್ದ ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್‌ ತಂಡಕ್ಕೆ ಮಣ್ಣುಮುಕ್ಕಿಸಿ ಕಪಿಲ್ ಡೆವಿಲ್ಸ್‌ ಪಡೆ ಚೊಚ್ಚಲ ಬಾರಿಗೆ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಕ್ರಿಕೆಟ್ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ನಡೆದ 1983ರ ಏಕದಿನ ವಿಶ್ವಕಪ್ (1983 World Cup Final) ಫೈನಲ್‌ನಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ, ಬಲಿಷ್ಠ ವೆಸ್ಟ್ ಇಂಡೀಸ್‌ ತಂಡಕ್ಕೆ ಶಾಕ್‌ ನೀಡುವಲ್ಲಿ ಯಶಸ್ವಿಯಾಗಿತ್ತು. ಕಪಿಲ್ ದೇವ್ (Kapil Dev) ನೇತೃತ್ವದ ಭಾರತ ತಂಡದಲ್ಲಿ 11ನೇ ಕ್ರಮಾಂಕದವರೆಗೂ ಬ್ಯಾಟ್ ಮಾಡುವವರಿದ್ದರು. ಇನ್ನು ಏಳರಿಂದ ಎಂಟು ಮಂದಿ ಬೌಲರ್‌ಗಳಿದ್ದರು. ಇದಷ್ಟೇ ಅಲ್ಲದೇ ಕಪಿಲ್ ದೇವ್ ಅವರಂತ ಶ್ರೇಷ್ಠ ಆಲ್ರೌಂಡರ್‌ಗಳಿದ್ದರು. ಆಗ ತಮ್ಮ ತಂಡ ಹೇಗಿತ್ತು ಎನ್ನುವುದನ್ನು ದೇಶಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಹೀರೋ ಕಪಿಲ್ ದೇವ್, ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಇಂಗ್ಲೆಂಡ್‌ಗೆ 1983ರ ಏಕದಿನ ವಿಶ್ವಕಪ್ ಆಡಲು ತೆರಳಿದ್ದ ತಂಡದಲ್ಲಿ ನನ್ನನ್ನು ಸೇರಿದಂತೆ 7 ಒಳ್ಳೆಯ ಪ್ರಬುದ್ಧ ಆಟಗಾರರಿದ್ದರು. ಇನ್ನು ಇದೇ ತಂಡದಲ್ಲಿ ರವಿಶಾಸ್ತ್ರಿ, ಸಂದೀಪ್ ಪಾಟೀಲ್, ಕೀರ್ತಿ ಆಜಾದ್ ಅವರಂತ ತಮಾಷೆ ಸ್ವಭಾವದ ಫ್ರಾಂಕಸ್ಟರ್ಸ್‌ಗಳು ಸಹಾ ಇದ್ದರು. ಎಲ್ಲರ ಸಮ್ಮಿಳಿತದ ತಂಡ ನಮ್ಮದಾಗಿತ್ತು ಎಂದು ಕಪಿಲ್ ದೇವ್ ಹೇಳಿದ್ದಾರೆ.

ಆಗ ನಮ್ಮ ತಂಡವು ಒಳ್ಳೆಯ ಸಂಯೋಜನೆಯಿಂದ ಕೂಡಿತ್ತು. ಒಳ್ಳೆಯ ಆಟಗಾರರಷ್ಟೇ ಕೆಟ್ಟ ಆಟಗಾರರು ಕೂಡಾ ಮಹತ್ವದ ಪಾತ್ರ ನಿಭಾಯಿಸಿದ್ದರು. ತಂಡದಲ್ಲಿ ಪರಿಪಕ್ವ ಆಟಗಾರರ ಜತೆಗೆ ಯುವ ಆಟಗಾರರು ಒಳ್ಳೆಯ ರೀತಿಯಲ್ಲಿ ಹೊಂದಿಕೊಂಡಿದ್ದರು. ಪ್ರತಿಯೊಬ್ಬ ಆಟಗಾರನೂ ಸಹಾ ಒಂದಲ್ಲಾ ಒಂದು ರೀತಿಯಲ್ಲಿ ತನ್ನದೇ ಆದ ಪಾತ್ರವನ್ನು ನಿಭಾಯಿಸಿದ್ದಾರೆ. ಕೆಲವು ಆಟಗಾರರು ಸಾಕಷ್ಟು ಪ್ರತಿಭಾನ್ವಿತರಾಗಿದ್ದರೂ ಸಹಾ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಆಡಲು ಸಾಧ್ಯವಾಗಲಿಲ್ಲ. ಜೀವನ ಕೂಡಾ ಹೀಗೆಯೇ ಅಲ್ವಾ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಒಳ್ಳೆಯ ಆಟಗಾರರು ಹಗಲಿನಲ್ಲಿ ಒಳ್ಳೆಯ ಪ್ರದರ್ಶನ ತೋರಿದರೇ, ಕೆಲವು ಕೆಟ್ಟ ಆಟಗಾರರು ರಾತ್ರಿ ವೇಳೆ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದರು ಎಂದು ಕಪಿಲ್ ದೇವ್, ರವಿಶಾಸ್ತ್ರಿ, ಕೀರ್ತಿ ಆಜಾದ್ ಅವರಂತಹ ಆಟಗಾರರನ್ನು ಉದ್ದೇಶಿಸಿ ತಮಾಷೆ ಮಾಡಿದ್ದಾರೆ.

1983ರ ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ಕ್ರಿಕೆಟ್ ತಂಡವು (Indian Cricket Team) ಕೇವಲ 183 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಗೆಲ್ಲಲು ಸಾಧಾರಣ ಗುರಿ ಪಡೆದ ಬಲಿಷ್ಠ ವೆಸ್ಟ್ ಇಂಡೀಸ್ ತಂಡವು, ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿ ಕೇವಲ 140 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ ತಂಡವು 43 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ಆ ಕ್ಷಣವನ್ನು ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿತು. ಇದಾಗಿ ಬರೋಬ್ಬರಿ 28 ವರ್ಷಗಳ ಬಳಿಕ ಅಂದರೆ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ತವರಿನಲ್ಲೇ ಶ್ರೀಲಂಕಾ ತಂಡವನ್ನು ಬಗ್ಗುಬಡಿಯುವ ಮೂಲಕ ಎರಡನೇ ಬಾರಿಗೆ ಏಕದಿನ ವಿಶ್ವಕಪ್‌ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

Follow Us:
Download App:
  • android
  • ios