* ಭಾರತ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಆಸೀಸ್ ತಂಡ ಪ್ರಕಟ* 18 ಆಟಗಾರರನ್ನೊಳಗೊಂಡ ತಂಡದಲ್ಲಿ 4 ಸ್ಪಿನ್ನರ್‌ಗಳಿಗೆ ಸ್ಥಾನ* ಫೆಬ್ರವರಿ 09ರಿಂದ 4 ಪಂದ್ಯಗಳ ಟೆಸ್ಟ್ ಸರಣಿ ಆರಂಭ

ಮೆಲ್ಬರ್ನ್‌(ಜ.11): ಮುಂಬರುವ ಭಾರತ ಎದುರಿನ 4 ಪಂದ್ಯಗಳ ಬಾರ್ಡರ್-ಗವಾಸ್ಕರ್‌ ಟೆಸ್ಟ್ ಸರಣಿಗೆ 18 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಪ್ರಕಟವಾಗಿದ್ದು, ನಾಲ್ವರು ಸ್ಪಿನ್ನರ್‌ಗಳು ಹಾಗೂ ಆರು ವೇಗಿಗಳಿಗೆ ಸ್ಥಾನ ಕಲ್ಪಿಸಲಾಗಿದೆ. ವಿಕ್ಟೋರಿಯಾದ ಪ್ರತಿಭಾನ್ವಿತ ಆಫ್‌ಸ್ಪಿನ್ನರ್ ಟೋಡ್ ಮುರ್ಫೆ ಅವರು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ.

ಈಗಾಗಲೇ ಆಸ್ಟ್ರೇಲಿಯಾ ತಂಡದಲ್ಲಿ ನೇಥನ್ ಲಯನ್, ಆಸ್ಟನ್ ಏಗರ್ ಹಾಗೂ ಮಿಚೆಲ್ ಸ್ವೆಪ್ಸನ್‌ ಅವರಂತಹ ತಾರಾ ಆಟಗಾರರಿದ್ದು, ಇವರ ಜತೆಗೆ ಇದೀಗ 22 ವರ್ಷದ ಟೋಡ್‌ ಮುರ್ಫೆ ಕೂಡಾ, ಕಾಂಗರೂ ಪಡೆ ಕೂಡಿಕೊಂಡಿದ್ದಾರೆ. ಇನ್ನು ಅನುಭವಿ ಬ್ಯಾಟರ್ ಪೀಟರ್ ಹ್ಯಾಂಡ್ಸ್‌ಕಬ್‌ ಅವರಿಗೆ ತಂಡದಿಂದ ಬುಲಾವ್ ಬಂದಿದೆ. ಇನ್ನುಳಿದಂತೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಲ್ರೌಂಡರ್‌ ಕ್ಯಾಮರೋನ್ ಗ್ರೀನ್ ಹಾಗೂ ವೇಗಿ ಮಿಚೆಲ್ ಸ್ಟಾರ್ಕ್‌ ಕೂಡಾ ಆಸೀಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮತ್ತೋರ್ವ ವೇಗಿ ಲಾನ್ಸ್‌ ಮೋರಿಸ್‌ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲು ಎದುರು ನೋಡುತ್ತಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ: 

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

98 ರನ್ ಗಳಿಸಿದ್ದಾಗ ಶಾನಕ ಮಂಕಡ್ ರನೌಟ್‌ ಮಾಡಲೆತ್ನಿಸಿದ ಶಮಿ..! ಮತ್ತೆ ಹೃದಯ ಗೆದ್ದ ಕ್ಯಾಪ್ಟನ್‌ ರೋಹಿತ್ ಶರ್ಮಾ

ಇನ್ನುಳಿದಂತೆ ಎಡಗೈ ಸ್ಪಿನ್ನರ್ ಆಸ್ಟನ್ ಏಗರ್‌ ಬ್ಯಾಟಿಂಗ್‌ನಲ್ಲೂ ಆಸರೆಯಾಗುವ ಕ್ಷಮತೆ ಹೊಂದಿದ್ದು, ಬ್ಯಾಕ್‌ಅಪ್ ಆಲ್ರೌಂಡರ್ ರೂಪದಲ್ಲಿ ಆಸೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗಿಗಳ ರೂಪದಲ್ಲಿ ಮಿಚೆಲ್ ಸ್ಟಾರ್ಕ್‌ ಜತೆಗೆ ನಾಯಕ ಪ್ಯಾಟ್ ಕಮಿನ್ಸ್‌, ಜೋಶ್ ಹೇಜಲ್‌ವುಡ್‌, ಸ್ಕಾಟ್ ಬೋಲೆಂಡ್‌ ಕೂಡಾ ಭಾರತ ಪ್ರವಾಸಕ್ಕೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಭಾರತ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಪ್ಯಾಟ್ ಕಮಿನ್ಸ್‌(ನಾಯಕ), ಆಸ್ಟನ್ ಅಗರ್, ಸ್ಕಾಟ್ ಬೋಲೆಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್‌, ಪೀಟರ್‌ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್‌, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಲಾನ್ಸ್ ಮೋರಿಸ್, ಟೋಡ್ ಮುರ್ಫೆ, ಮ್ಯಾಥ್ಯೂ ರೆನ್‌ಶೋ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್‌, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.

ಟೀಂ ಇಂಡಿಯಾ ಪಾಲಿಗೆ ಮಹತ್ವದ ಸರಣಿ: 

ಟೀಂ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ಎದುರು 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲಿದ್ದು, ಈ ಸರಣಿಯನ್ನು ಟೀಂ ಇಂಡಿಯಾ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಸೋಲದೇ 3-1, 2-1 ಅಂತರದಲ್ಲಿ ಜಯಿಸಿದರೆ ಸಾಕು, ಅನಾಯಾಸವಾಗಿ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಲಿದೆ. ಒಂದು ವೇಳೆ ಹೀಗಾದಲ್ಲಿ ಸತತ ಎರಡನೇ ಬಾರಿಗೆ ಟೆಸ್ಟ್‌ ವಿಶ್ವಕಪ್ ಫೈನಲ್ ಪಂದ್ಯವನ್ನಾಡಲಿರುವ ಮೊದಲ ತಂಡ ಎನ್ನುವ ಹಿರಿಮೆಗೆ ಟೀಂ ಇಂಡಿಯಾ ಪಾತ್ರವಾಗಲಿದೆ.