* 14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಭಾಗ-2ಕ್ಕೆ ಕ್ಷಣಗಣನೆ ಆರಂಭ* ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಇಂಗ್ಲೆಂಡ್-ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ* ಸೆಪ್ಟೆಂಬರ್ 19ರಿಂದ ಐಪಿಎಲ್ ಭಾಗ 2 ಆರಂಭ

ನವದೆಹಲಿ(ಆ.14): ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಭಾಗ-2ರಲ್ಲಿ ತಮ್ಮ ದೇಶಗಳ ಆಟಗಾರರು ಪಾಲ್ಗೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಮಿಲಿಯನ್‌ ಡಾಲರ್ ಕ್ರಿಕೆಟ್‌ ಟೂರ್ನಿಯ ಇನ್ನುಳಿದ ಭಾಗ ಮತ್ತಷ್ಟು ಸ್ಪರ್ಧಾತ್ಮಕವಾಗಿ ಮೂಡಿಬರುವುದು ಖಚಿತವೆನಿಸಿದೆ.

ಹೌದು, ಕೋವಿಡ್ ಭೀತಿಯಿಂದ ದಿಢೀರ್ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಐಪಿಎಲ್ ಭಾಗ 2 ಟೂರ್ನಿಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟಿಗರು ಪಾಲ್ಗೊಳ್ಳಲು ನಿರಪೇಕ್ಷಣ ಪತ್ರ ನೀಡುವುದಾಗಿ ಬಿಸಿಸಿಐಗೆ ಈ ಎರಡೂ ಕ್ರಿಕೆಟ್ ಮಂಡಳಿಗಳು ತಿಳಿಸಿವೆ. ಈ ಕುರಿತಂತೆ ಕ್ರಿಕ್‌ಬಜ್‌ಗೆ ಸ್ಪಷ್ಟನೆ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್‌ ಸಿಇಒ ಕಾಶಿ ವಿಶ್ವನಾಥನ್‌, ಐಪಿಎಲ್‌ ಆಫೀಸ್‌ನಿಂದ ನಮಗೆ ಮಾಹಿತಿ ದೊರೆತಿದ್ದು, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಎನ್‌ಒಸಿ(ನಿರಪೇಕ್ಷಣಾ ಪತ್ರ) ನೀಡುವುದಾಗಿ ಬಿಸಿಸಿಐಗೆ ತಿಳಿಸಿವೆ ಎನ್ನುವ ಮಾಹಿತಿ ಖಚಿತವಾಗಿದೆ. ಹೀಗಾಗಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗರು ಐಪಿಎಲ್‌ಗೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಐಪಿಎಲ್ 2021: ದುಬೈ ವಿಮಾನವೇರಿದ ಧೋನಿ ನೇತೃತ್ವದ ಸಿಎಸ್‌ಕೆ

ಇದೀಗ ಐಪಿಎಲ್‌ ಭಾಗ-2 ಟೂರ್ನಿಯಲ್ಲಿ ಆಟಗಾರರು ಪಾಲ್ಗೊಳ್ಳುತ್ತಾರೋ ಇಲ್ಲವೋ ಎನ್ನುವುದರತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾಕೆಂದರೆ ಗ್ಲೆನ್ ಮ್ಯಾಕ್ಸ್‌ವೆಲ್‌, ಡೇವಿಡ್ ವಾರ್ನರ್ ಅವರಂತಹ ಆಟಗಾರರು ಮಹತ್ವದ ಸರಣಿಗೆ ಸಜ್ಜಾಗಲು ಕೆಲ ಅಂತರಾಷ್ಟ್ರೀಯ ಸರಣಿಗಳಿಂದ ಹಿಂದೆ ಸರಿದಿದ್ದರು. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಯುಎಇನಲ್ಲಿ ನಡೆಯಲಿದ್ದು, ಅಕ್ಟೋಬರ್ 15ಕ್ಕೆ ಮುಕ್ತಾಯವಾಗಲಿದೆ. ಇದಾದ ಕೇವಲ 2 ದಿನಗಳ ಬಳಿಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಯುಎಇ ಹಾಗೂ ಒಮನ್‌ ರಾಷ್ಟ್ರಗಳಲ್ಲಿ ಜರುಗಲಿದೆ.

ಐಪಿಎಲ್‌ ಭಾಗ 2 ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿವೆ.