ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಆಟಗಾರರು ಜನಾಂಗೀಯ ನಿಂದನೆಗೊಳಗಾಗಿದ್ದರು ಎನ್ನುವ ಸತ್ಯವನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಒಪ್ಪಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮೆಲ್ಬರ್ನ್(ಜ.28)‌: ಸಿಡ್ನಿ ಟೆಸ್ಟ್‌ ವೇಳೆ ಭಾರತದ ವೇಗಿ ಮೊಹಮದ್‌ ಸಿರಾಜ್‌ ವಿರುದ್ಧ ಜನಾಂಗೀಯ ನಿಂದನೆ ನಡೆದಿದ್ದು ನಿಜ, ಆದರೆ ತಪ್ಪಿತಸ್ಥರನ್ನು ಹುಡುಕಲು ಸಾಧ್ಯವಾಗಿಲ್ಲ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಗೆ ವರದಿ ನೀಡಿದೆ. 

ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಕೆಲವು ಅಸೀಸ್‌ ಪ್ರೇಕ್ಷಕರು ಭಾರತೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ್ದರು. ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ನೀಡಿದ ದೂರಿನ ಆಧಾರದ ಮೇಲೆ ಕ್ರಿಕೆಟ್‌ ಆಸ್ಟ್ರೇಲಿಯಾವು ನ್ಯೂ ಸೌಥ್‌ ವೇಲ್ಸ್‌ ಪೊಲೀಸರ ಸಹಾಯದಿಂದ ತನಿಖೆ ಆರಂಭಿಸಿತ್ತು.

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಬೌಂಡರಿ ಲೈನ್‌ ಬಳಿ ಕ್ಷೇತ್ರರಕ್ಷಣೆ ಮಾಡುವ ವೇಳೆ ಕೆಲವು ಆಸ್ಟ್ರೇಲಿಯಾದ ಪ್ರೇಕ್ಷಕರು ಮೊಹಮ್ಮದ್ ಸಿರಾಜ್ ಅವರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ. ತಕ್ಷಣವೇ ಅಂಪೈರ್‌ ಬಳಿ ಸಿರಾಜ್ ದೂರು ನೀಡಿದ್ದರು. ಘಟನೆ ಸಂಬಂಧ 6 ಪ್ರೇಕ್ಷಕರನ್ನು ಕ್ರಿಕೆಟ್‌ ಆಸ್ಪ್ರೇಲಿಯಾ ಮೈದಾನದಿಂದ ಹೊರಹಾಕಿತ್ತು. ಆ 6 ಮಂದಿ ತಪ್ಪಿತಸ್ಥರಲ್ಲ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ಕ್ಲೀನ್‌ ಚಿಟ್‌ ನೀಡಿದೆ.

ಜನಾಂಗೀಯ ನಿಂದನೆ: ಕ್ರೀಡಾಂಗಣ ತೊರೆಯಲು ಆಯ್ಕೆ ನೀಡಿದ್ದ ಅಂಪೈರ್‌!

ಈ ಅವಮಾನದ ಹೊರತಾಗಿಯೂ ಕೆಚ್ಚೆದೆಯ ಆಟವಾಡಿದ ಟೀಂ ಇಂಡಿಯಾ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಆಟದ ಮೂಲಕವೇ ಆಸ್ಟ್ರೇಲಿಯನ್ನರಿಗೆ ತಿರುಗೇಟು ನೀಡಿತ್ತು. 

2019ರಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್‌ ಪ್ರವಾಸ ಮಾಡಿದ ವೇಳೆ ಕಿವೀಸ್ ಪ್ರೇಕ್ಷಕನೊಬ್ಬ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ ಅವರನ್ನು ಜನಾಂಗೀಯವಾಗಿ ನಿಂದಿಸಿದ್ದರು. ಬಳಿಕ ಆ ವ್ಯಕ್ತಿಗೆ ನ್ಯೂಜಿಲೆಂಡ್‌ ಕ್ರಿಕೆಟ್‌ ಮೈದಾನದಲ್ಲಿ ಪಂದ್ಯಗಳನ್ನು ವೀಕ್ಷಿಸದಂತೆ 2 ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಅಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಇತರೆ ದೇಶಗಳು ಕೈಗೊಂಡರೆ ಬಹುಶಃ ಜನಾಂಗೀಯ ನಿಂದನೆಗಳಿಗೆ ಬ್ರೇಕ್ ಬೀಳಬಹುದೇನೋ.