ಹೈದರಾಬಾದ್(ಜ.22)‌: ಸಿಡ್ನಿ ಮೈದಾನದಲ್ಲಿ ನಡೆದ ಆಸ್ಪ್ರೇಲಿಯಾ ವಿರುದ್ಧದ 3ನೇ ಟೆಸ್ಟ್‌ ವೇಳೆ ಪ್ರೇಕ್ಷಕರ ನಿಂದನೆ ವಿಷಯಕ್ಕೆ ಸಂಬಂಧಿಸಿದಂತೆ ಪಂದ್ಯದ ಮಧ್ಯದಲ್ಲೇ ಕ್ರೀಡಾಂಗಣ ತೊರೆಯುವ ಆಯ್ಕೆಯನ್ನು ಆನ್‌ ಫೀಲ್ಡ್‌ ಅಂಪೈರ್‌ ಭಾರತ ತಂಡಕ್ಕೆ ನೀಡಿದ್ದರು ಎಂಬ ಸಂಗತಿಯನ್ನು ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌ ಗುರುವಾರ ಬಹಿರಂಗ ಪಡಿಸಿದ್ದಾರೆ.

ಭಾರತಕ್ಕೆ ಆಗಮಿಸಿದ ನಂತರ ತಂದೆಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಾಜ್‌, ‘‘ ಕೆಲವು ಪ್ರೇಕ್ಷಕರು ನನ್ನನ್ನು ಬ್ರೌನ್‌ ಮಂಕಿ ಎಂದು ಕರೆದರು. ಕೂಡಲೇ ಈ ವಿಷಯವನ್ನು ನಾಯಕ ಅಜಿಂಕ್ಯ ರಹಾನೆ ಅವರ ಗಮನಕ್ಕೆ ತಂದೆ. ಈ ಸಂಬಂಧ ರಹಾನೆ ಫೀಲ್ಡ್‌ ಅಂಪೈರ್‌ ಪೌಲ್‌ ರೀಫೆಲ್‌ ಮತ್ತು ಪೌಲ್‌ ವಿಲ್ಸನ್‌ ಅವರಿಗೆ ತಿಳಿಸಿದರು. ಅಂಪೈರ್‌ ಪಂದ್ಯದ ಮಧ್ಯದಲ್ಲೇ ನಮಗೆ ಕ್ರೀಡಾಂಗಣ ತೊರೆಯುವ ಆಯ್ಕೆ ನೀಡಿದರು. ಆದರೆ ರಹಾನೆ (ಭಾಯ್‌) ನಾವು ಯಾವುದೇ ತಪ್ಪೆಸಗಿಲ್ಲ. ಹೀಗಾಗಿ ಮೈದಾನದಿಂದ ಹೊರಹೊಗುವ ಅಗತ್ಯವಿಲ್ಲ. ಅದ್ದರಿಂದ ಆಟ ಮುಂದುವರಿಸೋಣ ಎಂದರು,’’ ಎಂದು ಸಿರಾಜ್‌ ಘಟನೆ ವೃತ್ತಾಂತ ಕುರಿತು ವಿವರಿಸಿದರು.

ತವರಿಗೆ ಆಗಮಿಸಿ ನೇರವಾಗಿ ತಂದೆ ಸಮಾಧಿಗೆ ತೆರಳಿ ನಮನ ಸಲ್ಲಿಸಿದ ಸಿರಾಜ್!

ಪಂದ್ಯದ 2ನೇ ದಿನ ಸಿರಾಜ್‌ ಮತ್ತು ಹಿರಿಯ ವೇಗಿ ಜಸ್‌ಪ್ರಿತ್‌ ಬೂಮ್ರಾ ಮೈದಾನದ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೆ ಒಳಗಾಗಿದ್ದರು. ಈ ಸಂಬಂಧ ಟೀಮ್‌ ಇಂಡಿಯಾ ಆಡಳಿತ, ಮ್ಯಾಚ್‌ ರೆಫರಿ ಡೇವಿಡ್‌ ಬೂನ್‌ ಅವರಲ್ಲಿ ಅಧಿಕೃತ ದೂರು ದಾಖಲಿಸಿತ್ತು. ನಂತರ ಘಟನೆಗೆ ಕ್ರಿಕೆಟ್‌ ಆಸ್ಪ್ರೇಲಿಯಾ ಕ್ಷಮೆ ಕೋರಿತ್ತು.