Asianet Suvarna News Asianet Suvarna News

ಇಂದು ಐಪಿಎಲ್ ಮಿನಿ ಹರಾಜು; 87 ಸ್ಥಾನಕ್ಕೆ 405 ಆಟಗಾರರ ನಡುವೆ ಪೈಪೋಟಿ..!

2023ರ ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ
ಇಂದು ಮಧ್ಯಾಹ್ನ 2.30ರಿಂದ ಕೊಚ್ಚಿಯಲ್ಲಿ ಐಪಿಎಲ್ ಮಿನಿ ಹರಾಜು ಆರಂಭ
87 ಸ್ಥಾನಗಳಿಗಾಗಿ 405 ಆಟಗಾರರ ನಡುವೆ ಪೈಪೋಟಿ

Countdown begin for Much awaited IPL Auction 2023 total 405 player fight for 87 slots kvn
Author
First Published Dec 23, 2022, 9:37 AM IST

ಕೊಚ್ಚಿ(ಡಿ.23): 2023ರ ಐಪಿಎಲ್‌ ಮಿನಿ ಹರಾಜು ಪ್ರಕ್ರಿಯೆ ಶುಕ್ರವಾರ ಮಧ್ಯಾಹ್ನ ಕೊಚ್ಚಿಯಲ್ಲಿ ನಡೆಯಲಿದ್ದು, 273 ಭಾರತೀಯರು ಸೇರಿದಂತೆ 405 ಆಟಗಾರರು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಖಾಲಿ ಇರುವ 87 ಸ್ಥಾನಗಳಿಗೆ ಹರಾಜು ನಡೆಯಲಿದ್ದು, ಇದರಲ್ಲಿ 30 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲಾಗಿದೆ. ಎಲ್ಲಾ 10 ತಂಡಗಳು ಕೆಲ ಪ್ರಮುಖ ಆಟಗಾರರ ಹುಡುಕಾಟದಲ್ಲಿವೆ. ಕರ್ನಾಟಕದ 16 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

2023ನೇ ಸಾಲಿನ ಮಿನಿ ಹರಾಜಿಗೆ 991 ಆಟಗಾರರು ತಮ್ಮ ಹೆಸರು ನೋಂದಾಯಿಸಿದ್ದರು. ಈ ಪೈಕಿ ಐಪಿಎಲ್ ಆಡಳಿತ ಮಂಡಳಿಯು 405 ಆಟಗಾರರನ್ನು ಶಾರ್ಟ್‌ಲಿಸ್ಟ್‌ ಮಾಡಿದೆ. 991 ಆಟಗಾರರ ಪೈಕಿ 369 ಆಟಗಾರರನ್ನು ಮೊದಲಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಇದಾದ ಬಳಿಕ ಎಲ್ಲಾ 10 ಫ್ರಾಂಚೈಸಿಗಳ ಮನವಿಯ ಮೇರೆಗೆ ಹೆಚ್ಚುವರಿಯಾಗಿ 36 ಆಟಗಾರರು ಮಿನಿ ಹರಾಜಿಗೆ ಸೇರ್ಪಡೆ ಮಾಡಲಾಗಿದೆ.

ಅಮಿತ್ ಮಿಶ್ರಾ ಅತಿ ಹಿರಿಯ, ಮುಹಮ್ಮದ್ ಗಝನ್ಫರ್‌ ಕಿರಿಯ!

40 ವರ್ಷದ ಭಾರತದ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ ಹರಾಜಿನಲ್ಲಿರುವ ಅತಿ ಹಿರಿಯ ಆಟಗಾರ. ಅದೇ ರೀತಿ ಆಫ್ಘಾನಿಸ್ತಾನದ 15 ವರ್ಷದ ಅಲ್ಲಾಹ್‌ ಮುಹಮ್ಮದ್‌ ಗಝನ್ಫರ್‌ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರ ನಂ.1, ಕರ್ನಾಟಕ ನಂ.2!

ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಆಟಗಾರರ ಪೈಕಿ ಜಮ್ಮು-ಕಾಶ್ಮೀರ ಕ್ರಿಕೆಟ್‌ ಸಂಸ್ಥೆಯ 21 ಆಟಗಾರರು ಇದ್ದಾರೆ. ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ 16 ಆಟಗಾರರು ಅದೃಷ್ಟಪರೀಕ್ಷೆ ನಡೆಸಲಿದ್ದಾರೆ. ತಮಿಳುನಾಡು, ಉತ್ತರಪ್ರದೇಶ, ದೆಹಲಿ ಕ್ರಿಕೆಟ್‌ ಸಂಸ್ಥೆಗಳೂ ತಲಾ 16 ಆಟಗಾರರ ಹೆಸರು ನೋಂದಾಯಿಸಿವೆ.

ಐಪಿಎಲ್‌ ಮಿನಿ ಹರಾಜು ಎಲ್ಲಿ? ಯಾವಾಗ?

ಐಪಿಎಲ್‌ ಆಟಗಾರರ ಮಿನಿ ಹರಾಜು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಆರಂಭವಾಗಲಿದ್ದು, ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯು ಮಧ್ಯಾಹ್ನ 2.30ರಿಂದ ಆರಂಭವಾಗಲಿದೆ. 

ಮಿನಿ ಹರಾಜು ಎಲ್ಲಿ ವೀಕ್ಷಿಸಬಹುದು.?

ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಮಿನಿ ಹರಾಜಿನ ನೇರ ಪ್ರಸಾರವನ್ನು ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಬಹುದಾಗಿದೆ. ಇನ್ನು ಕಳೆದ ಜೂನ್‌ನಲ್ಲಿ ವೈಕಾಂ18 ಹಾಗೂ ರಿಲಯನ್ಸ್‌ ಡಿಜಿಟಲ್ ಹಕ್ಕು ಪಡೆದಿರುವುದರಿಂದಾಗಿ ಜಿಯೋ ಸಿನಿಮಾ ಆಪ್ ಮೂಲಕವೂ ವೀಕ್ಷಿಸಬಹುದಾಗಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಂ ವೆಬ್‌ಸೈಟ್ ಮೂಲಕ ನೀವು ಮಿನಿ ಹರಾಜಿನ ಪ್ರತಿಕ್ಷಣದ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯಬಹುದು.

IPL Auction ಕನ್ನಡಿಗರ ಮೇಲೆ ಆರ್‌ಸಿಬಿ ಕಣ್ಣು, ಹರಾಜಿಗಾಗಿ ಬೆಂಗಳೂರು ರೆಡಿ!

ಹರಾಜಿನ ಅಂಕಿ-ಅಂಶಗಳು:

163 ಆಟಗಾರರು: ಹರಾಜಿಗೂ ಮೊದಲು 10 ತಂಡಗಳು ಒಟ್ಟು 163 ಆಟಗಾರರನ್ನು ರೀಟೈನ್‌ ಮಾಡಿಕೊಂಡಿವೆ.

30 ಆಟಗಾರರು: ಹರಾಜಿನಲ್ಲಿರುವ 87 ಖಾಲಿ ಸ್ಥಾನಗಳಲ್ಲಿ ಗರಿಷ್ಠ 30 ಸ್ಥಾನಗಳು ವಿದೇಶಿ ಆಟಗಾರರ ಪಾಲಾಗಬಹುದು.

206 ಕೋಟಿ ರುಪಾಯಿ: ಹರಾಜಿನಲ್ಲಿ 10 ಫ್ರಾಂಚೈಸಿಗಳು ಸೇರಿ ಒಟ್ಟು 206.5 ಕೋಟಿ ರು. ಖರ್ಚು ಮಾಡಬಹುದಾಗಿದೆ.

Follow Us:
Download App:
  • android
  • ios