ಅಡಿಲೇಡ್(ಡಿ)‌: 9 ತಿಂಗಳ ಬಳಿಕ ಟೀಂ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ ಆಡಲು ಸಜ್ಜಾಗಿದ್ದು, ಆಸ್ಪ್ರೇಲಿಯಾ ವಿರುದ್ಧ ಗುರುವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ನಲ್ಲಿ ಪಾಲ್ಗೊಳ್ಳಲಿದೆ. ಉಭಯ ದೇಶಗಳ ನಡುವಿನ ಮೊದಲ ಹಗಲು-ರಾತ್ರಿ ಟೆಸ್ಟ್‌ ಪಂದ್ಯ ಇದಾಗಿದ್ದು, ಭಾರೀ ಕುತೂಹಲ ಮೂಡಿಸಿದೆ.

ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿದ್ದ ಭಾರತ, 2 ಪಂದ್ಯಗಳ ಸರಣಿಯಲ್ಲಿ ವೈಟ್‌ವಾಶ್‌ ಮುಖಭಂಗಕ್ಕೊಳಗಾಗಿತ್ತು. ಮೊದಲ ಟೆಸ್ಟ್‌ ಬಳಿಕ ನಾಯಕ ವಿರಾಟ್‌ ಕೊಹ್ಲಿ ಭಾರತಕ್ಕೆ ವಾಪಸಾಗಲಿದ್ದು, ಸರಣಿ ಮೇಲೆ ಹಿಡಿತ ಸಾಧಿಸಬೇಕು ಎಂದರೆ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಲೇಬೇಕು.

ರಾಹುಲ್‌, ಗಿಲ್‌ಗಿಲ್ಲ ಸ್ಥಾನ: ಭಾರತ ತಂಡ ಬುಧವಾರವೇ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದು, ಆರಂಭಿಕರಾಗಿ ಮಯಾಂಕ್‌ ಅಗರ್‌ವಾಲ್‌ ಹಾಗೂ ಪೃಥ್ವಿ ಶಾಗೆ ಸ್ಥಾನ ನೀಡಿದೆ. ಹೀಗಾಗಿ ಕೆ.ಎಲ್‌.ರಾಹುಲ್‌ ಹಾಗೂ ಶುಭ್‌ಮನ್‌ ಗಿಲ್‌ ಹೊರಗುಳಿಯಬೇಕಿದೆ. 3ನೇ ಕ್ರಮಾಂಕದಲ್ಲಿ ಚೇತೇಶ್ವರ್‌ ಪೂಜಾರ, 4ರಲ್ಲಿ ವಿರಾಟ್‌ ಕೊಹ್ಲಿ, 5ನೇ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಆಡಲಿದ್ದಾರೆ. 6ನೇ ಕ್ರಮಾಂಕದಲ್ಲಿ ಹನುಮ ವಿಹಾರಿ ಕಣಕ್ಕಿಳಿಯಲಿದ್ದು, 5ನೇ ಬೌಲರ್‌ ಆಗಿಯೂ ಕಾರ‍್ಯನಿರ್ವಹಿಸಲಿದ್ದಾರೆ.

ಭಾರತ-ಆಸ್ಟ್ರೇಲಿಯಾ 1ನೇ ಟೆಸ್ಟ್: ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ನಾಯಕ ಕೊಹ್ಲಿ!

ಅಭ್ಯಾಸ ಪಂದ್ಯದಲ್ಲಿ ರಿಷಭ್‌ ಪಂತ್‌ ಶತಕ ಬಾರಿಸಿದರೂ ವಿಕೆಟ್‌ ಕೀಪರ್‌ ಸ್ಥಾನವನ್ನು ವೃದ್ಧಿಮಾನ್‌ ಸಾಹಗೆ ನೀಡಲಾಗಿದೆ. ಆರ್‌.ಅಶ್ವಿನ್‌ ಸ್ಪಿನ್‌ ಬೌಲಿಂಗ್‌ ಜೊತೆ ಕೆಳ ಕ್ರಮಾಂಕದ ಬ್ಯಾಟಿಂಗ್‌ ಬಲ ಹೆಚ್ಚಿಸಲಿದ್ದಾರೆ. ಉಮೇಶ್‌ ಯಾದವ್‌, ಮೊಹಮದ್‌ ಶಮಿ ಹಾಗೂ ಜಸ್‌ಪ್ರೀತ್‌ ಬುಮ್ರಾ ವೇಗದ ಬೌಲಿಂಗ್‌ ಹೊಣೆ ಹೊರಲಿದ್ದಾರೆ. ಭಾರತದ ಬ್ಯಾಟಿಂಗ್‌ ಪಡೆ ಸದೃಢವಾಗಿದ್ದು, ಒಬ್ಬ ಬೌಲರ್‌ನ ಕೊರತೆ ಎದುರಿಸಲಿದೆ. ಹನುಮ ವಿಹಾರಿ ಎಷ್ಟುಪರಿಣಾಮಕಾರಿಯಾಗಲಿದ್ದಾರೆ ಎನ್ನುವ ಬಗ್ಗೆ ಕುತೂಹಲವಿದೆ.

ಆರಂಭಿಕರ ಕೊರತೆ: ಮತ್ತೊಂದೆಡೆ ಆತಿಥೇಯ ಆಸ್ಪ್ರೇಲಿಯಾಗೆ ಆರಂಭಿಕರ ಕೊರತೆ ಎದುರಾಗಿದೆ. ಹೀಗಾಗಿ ಲಯದಲ್ಲಿಲ್ಲದಿದ್ದರೂ ಅನುಭವದ ಆಧಾರದ ಮೇಲೆ ಜೋ ಬರ್ನ್ಸ್‌ಗೆ ಸ್ಥಾನ ಸಿಗಲಿದೆ. ಬರ್ನ್ಸ್ ಜೊತೆ ಮ್ಯಾಥ್ಯೂ ವೇಡ್‌ ಇನ್ನಿಂಗ್ಸ್‌ ಆರಂಭಿಸುವ ನಿರೀಕ್ಷೆ ಇದೆ. ಸ್ಟೀವ್‌ ಸ್ಮಿತ್‌ ಬೆನ್ನು ನೋವಿನಿಂದ ಚೇತರಿಸಿಕೊಂಡಿದ್ದು, ಪಂದ್ಯದಲ್ಲಿ ಆಡಲಿದ್ದಾರೆಂದು ನಾಯಕ ಟಿಮ್‌ ಪೈನ್‌ ಖಚಿತಪಡಿಸಿದ್ದಾರೆ. ಆಲ್ರೌಂಡರ್‌ ಕೆಮರೂನ್‌ ಗ್ರೀನ್‌ ಸಹ ಫಿಟ್‌ ಆಗಿದ್ದು, ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.

ಮಾರ್ನಸ್‌ ಲಬುಶೇನ್‌ ಉತ್ತಮ ಲಯದಲ್ಲಿದ್ದಾರೆ. ಟ್ರ್ಯಾವಿಸ್‌ ಹೆಡ್‌ ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸಲಿದ್ದಾರೆ. ಮಿಚೆಲ್‌ ಸ್ಟಾರ್ಕ್, ಜೋಶ್‌ ಹೇಜಲ್‌ವುಡ್‌, ಪ್ಯಾಟ್‌ ಕಮಿನ್ಸ್‌, ನೇಥನ್‌ ಲಯನ್‌ ದಾಳಿಯನ್ನು ಎದುರಿಸುವುದು ಭಾರತೀಯರ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ತಂಡಗಳು

ಭಾರತ (ಅಂತಿಮ 11): ಮಯಾಂಕ್‌ ಅಗರ್‌ವಾಲ್‌, ಪೃಥ್ವಿ ಶಾ, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್‌ ಸಾಹ, ಆರ್‌.ಅಶ್ವಿನ್‌, ಉಮೇಶ್‌ ಯಾದವ್‌, ಮೊಹಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ.

ಆಸ್ಪ್ರೇಲಿಯಾ(ಸಂಭವನೀಯರು): ಜೋ ಬರ್ನ್ಸ್‍, ಮ್ಯಾಥ್ಯೂ ವೇಡ್‌, ಮಾರ್ನಸ್‌ ಲಬುಶೇನ್‌, ಸ್ಟೀವ್‌ ಸ್ಮಿತ್‌, ಟಿಮ್‌ ಪೈನ್‌, ಟ್ರ್ಯಾವಿಸ್‌ ಹೆಡ್‌, ಕೆಮರೂನ್‌ ಗ್ರೀನ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್, ನೇಥನ್‌ ಲಯನ್‌, ಜೋಶ್‌ ಹೇಜಲ್‌ವುಡ್‌.

ಪಿಚ್‌ ರಿಪೋರ್ಟ್‌

ಹಗಲು-ರಾತ್ರಿ ಪಂದ್ಯವಾಗಿರೋದ್ರಿಂದ ಪಿಂಕ್‌ ಬಾಲ್‌ನ ಗುಣಮಟ್ಟಕಾಪಾಡಲು ಪಿಚ್‌ನಲ್ಲಿ ಸ್ವಲ್ಪ ಪ್ರಮಾಣದ ಹುಲ್ಲು ಬಿಡಲಾಗಿರುತ್ತದೆ. ಹೀಗಾಗಿ ವೇಗದ ಬೌಲರ್‌ಗಳಿಗೆ ಸಹಜವಾಗಿಯೇ ನೆರವು ಸಿಗಲಿದೆ. ಮಳೆ ಮುನ್ಸೂಚನೆ ಇರುವ ಕಾರಣ ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಭಾರತಕ್ಕೆ 2ನೇ ಹಗಲು-ರಾತ್ರಿ ಟೆಸ್ಟ್‌

ಭಾರತ ತಂಡಕ್ಕಿದು 2ನೇ ಹಗಲು-ರಾತ್ರಿ ಟೆಸ್ಟ್‌ ಪಂದ್ಯ. ಕಳೆದ ವರ್ಷ ಕೋಲ್ಕತಾದಲ್ಲಿ ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಪಂದ್ಯವನ್ನು ಆಡಿ, ಇನ್ನಿಂಗ್ಸ್‌ ಹಾಗೂ 46 ರನ್‌ಗಳಿಂದ ಜಯಗಳಿಸಿತ್ತು. ಇದೇ ವೇಳೆ ಆಸ್ಪ್ರೇಲಿಯಾಗಿದು 8ನೇ ಹಗಲು-ರಾತ್ರಿ ಟೆಸ್ಟ್‌ . ತಂಡ ಈ ವರೆಗೂ ಆಡಿರುವ ಎಲ್ಲ 7 ಪಂದ್ಯಗಳಲ್ಲಿ ಜಯ ಗಳಿಸಿದೆ. ವಿಶೇಷ ಎಂದರೆ 7 ಪಂದ್ಯಗಳ ಪೈಕಿ 4 ಪಂದ್ಯಗಳು ಅಡಿಲೇಡ್‌ನಲ್ಲೇ ನಡೆದಿವೆ.

ಸ್ಥಳ: ಅಡಿಲೇಡ್‌ 
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸೋನಿ ಟೆನ್‌