ಭಾರತ-ಆಸ್ಟ್ರೇಲಿಯಾ 1ನೇ ಟೆಸ್ಟ್: ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ನಾಯಕ ಕೊಹ್ಲಿ!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಳೆಯಿಂದ(ಡಿ.17ರಿಂದ ಆರಂಭಗೊಳ್ಳುತ್ತಿದೆ. ಆಡಿಲೇಡ್‌ನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ಹೊಸ ಸಂಪ್ರದಾಯದಂತೆ ಒಂದು ದಿನ ಮೊದಲೇ ಆಡೋ ಹನ್ನೊಂದರ ಬಳಗವನ್ನು ಪ್ರಕಟಿಸಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಹಾಗೂ ಟಿ20 ಸರಣಿ ಮುಗಿಸಿರುವ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಡಿಸೆಂಬರ್ 17 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ.
ಆಡಿಲೇಡ್‌ನಲ್ಲಿ ಆಯೋಜಿಸಿರುವ ಪಿಂಕ್ ಬಾಲ್ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕಾಗಿ ನಾಯಕ ವಿರಾಟ್ ಕೊಹ್ಲಿ ಬಲಿಷ್ಠ ತಂಡ ಪ್ರಕಟಿಸಿದ್ದಾರೆ. ಈ ಮೂಲಕ ಹಲವು ಕುತೂಹಲಗಳಿಗೆ ಉತ್ತರ ನೀಡಿದ್ದಾರೆ.
ಅಳೆದು ತೂಗಿ ಆಟಗಾರರ ಆಯ್ಕೆ ಮಾಡಿರುವ ನಾಯಕ ಕೊಹ್ಲಿ, ಕೆಎಲ್ ರಾಹುಲ್ ಬದಲು ಪೃಥ್ವಿ ಶಾಗೆ ಅವಕಾಶ ನೀಡಲಾಗಿದೆ. ಇದು ಕೆಲ ಚರ್ಚೆಗೆ ಕಾರಣವಾಗಿದೆ.
ವಿಕೆಟ್ ಕೀಪರ್ ಸ್ಥಾನಕ್ಕೆ ಮೊದಲ ಆಯ್ಕೆಯಾಗಿರುವ ವೃದ್ಧಿಮಾನ್ ಸಾಹ ಸ್ಥಾನ ಪಡೆದಿದ್ದಾರೆ. ಹೀಗಾಗಿ ರಿಷಬ್ ಪಂತ್ ಅವಕಾಶಕ್ಕಾಗಿ ಕಾಯಬೇಕಿದೆ. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಬದಲು ಆರ್ ಅಶ್ವಿನ್ ಸ್ಥಾನ ಪಡೆದಿದ್ದಾರೆ.
ಪ್ರಮುಖ ವೇಗಿಯಾಗಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಕಾಣಿಸಿಕೊಳ್ಳಲಿದ್ದಾರೆ. 3ನೇ ವೇಗಿಯಾಗಿ ಉಮೇಶ್ ಯಾದವ್ ಆಯ್ಕೆಯಾಗಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ವೃದ್ಧಿಮಾನ್ ಸಾಹ, ಆರ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಆಡಿಲೇಡ್ ಟೆಸ್ಟ್ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ತವರಿಗೆ ಆಗಮಿಸಲಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಹಾಗೂ ಕೊಹ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಕೊಹ್ಲಿ ಪೆಟರ್ನಿಟಿ ಲೀವ್ ಪಡೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿ ಕಾರಣ ರೋಹಿತ್ ಶರ್ಮಾಗೆ ಟೆಸ್ಟ್ ತಂಡಕ್ಕೆ ಅವಕಾಶ ನೀಡಲಾಗಿದೆ. ಇತ್ತೀಚೆಗೆ ರೋಹಿತ್ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದರು.
ವಿರಾಟ್ ಕೊಹ್ಲಿ ಬದಲು ರೋಹಿತ್ ತಂಡ ಸೇರಿಕೊಳ್ಳಲಿದ್ದಾರೆ. ಆದರೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವವನ್ನು ಉಪನಾಯಕ ಅಜಿಂಕ್ಯ ರಹಾನೆ ವಹಿಸಿಕೊಳ್ಳಲಿದ್ದಾರೆ.