ಅಶ್ವಿನ್‌ಗೆ ಖೇಲ್‌ ರತ್ನ ಪ್ರಶಸ್ತಿ ನೀಡಲು ಕನ್ಯಾಕುಮಾರಿ ಸಂಸದರು ಕೇಂದ್ರ ಕ್ರೀಡಾ ಸಚಿವರಿಗೆ ಪತ್ರ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿ ಘೋಷಿಸಿದ ಅಶ್ವಿನ್‌ಗೆ ಸಚಿನ್‌, ಕಪಿಲ್‌ ದೇವ್‌ ಶುಭ ಹಾರೈಸಿದ್ದಾರೆ. ಕಪಿಲ್‌ ದೇವ್‌, ಅಶ್ವಿನ್‌ ತವರು ನೆಲದಲ್ಲಿ ಸೂಕ್ತ ವಿದಾಯಕ್ಕೆ ಅರ್ಹರೆಂದಿದ್ದಾರೆ. ಅವರ ನಿರ್ಧಾರ ದುಃಖಕರ ಎಂದೂ ಹೇಳಿದ್ದಾರೆ.

ನವದೆಹಲಿ: ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನ 2ನೇ ಗರಿಷ್ಠ ವಿಕೆಟ್‌ ಸರದಾರ ಎನಿಸಿಕೊಂಡಿರುವ ಹಿರಿಯ ಆಟಗಾರ ಆರ್‌.ಅಶ್ವಿನ್‌ಗೆ ಖೇಲ್‌ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯಗೆ ಕನ್ಯಾಕುಮಾರಿ ಕಾಂಗ್ರೆಸ್ ಸಂಸದ ವಿಜಯ್‌ ವಸಂತ್‌ ಪತ್ರ ಬರೆದಿದ್ದಾರೆ. 

ತಮ್ಮ ಪತ್ರವನ್ನು ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಹಾಗೂ ಮೈದಾನದಲ್ಲಿ ಅಭೂತಪೂರ್ವ ಸಾಧನೆ ಮೂಲಕ ಅಶ್ವಿನ್‌ ಖೇಲ್‌ ರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ’ ಎಂದು ಶ್ಲಾಘಿಸಿದ್ದಾರೆ. 38ರ ಅಶ್ವಿನ್‌, ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಈತನೇ ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ ರವಿಚಂದ್ರನ್ ಅಶ್ವಿನ್! ಸೆಲೆಕ್ಟರ್ಸ್ ತಲೆನೋವು ಕಮ್ಮಿ ಮಾಡಿದ ಆಫ್‌ಸ್ಪಿನ್ನರ್

ನಿವೃತ್ತಿ ಬಳಿಕ ಸಚಿನ್‌, ಕಪಿಲ್‌ ಕರೆ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ತಮಗೆ ಕರೆ ಮಾಡಿದವರ ವಿವರನ್ನು ಅಶ್ವಿನ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಸಚಿನ್‌, ಕಪಿಲ್‌ ದೇವ್‌ ಸೇರಿದಂತೆ ಪ್ರಮುಖರು ಕರೆ ಮಾಡಿ, ಶುಭ ಹಾರೈಸಿದ್ದರು. ಇದರ ಸ್ಕ್ರೀನ್‌ಶಾಟ್‌ ಅಶ್ವಿನ್‌ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು, ಸಂತಸ ವ್ಯಕ್ತಪಡಿಸಿದ್ದಾರೆ.

ಅಶ್ವಿನ್ ಸೂಕ್ತ ವಿದಾಯಕ್ಕೆ ಅರ್ಹರು: ಕಪಿಲ್ ದೇವ್

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಆರ್.ಅಶ್ವಿನ್ ಅವರ ನಿರ್ಧಾರದ ಬಗ್ಗೆ ಭಾರತದ ಮಾಜಿ ನಾಯಕ ಕಪಿಲ್ ದೇವ್ ಪ್ರತಿಕ್ರಿಯಿಸಿದ್ದಾರೆ. ‘ಅಶ್ವಿನ್ ದಿಢೀರ್‌ ನಿವೃತ್ತಿ ಆಘಾತ ತಂದಿದೆ. ಅವರು ತವರು ನೆಲದಲ್ಲಿ ಸೂಕ್ತ ವಿದಾಯಕ್ಕೆ ಅರ್ಹರು’ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕಪಿಲ್‌, ‘ಭಾರತದ ಶ್ರೇಷ್ಠ ಆಟಗಾರರೊಬ್ಬರು ತಮ್ಮ ಆಟವನ್ನು ತೊರೆದ ರೀತಿ ಬಗ್ಗೆ ನನಗೆ ಆಘಾತವಾಗುತ್ತಿದೆ. ಅವರ ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗಿದೆ. ಅಶ್ವಿನ್‌ ಮುಖದಲ್ಲೂ ನಾನು ನೋವಿನ ಛಾಯೆಯನ್ನು ನೋಡಿದೆ. ಅವರು ಖುಷಿಯಾಗಿ ಇದ್ದಂತೆ ಕಾಣುತ್ತಿಲ್ಲ. ಅವರ ನಿರ್ಧಾರ ದುಃಖಕರವಾಗಿತ್ತು. ಇದಕ್ಕಿಂತಲೂ ಉತ್ತಮವಾದ ವಿದಾಯಕ್ಕೆ ಅಶ್ವಿನ್‌ ಅರ್ಹರು’ ಎಂದಿದ್ದಾರೆ.

ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮೇಲೆ ಅರೆಸ್ಟ್ ವಾರೆಂಟ್ ಜಾರಿ! ಮಾಡಿದ ತಪ್ಪೇನು?

‘ಅಶ್ವಿನ್‌ ಭಾರತದಲ್ಲಿ ನಿವೃತ್ತಿ ಪಂದ್ಯವಾಡಲು ಕಾಯುಬಹುದಿತ್ತು. ಆದರೆ ಈಗ ಯಾಕೆ ನಿವೃತ್ತಿಯಾದರು ಗೊತ್ತಿಲ್ಲ. ಅವರಿಗೆ ಗೌರವಕ್ಕೆ ಅರ್ಹರು. ಭಾರತೀಯ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆಯನ್ನು ಯಾರೂ ಸರಿಗಟ್ಟಲು ಸಾಧ್ಯವಿಲ್ಲ’ ಎಂದು ಕಪಿಲ್‌ ಶ್ಲಾಘಿಸಿದ್ದಾರೆ.