ಈತನೇ ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ ರವಿಚಂದ್ರನ್ ಅಶ್ವಿನ್! ಸೆಲೆಕ್ಟರ್ಸ್ ತಲೆನೋವು ಕಮ್ಮಿ ಮಾಡಿದ ಆಫ್‌ಸ್ಪಿನ್ನರ್
ಟೀಂ ಇಂಡಿಯಾ ದಿಗ್ಗಜ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಅಶ್ವಿನ್ ತಮ್ಮ ನಿವೃತ್ತಿಯ ಬೆನ್ನಲ್ಲೇ ತಮ್ಮ ಉತ್ತರಾಧಿಕಾರಿ ಯಾರು ಎಂಬುದನ್ನು ಸೂಕ್ಷ್ಮವಾಗಿ ಬಹಿರಂಗಪಡಿಸಿದ್ದಾರೆ.
ಬೆಂಗಳೂರು: ಟೀಂ ಇಂಡಿಯಾ ದಿಗ್ಗಜ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯದಲ್ಲಿಯೇ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದೀಗ ಅಶ್ವಿನ್ ನಿವೃತ್ತಿ ಬದುಕಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಅಶ್ವಿನ್ ನಿವೃತ್ತಿ ಜೀವನಕ್ಕೆ ಚೆನ್ನೈ ಮೂಲದ ಯುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕೂಡಾ ಶುಭ ಹಾರೈಸಿದ್ದಾರೆ. ಇದೀಗ ರವಿಚಂದ್ರನ್ ಅಶ್ವಿನ್ ತಮ್ಮ ನಿವೃತ್ತಿಯ ಬೆನ್ನಲ್ಲೇ ತಮ್ಮ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವುದನ್ನು ಸೂಕ್ಷ್ಮವಾಗಿ ಬಹಿರಂಗ ಪಡಿಸುವ ಮೂಲಕ ಟೀಂ ಇಂಡಿಯಾ ಆಯ್ಕೆ ಸಮಿತಿಯ ತಲೆನೋವನ್ನು ಕಡಿಮೆ ಮಾಡಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಗಾಬಾ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಅಚ್ಚರಿಯ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದರ ಬೆನ್ನಲ್ಲೇ ಅಶ್ವಿನ್‌ಗೆ ಪ್ರತಿಭಾನ್ವಿತ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ವಿಶೇಷ ಸಂದೇಶ ರವಾನಿಸಿದ್ದರು.
.@ashwinravi99 🐐🤍 pic.twitter.com/z4VlTpVf4M
— Washington Sundar (@Sundarwashi5) December 18, 2024
"ಸಹ ಆಟಗಾರನಾಗಿರುವುದರ ಜತೆಗೆ ನೀವು ನನ್ನ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದೀರ ಅಣ್ಣ. ನಿಮ್ಮ ಜತೆ ಮೈದಾನ ಹಾಗೂ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದು ನಿಜಕ್ಕೂ ಒಂದು ಗೌರವದ ಸಂಗತಿಯಾಗಿದೆ. ಒಂದೇ ರಾಜ್ಯದವರಾದ ನಾವು ನಿಮ್ಮನು ನೋಡಲು ಚೆಪಾಕ್ ಮೈದಾನಕ್ಕೆ ಬರುವುದರಿಂದ ಹಿಡಿದು ನಿಮ್ಮ ಜತೆ ಆಡುತ್ತಾ ಬೆಳೆದಿದ್ದೇನೆ. ನಿಮ್ಮ ಜತೆ ಕಳೆದ ಪ್ರತಿಕ್ಷಣವೂ ನನ್ನ ಪಾಲಿನ ಸೌಭಾಗ್ಯ. ನೀವು ಮೈದಾನದೊಳಗೆ ಹಾಗೂ ಹೊರಗೆ ಸಾಕಷ್ಟು ಕಲಿಸಿದ್ದೀರ. ನಾನು ಎಂದೆಂದಿಗೂ ನಿಮ್ಮ ಜತೆ ಇರುತ್ತೇನೆ. ನಿಮ್ಮ ಮುಂದಿನ ಭವಿಷ್ಯ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ ಎಂದು ವಾಷಿಂಗ್ಟನ್ ಸುಂದರ್ ಶುಭ ಹಾರೈಸಿದ್ದರು.
Thupakkiya pudinga washiii! The 2 minutes you spoke that night in the get together was the best🤗
— Ashwin 🇮🇳 (@ashwinravi99) December 20, 2024
ಇನ್ನು ವಾಷಿಂಗ್ಟನ್ ಅವರು ಮಾಡಿದ ಈ ಟ್ವೀಟ್‌ಗೆ ರವಿಚಂದ್ರನ್ ಅಶ್ವಿನ್ ಕೂಡಾ ಇಂಟ್ರೆಸ್ಟಿಂಗ್ ಆದ ಪ್ರತಿಕ್ರಿಯೆ ನೀಡಿದ್ದಾರೆ. " ತುಪಕ್ಕೀಯಾ ಪುಡಿಂಗ ವಾಷಿ! ನಿವೃತ್ತಿ ಘೋಷಣೆಯ ಬಳಿಕ ಎಲ್ಲರ ಭೇಟಿಯ ವೇಳೆ ನಿಮ್ಮ ಜತೆ ಮಾತಾಡಿದ ಎರಡು ನಿಮಿಷಗಳ ಸಮಯ ಅತ್ಯಂತ ಮಹತ್ವದ್ದು ಎಂದು ಅಶ್ವಿನ್ ಬರೆದುಕೊಂಡಿದ್ದಾರೆ. ಅಂದಹಾಗೆ ತಮಿಳಿನಲ್ಲಿ ತುಪಕ್ಕೀಯಾ ಪುಡಿಂಗ ಅಂದರೆ 'ಬಂದೂಕು ಹಿಡಿ' ಎಂದರ್ಥ.