ದುಬೈ(ನ.21): ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯ ಕ್ರಿಕೆಟ್‌ ಕಾಶಿ ಲಾರ್ಡ್ಸ್ ಕ್ರೀಡಾಂಗಣದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. 

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹಾಗೂ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ನಡುವಿನ ಹಣಕಾಸಿನ ಒಪ್ಪಂದದ ಸಮಸ್ಯೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಪಂದ್ಯ 2021ರ ಜೂ.10ರಿಂದ 14ರ ವರೆಗೂ ನಿಗದಿಯಾಗಿದೆ. ಈ ಬಗ್ಗೆ ಐಸಿಸಿ ಹಾಗೂ ಇಸಿಬಿ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ಯಾವುದೇ ಸಕಾರಾತ್ಮಕ ಬೆಳವಣಿಗೆ ನಡೆಯುತ್ತಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ. ಒಂದೊಮ್ಮೆ ಪಂದ್ಯ ಲಾರ್ಡ್ಸ್‌ನಿಂದ ಸ್ಥಳಾಂತರಗೊಂಡರೆ ಬೇರೆಲ್ಲಿ ನಡೆಸಬೇಕು ಎನ್ನುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್: 2ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ..!

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಗೆ ಈಗಾಗಲೇ ಹಲವು ಅಡ್ಡಿ-ಆತಂಕಗಳು ಎದುರಾಗಿವೆ. ಕೊರೋನಾ ಹೆಮ್ಮಾರಿಯ ಅಟ್ಟಹಾಸದಿಂದಾಗಿ ಹಲವು ದ್ವಿಪಕ್ಷೀಯ ಸರಣಿಗಳು ರದ್ದಾಗಿವೆ. ಇದರ ಬೆನ್ನಲ್ಲೇ ಐಸಿಸಿ ಅಂಕಪಟ್ಟಿಯ ಬದಲಾಗಿ ಪ್ರತಿಶತ ಅಂಕದ ಆಧಾರದಲ್ಲಿ ಮೊದಲೆರಡು ಸ್ಥಾನ ಗಳಿಸಿದ ತಂಡಗಳು ಫೈನಲ್‌ನಲ್ಲಿ ಕಾದಾಡಲಿವೆ ಎಂದು ಖಚಿತಪಡಿಸಿವೆ. ಸದ್ಯದ ಸ್ಥಿತಿಯಲ್ಲಿ ಅಂದರೆ ನವೆಂಬರ್ 21ರ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದೆ.