ದುಬೈ(ನ.20): ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ 2ನೇ ಸ್ಥಾನಕ್ಕೆ ಕುಸಿದಿದೆ. 

ಕೊರೋನಾದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವ್ಯಾಪ್ತಿಗೆ ಒಳಪಟ್ಟ ಹಲವು ಟೆಸ್ಟ್ ಸರಣಿಗಳು ರದ್ದುಗೊಂಡ ಹಿನ್ನೆಲೆಯಲ್ಲಿ ಐಸಿಸಿ ಅಳವಡಿಸಿದ ಹೊಸ ನಿಯಮದ ಪ್ರಕಾರ ಭಾರತ ಕುಸಿತ ಕಂಡಿದೆ. ತಂಡಗಳು ಒಟ್ಟು ಗಳಿಸುವ ಅಂಕಗಳ ಪ್ರತಿಶತದ ಆಧಾರದಲ್ಲಿ ಫೈನಲ್‌ನಲ್ಲಾಡುವ ತಂಡಗಳನ್ನು ನಿರ್ಧರಿಸುವ ಬಗ್ಗೆ ಕ್ರಿಕೆಟ್ ಸಮಿತಿ ಇರಿಸಿದ್ದ ಪ್ರಸ್ತಾಪವನ್ನು ಐಸಿಸಿ, ಗುರುವಾರ(ನವೆಂಬರ್ 19) ಅಂಗೀಕರಿಸಿದೆ. 

ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 9 ತಂಡ ಗಳು ಸ್ಪರ್ಧಿಸುತ್ತಿದ್ದು ಅತಿಹೆಚ್ಚು ಅಂಕಗಳಿಸುವ 2 ತಂಡಗಳು ಫೈನಲ್‌ಗೇರಲಿವೆ. ಸದ್ಯ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯ ಪ್ರತಿಶತ ಅಂಕಗಳಲ್ಲಿ ಆಸ್ಟ್ರೇಲಿಯಾ (ಶೇ. 82.2) ಅಂಕಗಳಿಸಿದ್ದರೆ, ಭಾರತ (ಶೇ.75.0) ಅಂಕಗಳಿಸಿದೆ.

ಟೆಸ್ಟ್ ವಿಶ್ವಕಪ್ ಫೈನಲ್: ಐಸಿಸಿ ಹೊಸ ನಿಯಮ?

ಇನ್ನು ನವೆಂಬರ್ 19ರ ವೇಳೆಗೆ ಆಸ್ಟ್ರೇಲಿಯಾ ಹಾಗೂ ಭಾರತ ಮೊದಲೆರಡು ಸ್ಥಾನದಲ್ಲಿದ್ದರೆ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿವೆ. ಇನ್ನು ಶ್ರೀಲಂಕಾ, ವೆಸ್ಟ್‌ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲದೇಶ ತಂಡಗಳು ಆ ನಂತರದ ಸ್ಥಾನದಲ್ಲಿವೆ.

ಇದೇ ವೇಳೆ ಐಸಿಸಿ 2022ರಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು 2023ರ ಫೆಬ್ರವರಿ 09ರಿಂದ 26ರವರೆಗೆ ಆಯೋಜಿಸಲು ತೀರ್ಮಾನ ತೆಗೆದುಕೊಂಡಿದೆ.