ಐದನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಗೆಲುವಿನತ್ತ ದಾಪುಗಾಲು ಇಟ್ಟಿದ್ದು, ಕ್ರಿಸ್ ವೋಕ್ಸ್ ಬ್ಯಾಟಿಂಗ್ ಮಾಡುತ್ತಾರಾ ಎಂಬ ಕುತೂಹಲ ಮೂಡಿದೆ. ಜೋ ರೂಟ್ ವೋಕ್ಸ್ ಬ್ಯಾಟಿಂಗ್ ಮಾಡುವುದಾಗಿ ಹೇಳಿದ್ದಾರೆ. ಭಾರತಕ್ಕೆ ಗೆಲುವಿಗೆ 4 ವಿಕೆಟ್‌ಗಳು ಬೇಕಿದ್ದು, ಪಂದ್ಯ ರೋಚಕ ಘಟ್ಟ ತಲುಪಿದೆ.

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಕೊನೆಯ ಟೆಸ್ಟ್‌ ಇದೀಗ ರೋಚಕ ಘಟ್ಟ ತಲುಪಿದ್ದು, ಕೊನೆಯ ದಿನದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕೊನೆಯ ಟೆಸ್ಟ್ ಗೆಲ್ಲಲು ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಕೇವಲ 35 ರನ್‌ಗಳ ಅಗತ್ಯವಿದ್ದರೇ, ಭಾರತಕ್ಕೆ ಈ ಟೆಸ್ಟ್ ಗೆಲ್ಲಲು ಕೊನೆಯ 4 ವಿಕೆಟ್‌ಗಳು ಬೇಕಿವೆ. ಹೀಗಾಗಿ ಪಂದ್ಯ ಯಾವ ಕಡೆ ಬೇಕಾದರೂ ವಾಲುವ ಸಾಧ್ಯತೆಯಿದ್ದು, ಕ್ರಿಕೆಟ್ ಅಭಿಮಾನಿಗಳ ಚಿತ್ತ ಈ ಪಂದ್ಯದತ್ತ ನೆಟ್ಟಿದೆ. ಮೇಲ್ನೋಟಕ್ಕೆ ಇಂಗ್ಲೆಂಡ್ ತಂಡವು ಕೊಂಚ ಒತ್ತಡಕ್ಕೆ ಸಿಲುಕಿರುವಂತೆ ಕಂಡು ಬರುತ್ತಿದೆ. ಇದೆಲ್ಲದರ ನಡುವೆ ಗಾಯಾಳು ಕ್ರಿಸ್ ವೋಕ್ಸ್ ಅಗತ್ಯವಿದ್ದರೇ ಕೊನೆಯ ದಿನ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುತ್ತಾರೆಯೇ ಅಥವಾ ಇಲ್ಲವೇ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಂತೆ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ದಿಟ್ಟ ಉತ್ತರ ನೀಡಿ ಗಮನ ಸೆಳೆದಿದ್ದಾರೆ.

ಓವಲ್ ಟೆಸ್ಟ್‌ ಪಂದ್ಯದ ಮೊದಲ ದಿನವೇ ಬೌಲಿಂಗ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಗಾಯಗೊಂಡಿದ್ದರು. ಗಾಯಗೊಳ್ಳುವ ಮುನ್ನ 14 ಓವರ್ ಬೌಲಿಂಗ್ ಮಾಡಿದ್ದ ವೋಕ್ಸ್ 46 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಆದರೆ ಇದಾದ ಬಳಿಕ ಭುಜದ ಗಾಯದ ಸಮಸ್ಯೆಯಿಂದಾಗಿ ಮೈದಾನ ತೊರೆದ ವೋಕ್ಸ್, ಆ ಬಳಿಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಲು ಮೈದಾನಕ್ಕಿಳಿದಿರಲಿಲ್ಲ. ಇದೀಗ ಇಂಗ್ಲೆಂಡ್ ಗೆಲುವಿಗಾಗಿ ಶತಾಯಗತಾಯ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಕ್ರಿಸ್ ವೋಕ್ಸ್ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿಯುತ್ತಾರಾ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಂತೆ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ನಾಯಕ ಜೋ ರೂಟ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 'ಕ್ರಿಸ್ ವೋಕ್ಸ್ ತುಂಬಾ ನೋವು ಅನುಭವಿಸುತ್ತಿದ್ದಾರೆ. ಇದನ್ನು ನಾವು ಈ ಸರಣಿಯಲ್ಲಿ ನೋಡಿದ್ದೇವೆ. ಪಂತ್ ಕಾಲು ಮುರಿದಿದ್ದರೂ ಬ್ಯಾಟಿಂಗ್ ಮಾಡಲಿಳಿದಿದ್ದನ್ನು ನೋಡಿದ್ದೇವೆ. ಇದೀಗ ಕ್ರಿಸ್ ವೋಕ್ಸ್ ಇಂಗ್ಲೆಂಡ್ ತಂಡವನ್ನು ಗೆಲ್ಲಿಸಲು ಜೀವ ಒತ್ತೆಯಿಟ್ಟು ಆಡಲು ರೆಡಿಯಾಗಿದ್ದಾರೆ' ಎಂದು ರೂಟ್ ಹೇಳಿದ್ದಾರೆ.

Scroll to load tweet…

ಭಾರತೀಯ ಪಾಳಯದಲ್ಲಿ ಹೆಚ್ಚಿದ ಆತಂಕ:

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್‌ನ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಕ್ರಿಸ್ ವೋಕ್ಸ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದಿರಲಿಲ್ಲ. ಹೀಗಾಗಿ ಇಂಗ್ಲೆಂಡ್‌ನ 9 ವಿಕೆಟ್ ಪತನವಾಗುತ್ತಿದ್ದಂತೆಯೇ ಮೊದಲ ಇನ್ನಿಂಗ್ಸ್ ಕೊನೆಗೊಂಡಿತ್ತು. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡದ 9 ವಿಕೆಟ್ ಕಬಳಿಸಿದರೆ ಟೆಸ್ಟ್ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಭಾರತಕ್ಕೆ ಈ ಸುದ್ದಿ ಕೊಂಚ ಆತಂಕ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಇಂಗ್ಲೆಂಡ್‌ಗೆ ಗೆಲ್ಲಲು ಕೇವಲ 35 ರನ್ ಅಗತ್ಯ ಇರುವುದರಿಂದ, ಕ್ರಿಸ್ ವೋಕ್ಸ್ ಒಂದು ತುದಿಯಲ್ಲಿ ನಿಂತುಕೊಂಡರು ಮತ್ತೊಂದು ತುದಿಯಲ್ಲಿ ಇನ್ನೋರ್ವ ಬ್ಯಾಟರ್ ಅನಾಯಾಸವಾಗಿ ತಂಡವನ್ನು ಗೆಲುವಿನ ದಡ ಸೇರಿಸುವ ಸಾಧ್ಯತೆಯಿದೆ.

ಸದ್ಯ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 2-1ರ ಮುನ್ನಡೆ ಸಾಧಿಸಿದೆ. ಇದೀಗ ಓವಲ್ ಟೆಸ್ಟ್‌ನಲ್ಲಿ 374 ರನ್‌ಗಳ ಕಠಿಣ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ಗೆಲುವಿನ ಹೊಸ್ತಿಲಲ್ಲಿದೆ. ಒಂದು ವೇಳೆ ಈ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಜಯಿಸಿದರೆ, ಇತಿಹಾಸ ನಿರ್ಮಾಣವಾಗಲಿದೆ. ಯಾಕೆಂದರೆ ಓವಲ್ ಮೈದಾನದಲ್ಲಿ ಯಾವ ತಂಡವು ಇದುವರೆಗೂ 300+ ರನ್‌ ಅನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗಿಲ್ಲ. ಇಂದು ಟೆಸ್ಟ್ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ.