ವಿಚಿತ್ರ ಅವತಾರದಲ್ಲಿ ಕ್ರಿಸ್ ಗೇಲ್: ಯುನಿವರ್ಸಲ್ ಬಾಸ್‌ನ ಉರ್ಫಿಗೆ ಹೋಲಿಸಿದ ನೆಟ್ಟಿಗರು
ಕ್ರಿಸ್ ಗೇಲ್ ಅವರು ವಿಚಿತ್ರವಾದ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ಉರ್ಫಿ ಜಾವೇದ್‌ಗೆ ಹೋಲಿಸಲಾಗುತ್ತಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹಿಂದಿ ಬಿಗ್ಬಾಸ್ ಒಟಿಟಿ ಸ್ಪರ್ಧಿಯಾಗಿ ಭಾಗವಹಿಸಿ ಗಮನ ಸೆಳೆದ ಉರ್ಫಿ ಜಾವೇದ್ ಅವರು ತಮ್ಮ ವಿಭಿನ್ನವೆನಿಸುವ ಫ್ಯಾಷನ್‌ನಿಂದ ಗಮನ ಸೆಳೆದವರು. ಅವರು ತಮ್ಮ ಧಿರಿಸಾಗಿ ಬಳಸದ ವಸ್ತುವೇ ಇಲ್ಲವೆನ್ನಬಹುದು. ಉರ್ಫಿಯ ಡ್ರೆಸ್ಸಿಂಗ್ ಸ್ಟೈಲ್‌ನಿಂದ ಅನೇಕರು ಪ್ರಭಾವಕ್ಕೊಳಗಾಗಿದ್ದು, ಅವರ ರೀತಿಯೇ ಹಲವು ವಿವಿಧ ವಿಭಿನ್ನವೆನಿಸುವ ಡ್ರೆಸ್‌ಗಳ ಪ್ರಯೋಗ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತ ಉರ್ಫಿ ತಮ್ಮ ವಿಭಿನ್ನವಾದ ಫ್ಯಾಷನ್ ಸ್ಟಂಟ್‌ನಿಂದ ಕೇವಲ ಜನ ಸಾಮಾನ್ಯರನ್ನು ಮಾತ್ರವಲ್ಲದೇ ಬಾಲಿವುಡ್ ಸೆಲೆಬ್ರಿಟಿಗಳನ್ನು ಸೆಳೆಯುತ್ತಿದ್ದಾರೆ. ಆದರೆ ಈಗ ಖ್ಯಾತ ಕ್ರಿಕೆಟಿಗ ಆರ್‌ಸಿಬಿ ಆಟಗಾರ ಕ್ರಿಸ್ ಗೇಲ್‌ಗೆ ಏನಾಯ್ತೋ ಗೊತ್ತಿಲ್ಲ, ಅವರು ಕೂಡ ಉರ್ಫಿ ಸ್ಟೈಲ್ ಫಾಲೋ ಮಾಡಿದಂತೆ ಕಂಡು ಬರುತ್ತಿದ್ದು ಅವರ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಜಮೈಕಾದ ಈ ಆಟಗಾರ ಮೈದಾನದಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್‌ನಿಂದ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದವರು. ಕ್ರಿಕೆಟ್ ಹೊರತಾಗಿ ಅವರು ವಿವಿಧ ಕಾರಣಕ್ಕೆ ಆಗಾಗ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಈಗ ಅವರ ವೀಡಿಯೋವೊಂದು ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕ್ರಿಸ್ ಗೇಲ್ ತಮ್ಮ ವಿಭಿನ್ನವಾದ ವೇಷ ಭೂಷಣದಿಂದ ಗಮನ ಸೆಳೆದಿದ್ದಾರೆ. ಗಿಳಿ ಹಸಿರು ಬಣ್ಣದ ಚಡ್ಡಿ ಹಾಗೂ ಶೂ ಧರಿಸಿರುವ ಗೇಲ್ ಮೊಣಕಾಲಿನಿಂದ ಕೆಳಗೆ ಕಾಲುಗಳಿಗೆ ಕೈ ತೋಳುಗಳಿಗೆ, ಕುತ್ತಿಗೆ ಹಾಗೂ ಕಾಲುಗಳಿಗೆ ಕನ್ನಡಿ ಇರುವಂತಹ ಲಂಬಾಣಿ ಶೈಲಿಯ ವಿಚಿತ್ರವಾದ ಕಸ್ಟ್ಯೂಮ್ ಧರಿಸಿದ್ದು, ಇದನ್ನು ನೋಡಿದ ಅವರ ಅಭಿಮಾನಿಗಳು ಕ್ರಿಸ್ ಗೇಲನ್ನು ನಟಿ ಉರ್ಫಿ ಜಾವೇದ್‌ಗೆ ಹೋಲಿಕೆ ಮಾಡಿದ್ದಾರೆ.
ಈ ವೀಡಿಯೋವನ್ನು ಸ್ವತಃ ಕ್ರಿಸ್ ಗೇಲ್ ಪೋಸ್ಟ್ ಮಾಡಿದ್ದು,ಸೇಂಟ್ ಕಿಟ್ಸ್‌ನ ಅಲ್ಟ್ರಾ ಕಾರ್ನಿವಲ್ 2025 ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕ್ರಿಸ್ ಗೇಲ್ ಹೊಸ ಅವತಾರಕ್ಕೂ ಎಂದಿನಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಅವರನ್ನು ಸಿಂಹಕ್ಕೆ ಹೋಲಿಕೆ ಮಾಡಿದರೆ ಮತ್ತೆ ಕೆಲವರು ಯೂನಿವರ್ಸಲ್ ಬಾಸ್ ಎಂದು ಕರೆದಿದ್ದಾರೆ. ವೀಡಿಯೋದಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭ ಹಾರೈಸಿದ್ದು, ಕ್ರಿಸ್ ಗೇಲ್ ತಮ್ಮ 2025ರ ಒಂದೇ ಒಂದು ರೆಷಲ್ಯೂಷನ್ ಏನೆಂದರೆ ಸಿಕ್ಸ್ ಪ್ಯಾಕನ್ನು ಸ್ವಾಗತಿಸುವುದು ಎಂದಿದ್ದಾರೆ. ನನಗೆ ಕೆಲವು ವಾರಗಳನ್ನು ನೀಡಿ ನಾನು ಈ ಸಿಕ್ಸ್‌ಪ್ಯಾಕ್ ವಾಪಸ್ ತರಿಸುತ್ತೇನೆ ಎಂದು ಗೇಲ್ ಹೇಳಿಕೊಂಡಿದ್ದಾರೆ.
ವೆಸ್ಟ್ ಇಂಡಿಸ್ ಆಟಗಾರನಾಗಿದ್ದ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಭಾಗವಾಗಿ ಆಟವಾಡಿ ತಮ್ಮ ಸ್ಫೋಟಕ ಹೊಡೆತದ ಮೂಲಕ ಅಭಿಮಾನಿಗಳಿಗೆ ಉತ್ತಮ ಮನೋರಂಜನೆ ನೀಡಿದ್ದರು. 1999ರಿಂದ 2021ರವರೆಗೆ ವೆಸ್ಟ್ ಇಂಡಿಸ್ ತಂಡಕ್ಕಾಗಿ ಆಟವಾಡಿದ್ದು, ಯೂನಿವರ್ಸಲ್ ಬಾಸ್ ಎಂಬ ನಿಕ್ನೇಮ್ ಹೊಂದಿದ್ದಾರೆ.