ಬೆಂಗಳೂರು[ಮಾ.02]: ಕ್ರಿಕೆಟ್ ಜಗತ್ತಿನಲ್ಲಿ ಫೆಬ್ರವರಿ 2019 ಹಲವು ದಾಖಲೆಗಳಿಗೆ ಸಾಕ್ಷಿಯಾದವು. ಅದರಲ್ಲೂ ದಾಖಲೆ ನಿರ್ಮಾಣದಲ್ಲಿ ಬ್ಯಾಟ್ಸ್’ಮನ್’ಗಳೇ ಹೆಚ್ಚಿನ ಯಶಸ್ಸನ್ನು ಕಂಡರು. ವೆಸ್ಟ್ ಇಂಡೀಸ್-ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಹಲವು ಅಪರೂಪದ ದಾಖಲೆಗಳಿಗೂ ಸಾಕ್ಷಿಯಾಯಿತು.
2019ರ ಫೆಬ್ರವರಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್, ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಹಾಗೂ ಕ್ರಿಕೆಟ್ ಜನಕ ಇಂಗ್ಲೆಂಡ್ ವಿನೂತನ ವಿಶ್ವದಾಖಲೆ ಬರೆಯುವಲ್ಲಿ ಸಫಲತೆ ಕಂಡಿದೆ.

*4 ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್: ಆಫ್ಘಾನಿಸ್ತಾನ[278/3]

ಇತ್ತೀಚೆಗಷ್ಟೇ ನಡೆದ ಆಫ್ಘಾನಿಸ್ತಾನ-ಐರ್ಲೆಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿಗೆ ಭಾರತ ಇದೇ ಮೊದಲ ಬಾರಿಗೆ ಆತಿಥ್ಯ ವಹಿಸಿತ್ತು. ಈ ಟಿ20 ಸರಣಿಯನ್ನು ಆಫ್ಘಾನಿಸ್ತಾನ 3-0ರಿಂದ ಜಯಿಸಿತ್ತು. 
ಅದರಲ್ಲೂ ಎರಡನೇ ಟಿ20 ಪಂದ್ಯದಲ್ಲಿ ಆಫ್ಘಾನಿಸ್ತಾನ 278/3 ರನ್ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿತ್ತು. ಆಫ್ಘಾನಿಸ್ತಾನದ ಹಜರತುಲ್ಲಾ ಝಝಾಯಿ ಹಾಗೂ ಉಸ್ಮಾನ್‌ ಘನಿ ಮೊದಲ ವಿಕೆಟ್’ಗೆ 236 ರನ್’ಗಳ ಜತೆಯಾಟವಾಡುವ ಮೂಲಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ವಿಶ್ವದಾಖಲೆ ಬರೆದಿತ್ತು. ಹಜರತುಲ್ಲಾ ಝಝಾಯಿ ಕೇವಲ 62 ಎಸೆತಗಳಲ್ಲಿ ಅಜೇಯ 162 ರನ್ ಸಿಡಿಸಿದ್ದರು. ಅವರ ಈ ಇನ್ನಿಂಗ್ಸ್’ನಲ್ಲಿ 16 ಸಿಕ್ಸರ್’ಗಳು ಸೇರಿದ್ದವು. ಈ ಮೂಲಕ ಝಝಾಯಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನ ಇನ್ನಿಂಗ್ಸ್’ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರ ಎನ್ನುವು ವಿಶ್ವದಾಖಲೆ ಬರೆದರು. ಅಲ್ಲದೇ ಚುಟುಕು ಕ್ರಿಕೆಟ್’ನಲ್ಲಿ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ 278/3 ರನ್ ಸಿಡಿಸುವ ಮೂಲಕ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಸಿಡಿಸಿದ ವಿಶ್ವದಾಖಲೆಗೆ ಪಾತ್ರವಾಯಿತು.

*3 ಏಕದಿನ ಕ್ರಿಕೆಟ್ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಗರಿಷ್ಠ ಸಿಕ್ಸರ್:[24]

ಕಳೆದ ವಾರವಷ್ಟೇ ಮುಕ್ತಾಯವಾದ ವೆಸ್ಟ್ ಇಂಡೀಸ್-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಸಿಕ್ಸರ್’ಗಳ ಸುರಿಮಳೆಯೇ ಸುರಿಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 8 ವಿಕೆಟ್ ಕಳೆದುಕೊಂಡು ಬರೋಬ್ಬರಿ 360 ರನ್ ಬಾರಿಸಿತ್ತು. ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಗೇಲ್ 12 ಸಿಕ್ಸರ್ ಸಹಿತ 135 ರನ್ ಸಿಡಿಸಿದ್ದರು. ಆ ಪಂದ್ಯದಲ್ಲಿ ವಿಂಡೀಸ್ 23 ಸಿಕ್ಸರ್ ಸಿಡಿಸಿ ದಾಖಲೆ ಬರೆದಿತ್ತು. ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಕ್ರಿಕೆಟ್ ಜನಕ ಇಂಗ್ಲೆಂಡ್ 4ನೇ ಏಕದಿನ ಪಂದ್ಯದಲ್ಲಿ ಯಶಸ್ವಿಯಾಗಿತ್ತು.  ಜೋಸ್ ಬಟ್ಲರ್[150] 15 ಸಿಕ್ಸರ್ ಸಹಿತ ಇಂಗ್ಲೆಂಡ್ ಬರೋಬ್ಬರಿ 24 ಸಿಕ್ಸರ್ ಸಿಡಿಸುವ ಮೂಲಕ ಇನ್ನಿಂಗ್ಸ್’ವೊಂದರಲ್ಲಿ ತಂಡವೊಂದು ಬಾರಿಸಿದ ಗರಿಷ್ಠ ಸಿಕ್ಸರ್ ಎನ್ನುವ ದಾಖಲೆಗೆ ಇಂಗ್ಲೆಂಡ್ ಪಾತ್ರವಾಯಿತು. ಅಲ್ಲದೆ ಈ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟಾರೆ 46 ಸಿಕ್ಸರ್ ಸಿಡಿಸುವ ಮೂಲಕ ವಿಶ್ವದಾಖಲೆ ಬರೆಯಿತು.

*2 ಒಂದೇ ಮೈದಾನಲ್ಲಿ ವಿರಾಟ್ ಕೊಹ್ಲಿ 2500 ರನ್..!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೆಬ್ರವರಿಯಲ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಪ್ರಸ್ತುತ ಮೂರೂ ಮಾದರಿಯ ಕ್ರಿಕೆಟ್’ನಲ್ಲಿ 50+ ಬ್ಯಾಟಿಂಗ್ ಸರಾಸರಿ ಹೊಂದಿರುವ ಏಕೈಕ ಕ್ರಿಕೆಟಿಗ ಎನಿಸಿರುವ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 72 ರನ್ ಸಿಡಿಸಿ ಮಿಂಚಿದರು. ಅವರ ಈ ಇನ್ನಿಂಗ್ಸ್’ನಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್’ಗಳು ಸೇರಿದ್ದವು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕಳೆದ 11 ಆವೃತ್ತಿಗಳಿಂದಲೂ ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ, ಚಿನ್ನಸ್ವಾಮಿ ಮೈದಾನದಲ್ಲಿ ಹಲವು ಸ್ಮರಣೀಯ ಇನ್ನಿಂಗ್ಸ್’ಗಳನ್ನು ಕಟ್ಟಿದ್ದಾರೆ. ಚಿನ್ನಸ್ವಾಮಿ ಮೈದಾನವು ವಿರಾಟ್ ಪಾಲಿನ ನೆಚ್ಚಿನ ಮೈದಾನಗಳಲ್ಲಿ ಒಂದಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಇದೇ ಮೈದಾನದಲ್ಲಿ ಟಿ20 ಕ್ರಿಕೆಟ್’ನಲ್ಲಿ 2500 ಪೂರೈಸಿದ ಸಾಧನೆ ಮಾಡಿದರು. ಈ ಮೂಲಕ ಟಿ20 ಕ್ರಿಕೆಟ್’ನಲ್ಲಿ ಮೈದಾನವೊಂದರಲ್ಲಿ ಗರಿಷ್ಠ ರನ್[2500] ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೆ ಭಾಜನರಾದರು.

*1 ಕ್ರಿಸ್ ಗೇಲ್: 500 ಸಿಕ್ಸರ್

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಪಾಕಿಸ್ತಾನದ ಬ್ಯಾಟ್ಸ್’ಮನ್ ಶಾಹಿದ್ ಅಫ್ರಿದಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಈಗಾಗಲೇ 2 ಶತಕ ಹಾಗೂ ಒಂದು ಅರ್ಧಶತಕ ಸಿಡಿಸಿರುವ ಗೇಲ್ ದ್ವಿಪಕ್ಷೀಯ ಸರಣಿಯೊಂದರಲ್ಲಿ ಗರಿಷ್ಠ ಸಿಕ್ಸರ್[25] ಬಾರಿಸಿದ ಆಟಗಾರ ಎನ್ನುವ ವಿಶ್ವದಾಖಲೆಯನ್ನು ಬರೆದಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್’ನಲ್ಲಿ 10+ ಸಿಕ್ಸರ್’ಗಳನ್ನು 4 ಬಾರಿಸಿ ಬಾರಿಸಿದ ಏಕೈಕ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಗೇಲ್ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.