* ಯುಎಇ ಚರಣದ ಐಪಿಎಲ್‌ನಿಂದ ಹಿಂದೆ ಸರಿದ ಕ್ರಿಸ್‌ ವೋಕ್ಸ್‌* ಇಂಗ್ಲೆಂಡ್‌ನ ಮಲಾನ್‌, ಬೇರ್‌ಸ್ಟೋವ್ ಹಾಗೂ ವೋಕ್ಸ್‌ ಐಪಿಎಲ್‌ಗೆ ಚಕ್ಕರ್* ಐಪಿಎಲ್‌ನಲ್ಲಿ ಹಿಂದೆ ಸರಿಯಲು ಕಾರಣ ಬಿಚ್ಚಿಟ್ಟ ವೋಕ್ಸ್

ಲಂಡನ್‌(ಸೆ.14): ಇಂಡಿಯನ್‌ ಪ್ರೀಮಿಯರ್ ಲೀಗ್, ಟಿ20 ವಿಶ್ವಕಪ್ ಮತ್ತು ಆ್ಯಷಸ್‌ ಸರಣಿ ಹೀಗೆ ಸತತವಾಗಿ ಮೂರು ಸರಣಿಯಲ್ಲಿ ಪಾಲ್ಗೊಳ್ಳುವುದು ನನ್ನ ಪಾಲಿಗೆ ಕಠಿಣವಾಗಿತ್ತು. ಹೀಗಾಗಿ ಐಪಿಎಲ್‌ನಿಂದ ಹಿಂದೆ ಸರಿಯುವ ತೀರ್ಮಾನ ಕೈಗೊಂಡಿರುವುದಾಗಿ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್‌ ತಿಳಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ವೋಕ್ಸ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಆದರೆ ಇದೀಗ ಸಹ ಆಟಗಾರರಾದ ಜಾನಿ ಬೇರ್‌ಸ್ಟೋವ್‌ ಹಾಗೂ ಡೇವಿಡ್ ಮಲಾನ್ ಅವರಂತೆ ಕ್ರಿಸ್‌ ವೋಕ್ಸ್‌ ಕೂಡಾ ಯುಎಇ ಚರಣದ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಟಿ20 ವಿಶ್ವಕಪ್‌ ತಂಡದಲ್ಲಿ ನನಗೆ ಸ್ಥಾನ ಸಿಕ್ಕಿದೆ. ಇದರ ನಡುವೆ ಐಪಿಎಲ್‌ ವೇಳಾಪಟ್ಟಿ ಕೂಡಾ ಋತುವಿನ ಕೊನೆಯಲ್ಲೇ ನಿಗದಿಯಾಗಿದೆ ಎಂದು ದ ಗಾರ್ಡಿಯನ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Ind vs Eng ಮ್ಯಾಂಚೆಸ್ಟರ್ ಟೆಸ್ಟ್‌ ರದ್ದು: ಕೊನೆಗೂ ತುಟಿಬಿಚ್ಚಿದ ಕಿಂಗ್ ಕೊಹ್ಲಿ

ಟಿ20 ವಿಶ್ವಕಪ್ ಹಾಗೂ ಆ್ಯಷಸ್‌ ಸರಣಿ ನಡುವೆ ಹೆಚ್ಚಿನ ಅಂತರವಿಲ್ಲ. ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ನಾನು ಇಷ್ಟಪಡುತ್ತೇನೆ. ಒಂದು ಪಡೆದುಕೊಳ್ಳಬೇಕಾದರೆ, ಮತ್ತೊಂದು ಕೈಬಿಡಲೇಬೇಕಾಗುತ್ತದೆ ಎಂದು ವೋಕ್ಸ್ ಹೇಳಿದ್ದಾರೆ

ಬಹುನಿರೀಕ್ಷಿತ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ಅಕ್ಟೋಬರ್ 15ರವರೆಗೆ ನಡೆಯಲಿದೆ. ಇದಾಗಿ ಎರಡು ದಿನ ಕಳೆಯುವಷ್ಟರಲ್ಲಿ ಅಂದರೆ ಅಕ್ಟೋಬರ್ 17ರಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 23ರಿಂದ ಸೂಪರ್ 12 ಹಂತದ ಪಂದ್ಯಗಳು ಜರುಗಲಿದ್ದು, ಫೈನಲ್ ಪಂದ್ಯ ನವೆಂಬರ್ 14ರಂದು ನಿಗದಿಯಾಗಿದೆ. ಇದಾದ ಬಳಿಕ ಆಸ್ಟ್ರೇಲಿಯಾದಲ್ಲಿ ಆ್ಯಷಸ್‌ ಸರಣಿ ಜರುಗಲಿದೆ.