ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳನ್ನು ನಡೆಸಲು ಕೆಎಸ್‌ಸಿಎ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಹಿಂದಿನ ಕಾಲ್ತುಳಿತದ ಘಟನೆ ಹಾಗೂ ವಿರಾಟ್ ಕೊಹ್ಲಿ ಆಡುವ ಸಾಧ್ಯತೆಯಿಂದಾಗಿ, ಸುರಕ್ಷತಾ ಪರಿಶೀಲನೆಗಾಗಿ ಸಮಿತಿ ರಚಿಸಲಾಗಿದೆ.

ಬೆಂಗಳೂರು: ಕರ್ನಾಟಕ ಕ್ರಿಕೆಟ್‌ನ ಪುಣ್ಯಭೂಮಿ ಎಂದೇ ಕರೆಸಿಕೊಳ್ಳುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್‌ ಪಂದ್ಯಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಸಿದ್ಧತೆ ನಡೆಸುತ್ತಿದೆ. ಬುಧವಾರದಿಂದ ಆರಂಭಗೊಳ್ಳಲಿರುವ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ನಿಗದಿಯಾಗಿವೆ. ಆದರೆ ಪಂದ್ಯಕ್ಕೆ ಬೇಕಿರುವ ಅನುಮತಿಗಾಗಿ ಸರ್ಕಾರಕ್ಕೆ ಕೆಎಸ್‌ಸಿಎ ಮನವಿ ಮಾಡಿದ್ದು, ಇನ್ನೂ ಪರಿಶೀಲನೆ ಹಂತದಲ್ಲಿದೆ. ಮಂಗಳವಾರ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.

ಕಳೆದ ಜೂನ್‌ನಲ್ಲಿ ಕ್ರೀಡಾಂಗಣ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು. ಆ ಬಳಿಕ ಕ್ರೀಡಾಂಗಣದಲ್ಲಿ ಕೆಲವು ರಾಜ್ಯ, ರಾಷ್ಟ್ರೀಯ ಮಟ್ಟದ ಪಂದ್ಯಗಳು ನಡೆದಿವೆ. ಆದರೆ ಈ ಬಾರಿ ವಿಜಯ್‌ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ತಂಡದ ಪರ ವಿರಾಟ್‌ ಕೊಹ್ಲಿ ಆಡುವ ಸಾಧ್ಯತೆ ಇರುವುದರಿಂದ ಪಂದ್ಯಕ್ಕೆ ವಿಶೇಷ ಅನುಮತಿ ಅಗತ್ಯವಿತ್ತು. ಈ ಬಗ್ಗೆ ಸರ್ಕಾರದ ಜೊತೆಗೆ ಕೆಎಸ್‌ಸಿಎ ನಿರಂತರ ಮಾತುಕತೆಯಲ್ಲಿದೆ. ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ನೇತೃತ್ವದ ಕೆಎಸ್‌ಸಿಎ ಸಮಿತಿ ರಾಜ್ಯ ಸರ್ಕಾರದ ಜೊತೆ ಹಲವು ಬಾರಿ ಚರ್ಚೆಯನ್ನೂ ನಡೆಸಿದೆ. ಆದರೆ ಅನುಮತಿ ಮಾತ್ರ ಇನ್ನೂ ಸಿಕ್ಕಿಲ್ಲ.

ಒಂದು ವೇಳೆ ಪಂದ್ಯ ನಡೆಸಲು ಅನುಮತಿ ಸಿಕ್ಕರೂ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಿಸಲು ಸಾಧ್ಯವಿಲ್ಲ. ಈ ಬಗ್ಗೆ ಕನ್ನಡಪ್ರಭ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ, ‘ಪಂದ್ಯ ನಡೆಸಲು ಸರ್ಕಾರದಿಂದ ಅನುಮತಿ ಇನ್ನಷ್ಟೇ ಸಿಗಬೇಕಿದೆ. ವಿರಾಟ್‌ ಕೊಹ್ಲಿ ಆಡುವುದರಿಂದ ಪಂದ್ಯಕ್ಕೆ ವಿಶೇಷ ಅನುಮತಿ ಬೇಕಿದೆ. ಅದಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅನುಮತಿ ಸಿಕ್ಕರೆ ಪ್ರೇಕ್ಷಕರಿಲ್ಲದೆ ಪಂದ್ಯ ನಡೆಸಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ. ಇನ್ನು, ಕ್ರೀಡಾಂಗಣದ ಹೊರಗಡೆಯೂ ಪ್ರೇಕ್ಷಕರು ಸೇರದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

----

ಅಗ್ನಿಶಾಮಕ, ಪೊಲೀಸ್‌ ಆಯುಕ್ತರಿಂದ ಪರಿಶೀಲನೆ

ಪಂದ್ಯ ನಡೆಸುವ ಸಂಬಂಧ ಸೋಮವಾರ ಬೆಂಗಳೂರು ಆಯುಕ್ತ ಸೀಮಂತ್‌ ಕುಮಾರ್‌, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಅಧಿಕಾರಿಗಳೂ ಕ್ರೀಡಾಂಗಣಕ್ಕೆ ಆಗಮಿಸಿ ಸುರಕ್ಷತೆ ಬಗ್ಗೆ ಪರಿಶೀಲನೆ ಮಾಡಿದರು.

--ಪ್ರೇಕ್ಷಕರಿಗೆ ವ್ಯವಸ್ಥೆ ಈಗ ಕಷ್ಟ: ಕೆಎಸ್‌ಸಿಎ

‘ಚಿನ್ನಸ್ವಾಮಿಯಲ್ಲಿ ಪ್ರೇಕ್ಷಕರಿಗೆ ಅನುಮತಿ ನೀಡಬೇಕೆಂದು ಪ್ರಯತ್ನಿಸುತ್ತಿದ್ದೇವೆ. ಆದರೆ ಸಮಯದ ಅಭಾವವಿರುವ ಕಾರಣ, ಪ್ರೇಕ್ಷಕರ ಪ್ರವೇಶಕ್ಕೆ ವ್ಯವಸ್ಥೆ ಮಾಡುವುದು ಕಷ್ಟ. ಪಂದ್ಯಕ್ಕೆ ಅನುಮತಿ ಸಿಕ್ಕಿ, ಪ್ರೇಕ್ಷಕರ ಪ್ರವೇಶಕ್ಕೂ ಸರ್ಕಾರ ಸಮ್ಮತಿಸಿದರು ಕೂಡಾ ಸದ್ಯದ ಮಟ್ಟಿಗೆ ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಅನುಮತಿಸುವುದಿಲ್ಲ. ಮುಂದೆ ಸೂಕ್ತ ಸಿದ್ಧತೆ ನಡೆಸಿ ಅನುಮತಿ ಕೊಡುತ್ತೇವೆ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ ಸ್ಪಷ್ಟಪಡಿಸಿದ್ದಾರೆ.

----

ಪಂದ್ಯಕ್ಕೆ ಅನುಮತಿ ಕುರಿತು ಪರಿಶೀಲನೆಗೆ ಸಮಿತಿ ರಚನೆ 

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತು ಪರಿಶೀಲಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಆಯಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಪದಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿ.24ರಂದು ವಿಜಯ್ ಹಜಾರೆ ಕ್ರಿಕೆಟ್ ಪಂದ್ಯ ನಡೆಸಲು ಅನುಮತಿ ನೀಡುವಂತೆ ಕೆಎಸ್‌ಸಿಎ ಮನವಿ ಮಾಡಿದೆ. ಆದರೆ, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ. ಪಂದ್ಯ ಮಾತ್ರ ನಡೆಸುತ್ತೇವೆ ಎಂದು ಅವರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರ, ಕ್ರೀಡಾಪಟುಗಳ ಸುರಕ್ಷತೆಯ ಹಿತದೃಷ್ಟಿಯಿಂದ ಜಿಬಿಎ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಲೋಕೋಪಯೋಗಿ, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ, ಆರೋಗ್ಯ ಇಲಾಖೆಯನ್ನೊಳಗೊಂಡ ಸಮಿತಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿ, ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಸಮಿತಿ ನೀಡುವ ವರದಿ ಆಧರಿಸಿ, ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ.ಶರತ್ ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ ಆರ್.ಹಿತೇಂದ್ರ ಹಾಗೂ ಕೆಎಸ್‌ಸಿಎ ಪದಾಧಿಕಾರಿಗಳು ಉಪಸ್ಥಿತರಿದ್ದರು.

--

ಮತ್ತೆ ಅನಾಹುತ ಆಗದಂತೆ ಕ್ರೀಡಾಂಗಣದಲ್ಲಿ ಹೋಮ

ಜೂನ್‌ನಲ್ಲಿ ನಡೆದ ಕಾಲ್ತುಳಿತದಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ಹೀಗಾಗಿ ಕ್ರೀಡಾಂಗಣದಲ್ಲಿ ಮತ್ತೆ ಇನ್ಯಾವುದೇ ಅನಾಹುತ ಆಗದಂತೆ ಪ್ರಾರ್ಥಿಸಿ ಕೆಎಸ್‌ಸಿಎಯಿಂದ ಸೋಮವಾರ ಹೋಮ ನಡೆಯಿತು. ಕ್ರೀಡಾಂಗಣದ ಸಭಾಂಗಣದಲ್ಲಿ ಕೆಎಸ್‌ಸಿಎ ಅಧಿಕಾರಿಗಳು ಸುದರ್ಶನ, ಗಣಪತಿ ಹೋಮ ನೆರವೇರಿಸಿದರು.