ಚೆನ್ನೈ(ಫೆ.08): ತವರಿನ ಪಿಚ್‌ನಲ್ಲಿ ಮೆರೆದಾಡಿದ ರವಿಚಂದ್ರನ್ ಅಶ್ವಿನ್‌(61/6) ಇಂಗ್ಲೆಂಡ್‌ ಪಾಲಿಗೆ ಎರಡನೇ ಇನಿಂಗ್ಸ್‌ನಲ್ಲಿ ಸಿಂಹಸ್ವಪ್ನವಾಗಿ ಕಾಡುವ ಮೂಲಕ ಗಮನ ಸೆಳೆದಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡ 178 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು 420 ರನ್‌ಗಳ ಸವಾಲಿನ ಗುರಿ ನೀಡಿದೆ.

ಹೌದು, ಭಾರತವನ್ನು ಕೇವಲ 337 ರನ್‌ಗಳಿಗೆ ಆಲೌಟ್‌ ಮಾಡಿ ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಇಂಗ್ಲೆಂಡ್ ತಂಡಕ್ಕೆ ನೆಲಕಚ್ಚಿ ಆಡಲು ಭಾರತೀಯ ಬೌಲರ್‌ಗಳು ಅವಕಾಶ ನೀಡಲಿಲ್ಲ. ಅದರಲ್ಲೂ ತವರಿನ ಪಿಚ್‌ನ ಲಾಭ ಪಡೆದ ಅಶ್ವಿನ್ 6 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ ಬೆನ್ನೆಲುಬನ್ನೇ ಮುರಿದರು. ಇದರೊಂದಿಗೆ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 28ನೇ ಬಾರಿಗೆ 5+ ವಿಕೆಟ್‌ ಕಬಳಿಸಿದ ಸಾಧನೆ ಮಾಡಿದರು. 

ಅಶ್ವಿನ್‌ ಝಲಕ್; ರೋಚಕ ಘಟ್ಟದತ್ತ ಚೆನ್ನೈ ಟೆಸ್ಟ್‌

ಇಂಗ್ಲೆಂಡ್ ತಂಡದ ಪರ ನಾಯಕ ಜೋ ರೂಟ್‌ 40 ರನ್‌ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು 30+ ರನ್‌ ದಾಖಲಿಸಲು ಭಾರತೀಯ ಬೌಲರ್‌ಗಳು ಅವಕಾಶ ಮಾಡಿಕೊಡಲಿಲ್ಲ. ಟೀಂ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್‌ 6 ವಿಕೆಟ್ ಪಡೆದರೆ, ಶಹಬಾಜ್ ನದೀಮ್‌ 2 ಹಾಗೂ ವೇಗಿಗಳಾದ ಜಸ್ಪ್ರೀತ್‌ ಬುಮ್ರಾ ಹಾಗೂ ಇಶಾಂತ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.