Asianet Suvarna News Asianet Suvarna News

ನಿವೃತ್ತಿ ಘೋಷಣೆ ಮಾಡಿ ಟ್ವೀಟ್ ಮಾಡಿದ ಕೆಲ ನಿಮಿಷದಲ್ಲೇ ನಿರ್ಧಾರ ಬದಲಿಸಿದ ಅಂಬಟಿ ರಾಯುಡು!

ಐಪಿಎಲ್ 2022 ನನ್ನ ಕೊನೆಯ ಐಪಿಎಲ್ ಟೂರ್ನಿ ಎಂದು 36 ವರ್ಷದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಟ್ವೀಟ್ ಮಾಡಿದ ಕೆಲ ನಿಮಿಷದಲ್ಲಿಯೇ, ಈ ಟ್ವೀಟ್ ಅನ್ನು ಡಿಲೀಟ್ ಮಾಡಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ ಮೆಂಟ್ ಮಧ್ಯಪ್ರವೇಶ ಮಾಡಿದ್ದರಿಂದ ರಾಯುಡು ತಮ್ಮ ನಿರ್ಧಾರ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.
 

Chennai Super Kings Batsman Ambati Rayudu tweets IPL retirement announcement withdraws quickly san
Author
Bengaluru, First Published May 14, 2022, 6:32 PM IST

ಚೆನ್ನೈ (ಮೇ. 14): ಚೆನ್ನೈ ಸೂಪರ್ ಕಿಂಗ್ಸ್ ( Chennai Super Kings) ತಂಡದ ಪ್ರಧಾನ ಬ್ಯಾಟ್ಸ್ ಮನ್ 36 ವರ್ಷದ ಅಂಬಟಿ ರಾಯುಡು (Ambati Rayudu) ಶನಿವಾರ ತಮ್ಮ ನಿವೃತ್ತಿಯ ಕುರಿತಾಗಿ ಮಾಡಿದ ಟ್ವೀಟ್ ಕೆಲ ಕ್ಷಣ ಕೋಲಾಹಲವನ್ನು ಎಬ್ಬಿಸಿತ್ತು. ಐಪಿಎಲ್ 2022 (IPL 2022) ನನ್ ಕೊನೆಯ ಐಪಿಎಲ್ ಎಂದು ಟ್ವೀಟ್ ಮಾಡಿದ ಕೆಲ ನಿಮಿಷದಲ್ಲಿಯೇ ರಾಯುಡು ಈ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು.

'ಇದು ನನ್ನ ಕೊನೆಯ ಐಪಿಎಲ್ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ನಾನು ಇದನ್ನು ಆಡುತ್ತಿದ್ದೇನೆ ಮತ್ತು 13 ವರ್ಷಗಳಿಂದ 2 ಶ್ರೇಷ್ಠ ತಂಡಗಳ ಭಾಗವಾಗಿ ಅದ್ಭುತ ಸಮಯವನ್ನು ಹೊಂದಿದ್ದೇನೆ. ಮುಂಬೈ ಇಂಡಿಯನ್ಸ್ ಮತ್ತು ಸಿಎಸ್‌ಕೆಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇದೊಂದು ಅದ್ಭುತ ಪ್ರಯಾಣ." ಎಂದು ರಾಯುಡು ಆರಂಭದಲ್ಲಿ ಟ್ವೀಟ್ (Tweet) ಮಾಡಿದ್ದರು.

ಹಿರಿಯ ಆಟಗಾರರೊಂದಿಗೆ ಗಲಾಟೆ, ತಂಡ ಸೀನಿಯರ್ ಪ್ಲೇಯರ್ ಗಳ ಜೊತೆ ವಾದ, ಸ್ವತಃ ಬಿಸಿಸಿಐ ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಈ ಹಿಂದೆ ಸುದ್ದಿಯಾಗಿದ್ದ ಅಂಬಟಿ ರಾಯುಡು ಮತ್ತೊಮ್ಮೆ ಇದೇ ಕಾರಣಕ್ಕಾಗಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. 

ನಿವೃತ್ತಿ ಕುರಿತಾಗಿ ಅಂಬಟಿ ರಾಯುಡು ಟ್ವೀಟ್ ಮಾಡಿದ 30 ನಿಮಿಷಗಳಲ್ಲಿಯೇ ಅದನ್ನು ಡಿಲೀಟ್ ಮಾಡಿದ್ದಾರೆ. ಮೂಲಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ ಮೆಂಟ್ ಈ ಕುರಿತಾಗಿ ಮಧ್ಯಪ್ರವೇಶ ಮಾಡಿದ್ದ ಬಳಿಕ ತಮ್ಮ ಟ್ವೀಟ್ ಅನ್ನು ರಾಯುಡು ಡಿಲೀಟ್ ಮಾಡಿದ್ದಾರೆ.

ಅಂಬಟಿ ರಾಯುಡು ತಮ್ಮ ಪೋಸ್ಟ್ ಅನ್ನು ಮಾಡಿದ ಬೆನ್ನಲ್ಲೇ ಮಾಜಿ ಆಟಗಾರರು ಹಾಗೂ ಅಭಿಮಾನಿಗಳು ಅವರ ಸಾಧನೆಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಟೀಮ್ ಇಂಡಿಯಾ ಮಾಜಿ ನಾಯಕ ಇರ್ಫಾನ್ ಪಠಾಣ್ ಕೂಡ ಟ್ವೀಟ್ ಮಾಡಿ, ಮೈದಾನದಲ್ಲಿ ರಾಯುಡು ಅವರ ಎನರ್ಜಿಯನ್ನು ಕಂಡು ನಾನು ಅವರ ಅಭಿಮಾನಿಯಾಗಿದ್ದೆ ಎಂದು ಬರೆದುಕೊಂಡಿದ್ದರು.

ಅಂಬಟಿ ರಾಯುಡು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೆಟ್ ಅಪ್ ನ ದೊಡ್ಡ ಭಾಗವಾಗಿದ್ದರು. ಹಾಲಿ ಚಾಂಪಿಯನ್ ಆಗಿದ್ದರೂ ಕೂಡ ಚೆನ್ನೈ ತಂಡ ಹಾಲಿ ಋತುವಿನ ದುರ್ಬಲ ತಂಡಗಳಲ್ಲಿ ಒಂದನಿಸಿಕೊಂಡಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಅತ್ಯಂತ ಕನಿಷ್ಠ ಮೊತ್ತ ಹಾಗೂ ಐಪಿಎಲ್ ಇತಿಹಾಸದ ತನ್ನ ಅತಿದೊಡ್ಡ ಸೋಲನ್ನು ಕಾಣುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಆವೃತ್ತಿಯ ಐಪಿಎಲ್ ನಿಂದ ಹೊರಬಿದ್ದ 2ನೇ ತಂಡ ಎನಿಸಿಕೊಂಡಿತ್ತು. ಐಪಿಎಲ್ ನ ಪವರ್ ಹೌಸ್ ತಂಡ ಈ ಬಾರಿ ತನ್ನ ಕೆಟ್ಟ ನಿರ್ವಹಣೆಯಿಂದ ಸುದ್ದಿಯಾಗಿದೆ. ನಾಯಕ ರವೀಂದ್ರ ಜಡೇಜಾ ಟೂರ್ನಿಯ ಮಧ್ಯದಲ್ಲಿಯೇ ನಾಯಕತ್ವವನ್ನು ತೊರೆದು ಮಾಜಿ ನಾಯಕ ಎಂಎಸ್ ಧೋನಿಗೆ ಇದನ್ನು ಹಸ್ತಾಂತರ ಮಾಡಿದ್ದರು.

ಹಾಗಂತ ಅಂಬಟಿ ರಾಯುಡು ತಮ್ಮ ನಿವೃತ್ತಿಯನ್ನು ಘೋಷಿಸಿ ಅದನ್ನು ಹಿಂತೆಗೆದುಕೊಂಡಿದ್ದು ಇದೇ ಮೊದಲೇನಲ್ಲ. 2019ರಲ್ಲಿ ರಾಯುಡು ಅವರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡದ ಹಿನ್ನಲೆಯಲ್ಲಿ ಸಿಟ್ಟಾಗಿದ್ದ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿ ಬಿಟ್ಟಿದ್ದರು. ಬಳಿಕ ತಮ್ಮ ನಿರ್ಧಾರಕ್ಕೆ ಯೂ ಟರ್ನ್ ಹೊಡೆದು ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ ಗೆ ಮರಳಿದ್ದರು. ಅಂಬಟಿ ರಾಯುಡು ಐಪಿಎಲ್ ನ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರು. ಅದರಲ್ಲೂ ಐದು ಬಾರಿ ಅವರು ಐಪಿಎಲ್ ಟ್ರೋಫಿ ವಿಜೇತ ತಂಡದ ಭಾಗವಾಗಿದ್ದ ಆಟಗಾರ. ಕೇವಲ ರೋಹಿತ್ ಶರ್ಮ ಮಾತ್ರವೇ ರಾಯುಡುಗಿಂತ ಹೆಚ್ಚಿನ ಐಪಿಎಲ್ ಪ್ರಶಸ್ತಿ ಗೆದ್ದಿದ್ದಾರೆ. 2013, 2015 ಹಾಗೂ 2017ರಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಟ್ರೋಫಿ ಜಯಿಸಿದ್ದರೆ 2018 ಹಾಗೂ 2021ರಲ್ಲಿ ಚೆನ್ನೈ ಪರವಾಗಿ ಗೆದ್ದಿದ್ದರು. ಇಂಡಿಯನ್ ಕ್ರಿಕೆಟ್ ಲೀಗ್ ನಲ್ಲಿ ಆಡಿದ್ದ ಕಾರಣಕ್ಕಾಗಿ ಮೊದಲ ಎರಡು ವರ್ಷದ ಐಪಿಎಲ್ ಗೆ ರಾಯುಡು ನಿಷೇಧ ಹೊಂದಿದ್ದರು.

Follow Us:
Download App:
  • android
  • ios